ಮಾರ್ಟಳ್ಳಿ ಸಡಗರ ಸಂಭ್ರಮದ ಕ್ರಿಸ್‍ಮಸ್ ಆಚರಣೆ

ಸಂಜೆವಾಣಿ ವಾರ್ತೆ
ಹನೂರು ಡಿ 26 :-
ತಾಲೂಕಿನ ಮಾರ್ಟಳ್ಳಿ ಸಂತ ಲೂರ್ದು ಮಾತೆ ಚರ್ಚ್ ನಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಿಗ್ಗೆ ಕ್ರಿಸ್‍ಮಸ್ ಹಬ್ಬ ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ಆಚರಿಸಲಾಯಿತು.
ತಾಲೂಕಿನಲ್ಲಿ ಅತಿ ಹೆಚ್ಚು ಕ್ರೈಸ್ತರು ಇರುವ ಮಾರ್ಟಳ್ಳಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಪವಿತ್ರ ಹಬ್ಬ ಕ್ರಿಸ್ ಮಸ್ ಸಂಭ್ರಮ ಮನೆ ಮಾಡಿದ್ದು, ವಿವಿಧ ಚರ್ಚ್‍ಗಳಲ್ಲಿ ಬುಧವಾರ ರಾತ್ರಿಯಿಂದಲೇ ಕ್ರಿಸ್ ಮಸ್ ಆಚರಣೆ ಕಾರ್ಯಕ್ರಮಗಳು ಜರುಗಿದವು.


ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಮಾರ್ಟಳ್ಳಿ ಸಂತ ಲೂರ್ದು ಮಾತೆ ಚರ್ಚ್‍ನಲ್ಲಿ ಬುಧವಾರ ರಾತ್ರಿ 11-00 ಕ್ಕೆ ಹಾಡುಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ 11-30 ರಿಂದ ಜಾಗರಣೆ ಕ್ರಿಸ್ ಮಸ್ ಬಲಿಪೂಜೆ ನಡೆಯಿತು. ರಾತ್ರಿ 12-00 ಗಂಟೆಗೆ ಬಾಲ ಯೇಸುವಿನ ಮೆರವಣಿಗೆ ಮೂಲಕ ಗೋದಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ಮಾರ್ಟಳ್ಳಿ ವಲಯದ ಶ್ರೇಷ್ಠ ಗುರುಗಳು ಹಾಗೂ ಮಾರ್ಟಳ್ಳಿ ಧರ್ಮ ಕೇಂದ್ರದ ಗುರುಗಳಾದ ಫಾ. ಡಾ. ಎಂ. ವಿನ್ಸೆಂಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದವು.
ಆದಾದ ನಂತರ ಎಲ್ಲರಿಗೂ ಕೇಕ್ ಮತ್ತು ಬಾದಾಮಿ ಹಾಲು ಹಂಚಿ ಹಬ್ಬದ ಶುಭಾಶಯಗಳ ವಿನಿಮಯ ನಡೆಯಿತು.


ಕ್ರಿಸ್‍ಮಸ್ ಹಬ್ಬದ ಹಿನ್ನೆಲೆ ಮಾರ್ಟಳ್ಳಿ ಸುತ್ತಮುತ್ತಲಿನ ಚರ್ಚ್‍ಗಳೆಲ್ಲವೂ ಸಿಂಗಾರಗೊಂಡಿದ್ದು, ಬುಧವಾರ ರಾತ್ರಿಯಿಂದಲೇ ಚರ್ಚ್‍ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಕ್ರಿಸ್‍ಮಸ್ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದ ಚರ್ಚ್‍ಗಳೆಲ್ಲವೂ ಕಳೆದೊಂದು ವಾರದಿಂದಲೇ ಸಿಂಗಾರಗೊಂಡಿದ್ದವು, ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು, ಚರ್ಚ್ ಗಳಲ್ಲಿ ಏಸು ಕ್ರಿಸ್ತ ಜನಿಸಿದ ಗೋದಲಿ ನಿರ್ಮಿಸಲಾಗಿತ್ತು, ಜತೆಗೆ ಕ್ರಿಸ್‍ಮಸ್ ಟ್ರೀ ಇಟ್ಟು ಎಲ್ಲೆಡೆ ನಕ್ಷತ್ರದ ಪ್ರತಿಕೃತಿ ಯನ್ನು ಕಟ್ಟಿ ಹಬ್ಬದ ಮೆರುಗನ್ನು ಹೆಚ್ಚಿಸಲಾಗಿರುವುದು ಕಂಡು ಬಂದಿತು.