ಮಾಹಿತಿ ಹಕ್ಕು ಕಾಯ್ದೆ ಬಳಸಿಕೊಂಡು ಬ್ಲ್ಯಾಕ್‍ಮೇಲ್

ಸಂಜೆವಾಣಿ ನ್ಯೂಸ್
ಮೈಸೂರು: ನ.23:-
ಮಾಹಿತಿ ಹಕ್ಕು ಕಾಯ್ದೆ ಬಳಸಿಕೊಂಡು ಬ್ಲ್ಯಾಕ್‍ಮೇಲ್ ಮಾಡುವವರನ್ನು ಅಧಿಕಾರಿ ವರ್ಗ ಪೆÇೀಷಿಸಬಾರದು. ಇಲ್ಲದಿದ್ದರೆ ಮುಂದೆ ಇಂತಹವರನ್ನು ಸದೆ ಬಡಿಯುವುದು ಕಷ್ಟವಾಗುತ್ತದೆ ಎಂದು ರಾಜ್ಯ ಮಾಹಿತಿ ಹಕ್ಕು ಆಯೋಗದ ನಾಲ್ವರು ಆಯುಕ್ತರು ಎಚ್ಚರಿಸಿದರು.

ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಸಂಘದ ಭವನದಲ್ಲಿ ಆಯೋಜಿಸಿದ್ದ ಸಾಧಕ ಪತ್ರಕರ್ತರಿಗೆ ಅಭಿನಂದನಾ ಸಮಾರಂಭ ಹಾಗೂ ಮಾಹಿತಿ ಆಯುಕ್ತರಿಂದ ಸಂವಾದ ಕಾರ್ಯಕ್ರಮದಲ್ಲಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ, ಕೆ. ಬದ್ರುದ್ದೀನ್, ಎಸ್. ರಾಜಶೇಖರ್, ಡಾ. ಹರೀಶ್ ಕುಮಾರ್ ಈ ಕುರಿತ ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು.

ಇದಕ್ಕೆ ಒಂದು ಉದಾಹರಣೆ ನೀಡಿ, ಮೈಸೂರಿನ ಪತ್ರಕರ್ತ ಎಂದು ಹೇಳಿಕೊಳ್ಳುವ ಓರ್ವರು ಬೆಂಗಳೂರಿನ ಎರಡೇ ಪ್ರದೇಶಗಳಲ್ಲಿನ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಪ್ರಕರಣಗಳನ್ನಷ್ಟೇ ಆಯೋಗದ ಮುಂದೆ ತರುತ್ತಿದ್ದರು.
ಈ ಬಗ್ಗೆ ಅನುಮಾನ ಬಂದು ಪ್ರಶ್ನಿಸಿದಾಗ ಅವರು ನೀಡಿದ ಉತ್ತರ ಸಮಾಧಾನಕರವಾಗಿರಲಿಲ್ಲ. ಇಂತಹವರಿಗೆ ಅಧಿಕಾರಿ ವರ್ಗದ ಪೆÇೀಷಣೆ ಇದ್ದಿರಲೇ ಬೇಕಲ್ಲವೇ ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರ ನಿರ್ಮೂಲನೆ ನಿಟ್ಟಿನಲ್ಲಿ ಜನರು ಜಾಗೃತರಾದರೆ ಕಡಿವಾಣ ಹಾಕಬಹುದಾಗಿದೆ. ಬೇಗ ಕೆಲಸ ಆಗಲಿ ಎಂದು ಜನರು ಸಹಾ ಲಂಚ ನೀಡುವುದು ಸರಿಯಲ್ಲ. ಈಗ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಆನ್‍ಲೈನ್ ಮೂಲಕವೂ ಅರ್ಜಿ ಹಾಕಬಹುದಾಗಿದೆ. ವಿಚಾರಣೆಯನ್ನೂ ಆನ್‍ಲೈನ್ ಮೂಲಕವೂ ಮಾಡುತ್ತಿದ್ದೇವೆ. ಇದೇ ವೇಳೆ ಕೆಲವರು ಮಾಹಿತಿ ಹಕ್ಕು ಕಾಯ್ದೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಅನುಮಾನ ಬಂದರೆ ಅಧಿಕಾರಿಗಳು ಸಂಬಂಧಿಸಿದವರಿಗೆ ಮಾಹಿತಿ ನೀಡಬೇಕೇ ಹೊರತು, ಈ ಬಗ್ಗೆ ತಾವೇ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದು ಎಚ್ಚರಿಸಿದರು.

ಮಾಹಿತಿ ಕೋರಿ ಅರ್ಜಿಗಳು ಬಂದೊಡನೆಯೇ ಅಧಿಕಾರಿಗಳು ಮಾಹಿತಿ ನೀಡಿದಲ್ಲಿ ದುರ್ಬಳಕೆ ತಡೆಯಬಹುದಾಗಿದೆ. ಕೆಲವೊಂದು ಸಂದರ್ಭದಲ್ಲಿ ವಿಳಂಬವಾಗಲು ಅಕ್ರಮ ನಂಟು ಸಹಾ ಕಾರಣವಾಗಿರಬಹುದು. ಈ ಕಾಯ್ದೆ ದುರ್ಬಳಕೆ ಆಗುತ್ತಿದೆ ಎಂಬ ಅನುಮಾನ ಕೆಲವೊಂದು ಸಂದರ್ಭಗಳಲ್ಲಿ ಉಂಟಾದರೂ ಸಹಾ ಅನುಕೂಲವಾಗುತ್ತಿದೆ ಎಂಬುದನ್ನು ಗಮನಿಸಬೇಕು. ಈ ಕಾಯ್ದೆ ಸದೃಢವಾಗಬೇಕಾದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಗುಣಮಟ್ಟದ ಅರ್ಜಿಗಳ ಸಂಖ್ಯೆ ಹೆಚ್ಚಾಗಿಸಬೇಕೆಂದು ಸಲಹೆ ನೀಡಿದರು.

ಆಯುಕ್ತ ರುದ್ರಣ್ಣ ಹರ್ತಿಕೋಟೆ ಮಾತನಾಡಿ, ಇಂದು ಊಹಾ ಪತ್ರಿಕೋದ್ಯಮಕ್ಕೆ ಸಿಲುಕಿ ಪತ್ರಿಕೋದ್ಯಮ ನರಳುತ್ತಿದೆ. ಇದು ತಪ್ಪಬೇಕು, ನೈಜ ಪತ್ರಿಕೋದ್ಯಮ ಅನುಸರಿಸಿದರೆ ಜನರಿಗೂ ಅನುಕೂಲವಾಗಲಿದೆ. ತನಿಖಾ ಪತ್ರಿಕೋದ್ಯಮ ಮೂಲೆಗೆ ಸೇರಿದೆ. ಇಂತಹ ಸಂದರ್ಭದಲ್ಲಿ ಆಡಳಿತ ಸುಧಾರಣೆಗೆ ಆರ್‍ಟಿಐ ದೊಡ್ಡ ಅಸ್ತ್ರವಾಗಬಲ್ಲದಾಗಿದೆ. ಆದರೆ, ಆರ್‍ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸುವ ಮೊದಲು ಪತ್ರಕರ್ತರು ನಿಯಮಗಳನ್ನು ಒಂದಷ್ಟು ಅಧ್ಯಯನ ಮಾಡುವುದು ಅಗತ್ಯ ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಕೆ.ದೀಪಕ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಂ.ಟಿ.ಯೋಗೇಶ್‍ಕುಮಾರ್, ದಯಾಶಂಕರ ಮೈಲಿ, ಎಚ್.ಎಸ್.ದಿನೇಶ್‍ಕುಮಾರ್, ಹಂಪಾ ನಾಗರಾಜ್, ಧರ್ಮಾಪುರ ನಾರಾಯಣ್, ಮಹೇಶ್ ಭಗೀರಥ, ಕೆ.ಬಿ.ರಮೇಶ್‍ನಾಯಕ, ಸುಧೀಂದ್ರಕುಮಾರ್, ವೀರಭದ್ರಪ್ಪ ಬಿಸ್ಲಳ್ಳಿ, ಶೇಖರ್ ಕಿರಗುಂದ, ಕಾರ್ತಿಕ್, ರಾಜ್ಯ ಸಮಿತಿಗೆ ನೂತನವಾಗಿ ಆಯ್ಕೆಯಾದ ಬಿ.ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.