
ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾರವರ ಪವಿತ್ರ ಮೀಲಾದುನ್ನಬಿ ಪ್ರಯುಕ್ತ ಸರ್ಕಾರವು ಸಾರ್ವತ್ರಿಕ ರಜೆಯನ್ನು ಆಗಸ್ಟ್ ೨೬ರಂದು ನಿಗದಿಪಡಿಸಿದೆ. ಆದರೆ, ಚಂದ್ರದರ್ಶನದಲ್ಲಿ ಉಂಟಾದ ವ್ಯತ್ಯಾಸದ ಹಿನ್ನೆಲೆಯಲ್ಲಿ ಆಗಸ್ಟ್ ೨೫, ಮಂಗಳವಾರದಂದು ಮೀಲಾದುನ್ನಬಿಯನ್ನು ಆಚರಿಸಬೇಕೆಂದು ಜಿಲ್ಲೆಯ ಖಾಝಿಗಳು ನಿರ್ಧರಿಸಿರುತ್ತಾರೆ.
ಆದ್ದರಿಂದ, ಆಗಸ್ಟ್ ೨೬ರಂದು ನಿಗದಿಪಡಿಸಿರುವ ಸಾರ್ವತ್ರಿಕ ರಜೆಯನ್ನು ಆಗಸ್ಟ್ ೨೫, ಮಂಗಳವಾರದಂದು ಮೀಲಾದುನ್ನಬಿ ಪ್ರಯುಕ್ತ ರಜೆಯಾಗಿ ಬದಲಾಯಿಸಿ ನೀಡುವಂತೆ ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಅವರಿಗೆ ಸುನ್ನೀ ಕೋ-ಓರ್ಡಿನೇಷನ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಅದೇ ರೀತಿ, ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ರಿಝ್ವಾನ್ ಅರ್ಷದ್ ರವರಿಗೆ ಈ ಕುರಿತು ಇ-ಮೇಲ್ ಮೂಲಕವೂ ಮನವಿ ಸಲ್ಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಯಿತು.
ಸುನ್ನೀ ಕೋ-ಓರ್ಡಿನೇಷನ್ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಕೆ. ಎ. ಅಬ್ದುರ್ರಹ್ಮಾನ್ ರಝ್ವಿ ಅಲ್ ಫುರ್ಖಾನಿ ಕಲ್ಕಟ್ಟ ರವರ ನೇತೃತ್ವದಲ್ಲಿ ನಡೆದ ನಿಯೋಗದಲ್ಲಿ ಅಡ್ವೊಕೇಟ್ ಹಬೀಬ್ ಅಲಿ ಅಂಬಾಗಿಲು, ಸುಭಾನ್ ಅಹ್ಮದ್ ಹೊನ್ನಾಳ, ವಸೀಮ್ ಬಾಷಾ ಕುಂದಾಪುರ, ಶೇಖ್ ನಹೀಮ್ ಕಟಪಾಡಿ ಹಾಗೂ ಅಶ್ರಫ್ ತೋನ್ಸೆ ಉಪಸ್ಥಿತರಿದ್ದರು.
































