ಪುತ್ತೂರು: ಅಧಿಕಾರಿಗಳು ಹಾಗೂ ಜನಪ್ರತಿನಿಧಿಇಗಳ ಬಗ್ಗೆ ವಕ್ರದೃಷ್ಟಿ ಸಹಜ ಪ್ರಕ್ರಿಯೆ. ಆದರೆ ಕಾನೂನಿನ ಜತೆಗೆ ಮಾನವಧರ್ಮ ಪಾಲನೆ ಮಾಡುವ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸಿದರೆ ಜನಪ್ರೀತಿ ಗಳಿಸಲು ಸಾಧ್ಯ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ನಗರಸಭೆಯಲ್ಲಿ ೪ ವರ್ಷಗಳ ಕಾಲ ಪೌರಾಯುಕ್ತರಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡ ಮಧು ಎಸ್. ಮನೋಹರ್ ಅವರಿಗೆ ಗುರುವಾರ ಪುರಭವನದಲ್ಲಿ ಆಯೋಜಿಸಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
. ಸ್ವಚ್ಛತೆಯಲ್ಲಿ ಪುತ್ತೂರನ್ನು ೩೬ ನೇ ಸ್ಥಾನದಿಂದ ೩ ನೇ ಸ್ಥಾನಕ್ಕೇರಿಸಿದ ಸ್ವಚ್ಛ, ಸುಂದರ ಪುತ್ತೂರು ಆಗಿ ನಗರಸಭೆಗೆ ಕಾಯಕಲ್ಪ ಕೊಟ್ಟ ಸಜ್ಜನ ಮಧು ಮನೋಹರ್ ಅವರು ಪೌರಕಾರ್ಮಿಕರೂ, ಸಮಾಜವೂ ಮೆಚ್ಚುವ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸರ್ಕಾರಿ ಅಧಿಕಾರಿಯಿಂದ ಜನಸ್ನೇಹೀ ವೃತ್ತಿಪರತೆಯ ಧರ್ಮ ಪಾಲನೆಯಾದಾಗ ಜನತೆಯ ಗೌರವ ಲಭಿಸುತ್ತದೆ. ಪುತ್ತೂರು ನಗರಸಭೆಯ ಪೌರಾಯುಕ್ತ ಮಧು ಮನೋಹರ್ ಅವರಿಗೆ ಅಂತಹ ಸಮಾಜದ ಗೌರವ ಸಿಕ್ಕಿದೆ ಎಂದು ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ನಗರಸಭಾ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ. ಜೀವಂಧರ್ ಜೈನ್ ಮಾತನಾಡಿ, ಸ್ಥಳೀಯಾಡಳಿತ ಪ್ರತಿನಿಧಿತ್ವದ ಅವಧಿಯಲ್ಲಿ ಸುಮಾರು ೨೫ ಮಂದಿ ಅಧಿಕಾರಿಗಳನ್ನು ನೋಡಿದ್ದೇನೆ. ಆದರೆ ಮಧು ಮನೋಹರ್ ಅವರನ್ನು ಯಾಕೆ ಕಳುಹಿಸುತ್ತಿದ್ದೀರಿ ಎಂದು ಜನರು ಕೇಳುವಷ್ಟು ಸಾಧನೆ ಅವರು ಮಾಡಿದ್ದಾರೆ. ಬನ್ನೂರನ್ನು ಝೀರೋ ಡಂಪಿಂಗ್ ಯಾರ್ಡ್ ಆಗಿ ಪರಿವರ್ತಿಸುವಲ್ಲಿ, ಉತ್ತಮ ಕಸ ವಿಲೇವಾರಿ ವ್ಯವಸ್ಥೆ, ಸಿಎನ್‌ಜಿ ಘಟಕ ಸ್ಥಾಪನೆಯಂತಹ ಮಹತ್ವದ ಕೆಲಸಗಳ ಮೂಲಕ ಜನಸ್ನೇಹಿ ಅಧಿಕಾರಿಯಾಗಿ ಅವರು ಗುರುತಿಸಿಕೊಂಡಿದ್ದಾರೆ ಎಂದರು.
ವರ್ಗಾವಣೆಗೊಂಡಿರುವ ಮಧು ಎಸ್. ಮನೋಹರ್ ಅವರನ್ನು ನಗರಸಭೆ, ಸಂಘ ಸಂಸ್ಥೆಗಳು, ಅಧಿಕಾರಿಗಳು, ಸಾರ್ವಜನಿಕರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಧು ಎಸ್. ಮನೋಹರ್ ಅವರು ಸೇವಾ ಅವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭಾ ಸಿಎನ್ ಜಿ ಘಟಕದ ಪಾಲುದಾರ ಉದ್ಯಮಿ ಕೃಷ್ಣನಾಯಾರಣ ಮುಳಿಯ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ವಾಣಿಜ್ಯ ಮತ್ತು ವರ್ತಕ ಸಂಘದ ಅಧ್ಯಕ್ಷ ವಾಮನ ಪೈ, ತಹಶೀಲ್ದಾರ್ ಬಿ.ಎಸ್. ಕೂಡಲಗಿ, ನಗರಸಭಾ ಅಧಿಕಾರಿ ರವೀಂದ್ರ ಕುಮಾರ್, ಹೊರಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧಯಕ್ಷ ಅಣ್ಣ ಕಾರೆಕ್ಕಾಡು, ಪುಡಾ ಅಧ್ಯಕ್ಷ ನಿಹಾಲ್ ಶೆಟ್ಟಿ, ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷ ಉಲ್ಲಾಸ್ ಪೈ, ಗುತ್ತಿಗೆದಾರರ ಸಂಘದ ಮುರಳೀಕೃಷ್ಣ ಹಸಂತಡ್ಕ, ನಗರಸಭಾ ಪರಿಸರ ಅಭಿಯಂತರ ಶಬರಿನಾಥ ರೈ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ನೂತನ ಪೌರಾಯುಕ್ತೆ ವಿದ್ಯಾ ಕಾಳೆ ಅವರು ಮಧು ಮನೋಹರ್ ಅವರ ಕುರಿತು ಮಾತನಾಡಿ ಶುಭಹಾರೈಸಿದರು. ನಗರಸಭಾ ಉಪಾಧ್ಯಕ್ಷ ಬಾಲಚಂದ್ರ ಕೆ. ಸ್ವಾಗತಿಸಿ, ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರ್ವಹಿಸಿದರು.


























