
ಸಂಜೆವಾಣಿ ವಾರ್ತೆ
ತಿ.ನರಸೀಪುರ.ಜ.10:- ತಾಲೂಕಿನ ಮಾದಾಪುರ ಗ್ರಾಮದಲ್ಲಿರುವ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಶುಕ್ರವಾರ 2024-25ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮಸಭೆಯನ್ನು ಆಯೋಜಿಸಲಾಗಿತ್ತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಣ್ಣ ಅವರ ಅಧ್ಯಕ್ಷತೆ ಯಲ್ಲಿ ನಡೆದ ಲೆಕ್ಕ ಪರಿ ಶೋಧನೆಯಲ್ಲಿ ನರೇಗಾ ಯೋಜನೆಯ ಲೆಕ್ಕ ಪರಿಶೋಧಕ ರಂಗರಾಜು ಅವರು ನರೇಗಾ ಯೋಜನೆಯಡಿ 1,51,99,327 ರೂ.ಗಳ ವೆಚ್ಚದಲ್ಲಿ ಕೈಗೊಂಡ 144 ಕಾಮಗಾರಿಗಳು ಮತ್ತು15ನೇ ಹಣಕಾಸು ಯೋಜನೆಯಡಿ 41,44,667 ರೂ.ಗಳ ವೆಚ್ಚದಲ್ಲಿ ನಡೆದ 36 ಕಾಮಗಾರಿಗಳ ಲೆಕ್ಕವನ್ನು ಅನುಷ್ಠಾನಗೊಳಿಸಿರುವ ಮಾಹಿತಿಯೊಂದಿಗೆ ಮಂಡಿಸಿದರು.
ಸಭೆಯ ನೋಡಲ್ ಅಧಿಕಾರಿಯಾದ ಸಿಡಿಪಿಓ ಗೋವಿಂದರಾಜು ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರು ನರೇಗಾ, ಹಣಕಾಸು ಯೋಜನೆ ಮತ್ತು ಸ್ವಂತ ಸಂಪನ್ಮೂಲಗಳ ವತಿಯಿಂದ ಸಿಗುಬಹುದಾದ ಅನುದಾನಗಳನ್ನು ಬಳಸಿಕೊಂಡು ಆರ್ಥಿಕ ಸಬಲೀಕರಣ ಹೊಂದಬೇಕು ಎಂದರು.
ಸಭೆಯಲ್ಲಿ ಸದಸ್ಯರಾದ ರೇವಣ್ಣ, ರೇಖಾ, ಪಿಡಿಓ ಸ್ವಾಮಿರಾವ್, ನರೇಗಾ ಅಭಿಯಂತರ ಲೋಕೇಶ್, ಕೃಷಿ ಸಹಾಯಕಿ ವಿಶಾಲು , ಕಾರ್ಯದರ್ಶಿ ಭಾನು ಪ್ರಕಾಶ್, ಮುಖಂಡರಾದ ಬಸವರಾಜು ಸೇರಿದಂತೆ ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.


























