Home ಜಿಲ್ಲೆ ಮಂಗಳೂರು ಮಾ.೧೧-೧೫; ಕಪ್ಪುಪಟ್ಟಿ ಧರಿಸಿ ಮುಷ್ಕರ; ಆ.೧೬; ಸರ್ಕಾರಿ ಆಸ್ಪತ್ರೆಗಳು ಬಂದ್- ವೈದ್ಯಾಧಿಕಾರಿಗಳ ಸಂಘ ಎಚ್ಚರಿಕೆ

ಮಾ.೧೧-೧೫; ಕಪ್ಪುಪಟ್ಟಿ ಧರಿಸಿ ಮುಷ್ಕರ; ಆ.೧೬; ಸರ್ಕಾರಿ ಆಸ್ಪತ್ರೆಗಳು ಬಂದ್- ವೈದ್ಯಾಧಿಕಾರಿಗಳ ಸಂಘ ಎಚ್ಚರಿಕೆ

oplus_2

ಪುತ್ತೂರು; ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಜಿಲ್ಲಾ ಸಂಘ, ಕರ್ನಾಟಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಸಂಘ ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ವೃಂದ ಸಂಘಗಳ ಜಂಟಿ ಆಶ್ರಯದಲ್ಲಿ ಪ್ರಮುಖವಾದ ೧೨ ಬೇಡಿಕೆಗಳನ್ನು ಮುಂದಿಟ್ಟಕೊಂಡು ಮಾ.೧೧ರಿಂದ ೧೫ ತನಕ ಕಪ್ಪುಪಟ್ಟಿ ಧರಿಸಿ ಮುಷ್ಕರ ನಡೆಸಲಿದ್ದೇವೆ. ಈ ಮುಷ್ಕರಕ್ಕೆ ಸರ್ಕಾರ ಸ್ಪಂಧಿಸದಿದ್ದಲ್ಲಿ ಮಾ.೧೬ರಿಂದ ಆಸ್ಪತ್ರೆಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ದೀಪಕ್ ರೈ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಮೊದಲ ಹಂತದಲ್ಲಿ ಕಪ್ಪುಪಟ್ಟಿ ಧರಿಸಿ ಕೇವಲ ತುರ್ತು ಚಿಕಿತ್ಸೆಗಳಿಗೆ ಮಾತ್ರ ಸ್ಪಂಧಿಸುವ ಕೆಲಸ ಮಾಡಲಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಒಂದು ವೇಳೆ ಸರ್ಕಾರ ಯಾವುದೇ ಸಹಮತ ವ್ಯಕ್ತಪಡಿಸದಿದ್ದರೆ ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳು ಬಂದ್ ಆಗಲಿವೆ ಎಂದು ಅವರು ಎಚ್ಚರಿಕೆ ನೀಡಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾಗಬೇಕಾದ ಔಷಧಿಗಳು ಸಮರ್ಪಕವಾಗಿ ಸರಬರಾಜುಗೊಳ್ಳುತ್ತಿಲ್ಲ. ಇದನ್ನು ತಕ್ಷಣ ಪೂರೈಕೆ ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮಗಳನ್ನು ಕಳೆದ ೫೩ ವರ್ಷಗಳಿಂದ ತಿದ್ದುಪಡಿಯಾಗದೆ ಉಳಿದಿದೆ. ಇದು ತಿದ್ದುಪಡಿಯಾಗಬೇಕು. ಜೇಷ್ಠತಾ ಪಟ್ಟಿಯನ್ನು ಕಾಲ ಕಾಲಕ್ಕೆ ಪ್ರಕಟಿಸಬೇಕು. ಅಧಿಕಾರಿ-ಸಿಬಂದಿಗಳಿಗೆ ಕಳೆದ ೫ ವರ್ಷಗಳಿಂದ ಮರೆಯಾಗಿರುವ ಮುಂಬಡ್ತಿ ನೀಡಬೇಕು. ವೈದ್ಯರಿಗೆ ಉನ್ನತ ವ್ಯಾಸಾಂಗಕ್ಕೆ ಅವಕಾಶ ನೀಡಬೇಕು. ಅವೈಜ್ಞಾನಿಕವಾಗಿರುವ ಕೌನ್ಸಿಲಿಂಗ್ ವರ್ಗಾವಣೆಯನ್ನು ಸಮರ್ಪಕಗೊಳಿಸಬೇಕು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿಗಳ ನೇಮಕಾತಿಗೆ ಆರೋಗ್ಯ ಇಲಾಖೆಯ ಎನ್-ಕೇಡರ್ ಹುದ್ದೆಗಳಿಗೆ ವೈದ್ಯರು ಹಾಗೂ ಅಧಿಕಾರಿ-ನೌಕರರನ್ನು ನೇಮಕ ಮಾಡಬೇಕು. ಇಲಾಖೆಯಲ್ಲಿ ಖಾಲಿ ಇರುವ ವೈದ್ಯಾಧಿಕಾರಿ ಹಾಗೂ ಇತರ ವೃಂದಗಳ ಹುದ್ದೆಗಳನ್ನು ಭರ್ತಿ ಮಾಡಬೇಕು. ಗುತ್ತಿಗೆ ವೈದ್ಯರು, ನೌಕರರು ಹಾಗೂ ಎನ್‌ಎಚ್‌ಎಂ ಗುತ್ತಿಗೆ ನೌಕರರಿಗೆ ಸೇವಾಭದ್ರತೆ ಮತ್ತು ಸೂಕ್ತ ವೇತನ ನೀಡಬೇಕು. ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ಸುಮಾರು ೬ ಸಾವಿರ ಅಧಿಕಾರಿ-ನೌಕರರಿಗೆ ತಿಂಗಳ ಮೊದಲ ವಾರದಲ್ಲಿ ವೇತನ ಪಾವತಿಸಬೇಕು. ಆರೋಗ್ಯ ಇಲಾಖೆಯ ವೈದ್ಯರಿಗೆ, ತಜ್ಞ ವೈದ್ಯರು ಹಾಗೂ ಸಿಬಂದಿಗಳಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಮಾದರಿಯಲ್ಲಿ ವೇತನ ನೀಡಬೇಕು ಹಾಗೂ ಸರ್ಕಾರಿ ವೈದ್ಯರಿಗೆ ತಮ್ಮ ಕರ್ತವ್ಯದ ಅವಧಿ ಮುಗಿದ ಬಳಿಕ ಖಾಸಗಿ ಸೇವೆಗೆ ಈ ಹಿಂದಿನಂತೆ ಅವಕಾಶ ನೀಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿಕೊಂಡು ಪ್ರತಿಭಟನೆ ನಡೆಸಲಿದ್ದೇವೆ ಎಂದು ಅವರು ತಿಳಿಸಿದರು.
ಒಂದಡೆ ನಮ್ಮ ಮೂಲಭೂತ ಅವಶ್ಯಕತೆಗಳನ್ನು ಸರ್ಕಾರ ಈಡೇರಿಸಿಲ್ಲ. ಇನ್ನೊಂದೆಡೆ ಔಷಧಿಗಳನ್ನು ಪೂರೈಕೆ ಮಾಡುವ ಬದಲು ನಿಮ್ಮ ಹಂತದಲ್ಲಿ ಔಷಧಿ ಖರೀದಿಸಿ ಎಂದು ಹೇಳುತ್ತಿದ್ದಾರೆ. ಆದರೆ ಅನುದಾನವಿಲ್ಲ. ಆಯುಷ್ಮಾನ್ ಫಂಡಿನಲ್ಲಿ ಶೇ೪೦ರಷ್ಟು ಔಷಧಿ ಖರೀದಿಗೆ ಬಳಕೆ ಮಾಡಲು ಆದೇಶವಿದೆ. ಇದರಿಂದ ಎಷ್ಟು ಖರೀದಿ ಮಾಡಬಹುದು ಎಂದು ಅವರು ಪ್ರಶ್ನಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ಜಿಲ್ಲಾ ಸಂಘದ ಉಪಾಧ್ಯಕ್ಷೆ ಡಾ.ನಮಿತಾ ನಾಯಕ್, ಉಪಾಧ್ಯಕ್ಷ ಡಾ.ಕೃಷ್ಣಾನಂದ, ಆರೋಗ್ಯ ಸಂರಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷೆ ಡಾ.ರೇಖಾ, ಸದಸ್ಯರಾದ ಡಾ. ಯದುರಾಜ್ ಮತ್ತು ಡಾ.ಸುಶ್ಮಿತಾ ಉಪಸ್ಥಿತರಿದ್ದರು.