
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಫೆ,9- ವೀರಶೈವ ಲಿಂಗಾಯತ ಧರ್ಮ ಸ್ಥಾಪಕ ಜಗದ್ಗುರು ರೇಣುಕಾಚಾರ್ಯರ ಜಯಂತಿ ಮಾ.1 ರಂದು ನಡೆಯಲಿದ್ದು. ಇದರ ಸಿದ್ಧತೆಗಾಗಿ ಪೂರ್ವಭಾವಿ ಸಭೆ ವೀರಶೈವ ಲಿಂಗಾಯತ ಸಮಾಜದಿಂದ ನಿನ್ನೆ ಸಂಜೆ ಇಲ್ಲಿನ ಬಸವೇಶ್ವರ ನಗರದ ಸಂಗಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.
ಸಮಿತಿಯ ಸಂಚಾಲಕ ಎಂ. ಚಂದ್ರಮೌಳಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಚಾರ ಸಮಿತಿ, ಹಣಕಾಸು ಸಮಿತಿ, ರಚನೆ, ಕಾರ್ಯಕ್ರಮದ ನಿರೂಪಣೆಯನ್ನು ಈ ಬಾರಿ ಮಹಿಳೆಯರಿಂದಲೇ ನಡೆಸುವುದು, ಸಿದ್ದಾಂತ ಶಿಖಾಮಣಿ ಪಠಣೆ, ಸಿದ್ಧಾಂತ ಶಿಖಾಮಣಿ ಸ್ಪರ್ಧೆಯಲ್ಲಿ ಆಯ್ಕೆಯಾದ 9 ಶಾಲೆಗಳ 13 ವಿದ್ಯಾರ್ಥಿಗಳಿಗೆ ಸನ್ಮಾನ, ಸನಾತನ ಧರ್ಮ ಪ್ರಚಾರಕರು, ಸಮಾಜಕ್ಕೆ ಸೇವೆ ಮಾಡುವವರಿಗೆ ಸನ್ಮಾನಿಸಬೇಕೆಂದು ತೀರ್ಮಾನಿಸಲಾಯಿತು.
ನಗರದ ಮರಿಸ್ವಾಮಿ ಮಠ, ತಾಳೂರ್ ರಸ್ತೆ, ಕುವೆಂಪು ನಗರ, ಶ್ರೀಧರಗಡ್ಡೆ, ಬೆಳಗಲ್ಲು, ಮೋಕಾ ಇನ್ನಿತರಡೆ ಸಭೆ ನಡೆಸಿ ಸಮಾಜದವರನ್ನು ಆಮಂತ್ರಿಸುವುದು. ಶಾಲೆಗಳಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಫೋಟೋಗಳನ್ನು ವಿತರಿಸುವುದು, ಪ್ರಸಾದ ವ್ಯವಸ್ಥೆ ಕುರಿತು ತೀರ್ಮಾನಿಸಲಾಯಿತು.
ವೀರಶೈವ ಲಿಂಗಾಯತ ಸಮಾಜದ ಸರ್ವ ಭಾಂಧವರಿಂದ ತನು ಮನ ಧನ ಅರ್ಪಿಸಿ ಕಾರ್ಯಕ್ರಮ ಯಶಸ್ವಿಗೆ ಮನವಿಮಾಡಲಾಯ್ತು. ಅನೇಕರು ಸಲಹೆ ಸೂಚನೆಗಳನ್ನು ನೀಡಿದರು.






















