ಮಾನವ-ಪ್ರಾಣಿ ಸಂಘರ್ಷ ತಡೆಗೆ ಪರಿಣಾಮಕಾರಿ ಕ್ರಮ: ಈಶ್ವರ ಖಂಡ್ರೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ನ.03-
ಮಾನವ-ಪ್ರಾಣಿ ಸಂಘರ್ಷವನ್ನು ತಡೆಯಲು ಸರ್ಕಾರದ ವತಿಯಿಂದ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವÀ ಬಿ. ಈಶ್ವರ ಖಂಡ್ರೆ ಅವರು ತಿಳಿಸಿದರು.


ನಗರದ ಜಿಲ್ಲಾ ಪಂಚಾಯತ್ ಕೆ.ಡಿ.ಪಿ ಸಭಾಂಗಣದಲ್ಲಿಂದು ಪಶು ಸಂಗೋಪನೆ, ರೇಷ್ಮೆ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹಾಗೂ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮತ್ತು ಲೋಕಸಭಾ ಸದಸ್ಯ ಸುನೀಲ್ ಬೋಸ್, ಶಾಸಕರು, ವಿಧಾನ ಪರಿಷತ್ ಸದಸ್ಯರ ಉಪಸ್ಥಿತಿಯಲ್ಲಿ ಹಿರಿಯ ಅಧಿಕಾರಿಗಳು ಮತ್ತು ರೈತರೊಂದಿಗೆ ಮಾನವ-ಪ್ರಾಣಿ ಸಂಘರ್ಷ ತಡೆ ಕುರಿತು ನಡೆದ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು.


ಚಾಮರಾಜನಗರ ಮತ್ತು ಮೈಸೂರು ಸಮೃದ್ಧವಾದ ಅರಣ್ಯ, ಪ್ರಾಣಿ ಸಂಪತ್ತನ್ನು ಹೊಂದಿರುವ ಜಿಲ್ಲೆಗಳಾಗಿದ್ದು, ಇತ್ತೀಚೆಗೆ ಈ ಭಾಗದಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿರುವುದು ಕಂಡುಬಂದಿದೆ. ಪ್ರಸ್ತುತ ಹುಲಿದಾಳಿಗೆ 3 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿ ಜೀವವು ಅಮೂಲ್ಯವಾಗಿದ್ದು, ಜೀವಕ್ಕೆ ಬೆಲೆ ಕಟ್ಟಲಾಗದು. ಮಾನವ-ಪ್ರಾಣಿ ಸಂಘರ್ಷ ತಡೆಯಲು ಸಾರ್ವಜನಿಕರ ಸಹಕಾರವು ಅವಶ್ಯವಾಗಿದೆ. ಸಂಘರ್ಷವನ್ನು ನಿಯಂತ್ರಣಕ್ಕೆ ನೀಡಿರುವ ಸಲಹೆಗಳನ್ನು ಕ್ರೋಢಿಕರಿಸಿ ಪರಿಣಾಮಕಾರಿ ಹಾಗೂ ಪ್ರಾಮಾಣಿಕವಾಗಿ ಎಲ್ಲಾ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.


ಸಾಮಾನ್ಯವಾಗಿ ಮಾನವ-ಪ್ರಾಣಿ ಸಂಘರ್ಷ ಎಲ್ಲೆಡೆಯೂ ಇದೆ. ಈ ಸಾಲಿನಲ್ಲಿ ಆನೆ, ಹುಲಿ, ಚಿರತೆ ಸೇರಿದಂತೆ ಇತರೆ ಪ್ರಾಣಿಗಳಿಂದ 30 ಜನರ ಪ್ರಾಣ ಹಾನಿಯಾಗಿದೆ. ಇದನ್ನು ಶೂನ್ಯಕ್ಕೆ ತರಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದರ ಗಂಭೀರತೆಯನ್ನು ಮನಗಂಡು ತಳಮಟ್ಟದ ಸಮಸ್ಯೆಗಳನ್ನು ಅರಿಯಲು ಸ್ಥಳೀಯವಾಗಿ ಸಭೆ ಆಯೋಜಿಸಲಾಗಿದೆ. ಮಾನವ-ಪ್ರಾಣಿ ಸಂಘರ್ಷ ತಡೆಗಾಗಿ ಅರಣ್ಯ ಇಲಾಖೆಯಿಂದ 2-3 ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ವರದಿಯನ್ನಾಧರಿಸಿ ಶಾಶ್ವತ ಪರಿಹಾರ ಕ್ರಮಗಳನ್ನು ವಹಿಸಲಾಗುತ್ತದೆ ಎಂದು ಸಚಿವ ಖಂಡ್ರೆ ಅವರು ತಿಳಿಸಿದರು.


ಬೆಳೆ ಹಾನಿಗೆ ಕಳೆದ ವರ್ಷ 46 ಕೋಟಿ ರೂ. ಹಾಗೂ ಈ ಸಾಲಿನಲ್ಲಿ ಇದುವರೆಗೆ 36 ಕೋಟಿ ರೂ. ವಿತರಿಸಲಾಗಿದೆ. ಜನ, ಜಾನುವಾರುಗಳ ಪ್ರಾಣ ಹಾನಿಗೆ ನಿಗದಿಯಾಗಿರುವ ಪರಿಹಾರನ್ನು ವೈಜ್ಞಾನಿಕವಾಗಿ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು. ಬಂಡೀಪುರ ವ್ಯಾಪ್ತಿಯಲ್ಲಿ 1972ರಲ್ಲಿ 12 ಹುಲಿಗಳಿದ್ದು, ಈಗ 560ಕ್ಕೆ ಏರಿಕೆಯಾಗಿದೆ. ಪ್ರಾಣಿಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ವ್ಯಾಪ್ತಿಯು ವಿಸ್ತಾರವಾಗಬೇಕು. ಹುಲ್ಲುಗಾವಲು ಪ್ರದೇಶವು ದ್ವಿಗುಣವಾಗಬೇಕಿದೆ ಎಂದರು.


ಪ್ರಾಣಿ ದಾಳಿ ತಡೆಯಲು ಕಾರ್ಯಪಡೆಗೆ ತರಬೇತಿ ನೀಡಿ ಗಸ್ತು ಸಂಚಾರದ ಪರಿಮಿತಿಯನ್ನು ಹೆಚ್ಚಿಸಲು ಕಾರ್ಯಪಡೆಯಲ್ಲಿ ಕಾಡಿನ ಬಗ್ಗೆ ಸಂಪೂರ್ಣ ಜ್ಞಾನವಿರುವ ಅದಿವಾಸಿಗಳು, ಅರಣ್ಯದಂಚಿನ ಜನರನ್ನು ಸೇರಿಸಿಕೊಳ್ಳಲಾಗುವುದು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹುಲಿ, ಚಿರತೆಯಂತಹ ವನ್ಯಜೀವಿಗಳನ್ನು ಕಾಡಿಗೆ ಮರಳಿಸಲು ಸಮಗ್ರ ಕಮ್ಯಾಂಡೋ ಕೇಂದ್ರ ತೆರೆಯಲಾಗುವುದು. ಇಲಾಖೆಯ ಹಿರಿಯ ಅಧಿಕಾರಿಗಳು ಸಮಸ್ಯೆ ಇರುವ ಅರಣ್ಯಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.


ಅರಣ್ಯ ಹಾಗೂ ಅರಣ್ಯಪ್ರದೇಶದ ಸುತ್ತಲಿನ ಸ್ಥಳಗಳಲ್ಲಿ ಯಾವುದೇ ಗಣಿಗಾರಿಕೆ ಹಾಗೂ ಅಕ್ರಮ ರೆಸಾರ್ಟ್‍ಗಳಿಗೆ ಸರ್ಕಾರದಿಂದ ಅನುಮತಿ ನೀಡಿಲ್ಲ. ಅಂತಹ ಪ್ರಕರಣಗಳಿದ್ದರೆ ಸೂಕ್ತ ತನಿಖೆ ನಡೆಸಿ ಕ್ರಮ ವಹಿಸಲಾಗುತ್ತದೆ. ಅರಣ್ಯದಲ್ಲಿರುವ ಆದಿವಾಸಿಗಳಿಗೆ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆಗೆ ಅಧಿಕಾರಿಗಳು ತೊಂದರೆ ನೀಡಬಾರದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.


ಮಾನವ ವನ್ಯಜೀವಿ ಸಂಘರ್ಷ ತಹಬದಿಗೆ ಬರದಿದ್ದರೆ ಸಫಾರಿ ಬಂದ್ : ಮೈಸೂರು ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದ್ದು, ಇದು ತಹಬಂದಿಗೆ ಬಾರದಿದ್ದರೆ ಸಫಾರಿಯನ್ನು ಸಂಪೂರ್ಣ ಬಂದ್ ಮಾಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.


ವನ್ಯಜೀವಿ- ಮಾನವ ಸಂಘರ್ಷ ಇರುವ ಸ್ಥಳದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲು ಸಿಬ್ಬಂದಿ ಕೊರತೆ ಎನ್ನುತ್ತೀರಿ. ಹಾಗಾದರೆ ಸಫಾರಿಗೆ ನಿಯೋಜಿಸಿರುವ ಸಿಬ್ಬಂದಿಯನ್ನೇ ಅಲ್ಲಿಗೆ ನಿಯೋಜಿಸಬೇಕಾಗುತ್ತದೆ ಎಂದು ಹೇಳಿದರು.
ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಕಂದಾಯ ಮತ್ತು ಪೆÇಲೀಸ್ ಇಲಾಖೆಯೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಸಮನ್ವಯದ ಕೊರತೆ, ಪರಸ್ಪರ ದೋμÁರೋಪವನ್ನು ಸರ್ಕಾರ ಕ್ಷಮಿಸುವುದಿಲ್ಲ ಸಬೂಬುಗಳಿಗೆ ಅವಕಾಶವಿಲ್ಲ. ಎಲ್ಲ ಇಲಾಖೆಗಳೂ ಜೊತೆಗೂಡಿ ಮಾನವ- ವನ್ಯಜೀವಿ ಸಂಘರ್ಷ ನಿಯಂತ್ರಿಸಬೇಕು ಎಂದು ಸೂಚಿಸಿದರು.


ಆನೆ, ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದು ನಿಮಗೂ ತಿಳಿದಿದೆ. ಹೆಚ್ಚುತ್ತಿರುವ ಪ್ರಾಣಿಗಳಿಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಆದರೆ ಇರುವ ಕಾಡಿನಲ್ಲೇ ವನ್ಯಜೀವಿಗಳಿಗೆ ಸೂಕ್ತ ಆಹಾರ ಸಿಗುವಂತೆ ಮಾಡಲು ಕಾರ್ಯಯೋಜನೆ ರೂಪಿಸಿ ಎಂದು ಸ್ಪಷ್ಟ ಸೂಚನೆ ನೀಡಿದರು.
ಮಾಂಸಹಾರಿ ಕಾಡು ಪ್ರಾಣಿಗಳಿಗೆ ಕಾಡಿನೊಳಗೆ ಜಿಂಕೆ, ಕಡವೆ ಇತ್ಯಾದಿ ಲಭಿಸಬೇಕಾದರೆ, ಸಸ್ಯಹಾರಿ ಪ್ರಾಣಿಗಳಿಗೆ ಹುಲ್ಲು, ಸೊಪ್ಪು ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಅರಣ್ಯಾಧಿಕಾರಿಗಳು ಲಾಂಟನಾ, ಸನ್ನಾ ಇತ್ಯಾದಿ ಕಳೆ ತೆಗೆದು ಹೆಚ್ಚು ಸೊಪ್ಪು, ಹುಲ್ಲು ಲಭಿಸುವಂತೆ ಮಾಡಬೇಕು ಎಂದು ಸೂಚಿಸಿದರು.


ಇತ್ತೀಚೆಗೆ ಸರಗೂರಿನಲ್ಲಿ ಮೃತಪಟ್ಟ ವ್ಯಕ್ತಿಯ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆಯನ್ನು ಸರಗೂರು ಅಥವಾ ಎಚ್.ಡಿ.ಕೋಟೆ ಇಲ್ಲವೆ ನಂಜನಗೂಡಿನಲ್ಲಿ ಮಾಡಿಸಬಹುದಾಗಿತ್ತು. ಮೈಸೂರಿಗೆ ತರುವ ಅಗತ್ಯವೇನಿತ್ತು. ಅನಗತ್ಯವಾಗಿ ಸರ್ಕಾರದ ಮೇಲೆ ಸಚಿವರ ಮೇಲೆ ಆರೋಪ ಬರುವಂತೆ ಮಾಡಬೇಡಿ. ಪ್ರಾಮಾಣಿಕವಾಗಿ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಎಂದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು 8 ಅಂಶಗಳ ಕಾರ್ಯಯೋಜನೆ : ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ 8 ಅಂಶಗಳ ಕಾರ್ಯಯೋಜನೆಯನ್ನು ಸೂಚಿಸಿದ್ದಾರೆ.


ಮಾನವ ವನ್ಯಜೀವಿ ಸಂಘರ್ಷ ಇರುವ ಪ್ರದೇಶಗಳನ್ನು ಗುರುತಿಸಬೇಕು ಮತ್ತು ಯಾವ ಸ್ವರೂಪದ ಸಮಸ್ಯೆ ಸಂಘರ್ಷ ಇದೆ ಎಂದು ಪಟ್ಟಿ ಮಾಡಬೇಕು. ಮಾನವ ಸಂಪನ್ಮೂಲದ ಸಮರ್ಪಕ ನಿರ್ವಹಣೆ ಮಾಡಬೇಕು. ಸಂಘರ್ಷದ ತೀವ್ರತೆಯ ಆಧಾರದ ಮೇಲೆ ಅಧಿಕಾರಿ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು. ಅಗತ್ಯ ಬಿದ್ದರೆ ಸಮೀಪದ ವಲಯದ ಅಧಿಕಾರಿ ಸಿಬ್ಬಂದಿಯನ್ನೂ ನಿಯೋಜಿಸಬೇಕು.
ಗಸ್ತು ಹೆಚ್ಚಿಸಬೇಕು. ಗಸ್ತು ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು. ಅರಣ್ಯದ ಅಂಚಿನ ಗ್ರಾಮಗಳಲ್ಲಿ ಗಸ್ತು ಹೆಚ್ಚಳ ಮಾಡಿ, ಗಸ್ತು ರಿಜಿಸ್ಟರ್ ನಿರ್ವಹಣೆ ಮಾಡಬೇಕು.
ಹಿರಿಯ ಅಧಿಕಾರಿಗಳು ನಿಯಮಿತವಾಗಿ ಅರಣ್ಯದಂಚಿನ ಅದರಲ್ಲೂ ಮಾನವ-ವನ್ಯಜೀವಿ ಸಂಘರ್, ಇರುವ ಗ್ರಾಮದಲ್ಲಿ ವಾಸ್ತವ್ಯ ಮಾಡಿ, ಸಮಸ್ಯೆ ಪರಿಹರಿಸಬೇಕು.


ವನ್ಯಜೀವಿ ಸಂರಕ್ಷಣೆ ಕಾರ್ಯಾಚರಣೆ, ವನ್ಯಜೀವಿಗಳು ಸಂಚರಿಸುವ ಗ್ರಾಮದ ಬಳಿ 24×7 ವಾಹನ ಮತ್ತು ಸಿಬ್ಬಂದಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ವನ್ಯಜೀವಿ ಸೆರೆ, ವನ್ಯಜೀವಿ ದಾಳಿ ಮಾಡಿದಾಗ ಏನು ಮಾಡಬೇಕು, ವನ್ಯಜೀವಿ ಕಾಣಿಸಿಕೊಂಡಾಗ ಯಾವ ರೀತಿ ಸ್ಪಂದಿಸಬೇಕು ಎಂಬ ಬಗ್ಗೆ ಗ್ರಾಮದ ಯುವಕರಿಗೆ ಮತ್ತುಮಕ್ಕಳಿಗೆ ಅಣಕು ಪ್ರದರ್ಶನಗಳ ಮೂಲಕ ಜಾಗೃತಿ ಮೂಡಿಸಬೇಕು.


ಸಭೆಯ ಆರಂಭದಲ್ಲಿ ಸಚಿವರು ರೈತರಿಂದ ಸಮಸ್ಯೆಗಳನ್ನು ಆಲಿಸಿದರು. ಮಾನವ-ಪ್ರಾಣಿ ಸಂಘರ್ಷ ತಡೆಯಲು ಅರಣ್ಯ ಇಲಾಖೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು. ಆಧುನಿಕ ತಂತಜ್ಞಾನವನ್ನು ಅಳವಡಿಸಿಕೊಂಡು ಕಾಡುಪ್ರಾಣಿಗಳ ಹಾವಳಿ ತಡೆಯಬೇಕು. ರೈತರಿಗೆ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ. ಬೆಳೆನಷ್ಟ ಹಾಗೂ ಜೀವಹಾನಿಗೆ ನೀಡುವ ಪರಿಹಾರ ಶೀಘ್ರವಾಗಿ ನೀಡಬೇಕು ಹಾಗೂ ವೈಜ್ಞಾನಿಕವಾಗಿರಬೇಕು. ಅಕ್ರಮ ರೆಸಾರ್ಟ್ ಹಾಗೂ ಗಣಿಗಾರಿಕೆಗೆ ಅನುಮತಿ ನೀಡಬಾರದು. ಅರಣ್ಯಪ್ರದೇಶದಲ್ಲಿ ಹುಲ್ಲುಗಾಲು ಹೆಚ್ಚಿಸಬೇಕು ಎಂಬುದು ಸೇರಿದಂತೆ ಸಾಕಷ್ಟು ವಿಷಯಗಳನ್ನು ರೈತರು ಸಭೆಯ ಗಮನಕ್ಕೆ ತಂದರು.