Home ಸಿನೆಮಾ ಮಾರಿಗೆ ದಾರಿ ಟೀಸರ್ ಬಿಡುಗಡೆ

ಮಾರಿಗೆ ದಾರಿ ಟೀಸರ್ ಬಿಡುಗಡೆ

ಕುತೂಹಲ ಕೆರಳಿಸಿದ 90 ಸೆಕೆಂಡ್ ದೃಶ್ಯ

ಡಾ. ರಾಜ್‌ಕುಮಾರ್ ಹುಟ್ಟುಹಬ್ಬದ ಮುನ್ನ ದಿನ ಬಿಡುಗಡೆಗೊಂಡ “ಮಾರಿಗೆ ದಾರಿ” ಚಿತ್ರದ ಟೀಸರ್, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ ಸಿನಿಪ್ರೇಕ್ಷಕರ ಗಮನ ಸೆಳೆದಿದೆ. ಕೇವಲ 90 ಸೆಕೆಂಡ್‌ಗಳಲ್ಲೇ ಗಂಭೀರ ಟೋನ್, ಭಾವನಾತ್ಮಕ ಹಿನ್ನಲೆ ಮತ್ತು ರಹಸ್ಯಮಯ ನಿರೂಪಣೆಯಿಂದ ಟೀಸರ್ ವಿಶೇಷ ಕುತೂಹಲ ಹುಟ್ಟಿಸಿದೆ.

ಬೆಂಗಳೂರು ಮೂಲದ ಅಗಸ್ತ್ಯ ಈ ಚಿತ್ರದ ಪ್ರಮುಖ ಶಕ್ತಿ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ರಾಧ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ರಾಧ ಬಂಡವಾಳ ಹೂಡಿದ್ದು, ಉದ್ಯಮಿಗಳಾದ ಚೇತನ್ ಚಂದ್ರ ಮತ್ತು ಸತೀಶ್ ಕೃಷ್ಣ ಶೆಟ್ಟಿ ಸಹ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.

ಚಿತ್ರದ ಕುರಿತು ಮಾತನಾಡಿದ ಅಗಸ್ತ್ಯ, “ಮಾರಿಗೆ ದಾರಿ ಒಂದು ಕಲ್ಟ್ ಮತ್ತು ಕ್ಲಾಸಿಕ್ ಟಚ್ ಹೊಂದಿದ ಸಿನಿಮಾ. ಭಾವನೆಗಳು, ನೈಜತೆ ಮತ್ತು ಕಚ್ಚಾ ಅಂಶಗಳ ಮಿಶ್ರಣ ಇದು. ಕಥೆಯ ರಹಸ್ಯ ಉಳಿಯಬೇಕಿದೆ, ಆದ್ದರಿಂದ ಹೆಚ್ಚು ಹೇಳಲು ಸಾಧ್ಯವಿಲ್ಲ,” ಎಂದು ಹೇಳಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಟೀಸರ್ ನೋಡಿದವರು ಈಗಲೇ ಬಿಡುಗಡೆ ದಿನಾಂಕಕ್ಕಾಗಿ ಕಾಯುತ್ತಿದ್ದಾರೆ.

ನಾಯಕಿಯಾಗಿ ಮಹಾಲಕ್ಷೀ ಅಭಿನಯಿಸಿದ್ದು, ಅವರು ಸದ್ಯ “ಲಕ್ಷೀ ನಿವಾಸ” ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಕಾಕ್ರೋಚ್ ಸುಧಿ, ಬಲರಾಜವಾಡಿ, ಬೆನಕ ನಂಜಪ್ಪ, ವರ್ಧನ್, ಪ್ರದೀಪ್ ಪೂಜಾರಿ, ಮಂಡ್ಯ ಸ್ಟಾರ್ ಅನಂತಕುಮಾರ್, ತಾರಕ ರಾಮ್ ಸೇರಿದಂತೆ ಹಲವರು ಚಿತ್ರದ ತಾರಾಗಣದಲ್ಲಿ ಇದ್ದಾರೆ.

ಚಿತ್ರದ ಸಂಗೀತ ವಿಭಾಗದಲ್ಲಿ ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ ಮತ್ತು ತ್ರಿಲೋಕ ತ್ರಿವಿಕ್ರಮ ಅವರ ಸಾಹಿತ್ಯಕ್ಕೆ ರಿಯೋ ಆಂಟೋನಿ ನಾಲ್ಕು ಹಾಡುಗಳಿಗೆ ಸ್ವರ ನೀಡಿದ್ದಾರೆ. ಜಗದೀಶ್ ಗೌಡ ಅವರ ಛಾಯಾಗ್ರಹಣ ಮತ್ತು ಸಂಕಲನ ಚಿತ್ರಕ್ಕೆ ನೈಜತೆಯ ಸ್ಪರ್ಶ ನೀಡಿದ್ದು, ಸಾಹಸ ದೃಶ್ಯಗಳನ್ನು ಸೈಕ್ ಸೂರಿ ರೂಪಿಸಿದ್ದಾರೆ.

ವಾರಾಣಾಸಿ, ಬೆಂಗಳೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಮಡಕೇರಿ ಮತ್ತು ಮೈಸೂರು ಸೇರಿದಂತೆ ನೈಸರ್ಗಿಕ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈಗ ಚಿತ್ರ ಸೆನ್ಸಾರ್ ಹಂತಕ್ಕೆ ಕಾಲಿಡಲಿದ್ದು, ಶೀಘ್ರದಲ್ಲೇ ಮತ್ತಷ್ಟು ಅಪ್ಡೇಟ್‌ಗಳು ನಿರೀಕ್ಷಿಸಬಹುದು.