ಮಾರ್ಟಳ್ಳಿ ಧರ್ಮ ಕೇಂದ್ರಕ್ಕೆ ನೂತನ ಧರ್ಮ ಗುರುಗಳು ಅಧಿಕಾರ ಸ್ವೀಕಾರ

ಸಂಜೆವಾಣಿ ವಾರ್ತೆ
ಹನೂರು ಮೇ 27:
ತಾಲೂಕಿನ ಮಾರ್ಟಳ್ಳಿ ಸಂತ ಲೂರ್ದು ಮಾತೆಯ ದೇವಾಲಯದ ನೂತನ ಧರ್ಮ ಗುರುಗಳಾಗಿ ಫಾದರ್ ಡಾ. ಎಂ.ವಿನ್ಸೆಂಟ್ ಭಾನುವಾರ ಅಧಿಕಾರ ವಹಿಸಿಕೊಂಡರು.
ಕಳೆದ 6 ವರ್ಷಗಳಿಂದ ಮಾರ್ಟಳ್ಳಿ ಧರ್ಮ ಕೇಂದ್ರಕ್ಕೆ ಗುರುಗಳಾಗಿ ಸೇವೆ ಸಲ್ಲಿಸಿದ ಫಾ ಕ್ರಿಸ್ಟೇಫರ್ ಕೊಡಗಿನ ಗೋಪಾಲಪುರಕ್ಕೆ ವರ್ಗಾವಣೆಯಾಗಿ ತೆರೆಳುತ್ತಿರುವ ಸಂದರ್ಭದಲ್ಲಿ ಚರ್ಚಿಗೆ ಸಂಬಂಧಿಸಿದಂತಹ ವಿವಿಧ ಪೂಜಾ ವಸ್ತುಗಳು ಹಾಗೂ ಶಾಲೆಗಳ ದಾಖಲೆಗಳು ನೂತನ ಧರ್ಮ ಗುರುಗಳಿಗೆ ಸಲ್ಲಿಸಲಾಯಿತು.


ನೂತನ ಧರ್ಮ ಗುರುಗಳಾಗಿ ಮೈಸೂರಿನಿಂದ ಆಗಮಿಸಿದ ಫಾ.ಡಾ. ಎಂ.ವಿನ್ಸೆಂಟ್ ರವರಿಗೆ ಅದ್ದೂರಿ ಸ್ವಾಗತ ನೀಡಲಾಗಿತ್ತು. ಬಿಷಪ್ ಅವರ ಪ್ರತಿನಿಧಿಯಾಗಿ ಬಂದ ಫಾದರ್ ಭಾಗ್ಯರಾಜ್ ನೂತನ ಧರ್ಮ ಗುರುಗಳಿಗೆ ಅಧಿಕಾರ ವಹಿಸಿಕೊಟ್ಟು ಶುಭ ಹಾರೈಸಿದರು.


ನೂತನ ಧರ್ಮ ಗುರುಗಳು ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾಗಿ 28 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಮೈಸೂರಿನ ಶ್ರೀರಾಂಪುರದ ನಿತ್ಯ ಸಹಾಯ ಮಾತೆಯ ದೇವಾಲಯದಲ್ಲಿ ಧರ್ಮ ಕೇಂದ್ರದ ಗುರುಗಳಾಗಿ 6 ವರ್ಷ ಸೇವೆ ಸಲ್ಲಿಸಿ ಈಗ ಮಾರ್ಟಳ್ಳಿಯ ಧರ್ಮ ಕೇಂದ್ರಕ್ಕೆ ಗುರುಗಳು ಹಾಗೂ ಮಾರ್ಟಳ್ಳಿಯಲ್ಲಿರುವ ಎಲ್ಲಾ ಶಾಲೆಯ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಫಾ.ಜಾನ್ ಲೂಯಿಸ್, ಫಾ.ಕ್ರಿಸ್ಟೋಫರ್ ಕ್ಲಾರೆಟ್, ಫಾ.ಪ್ರಕಾಶ್, ಫಾ.ಅರೋಕಿಯರಾಜ್ ಹಾಗೂ ಧರ್ಮ ಕೇಂದ್ರದ ಭಕ್ತಾದಿಗಳು ಉಪಸ್ಥಿತರಿದ್ದರು.