ಮಾದಪ್ಪನ ಸನ್ನಿಧಿಯಲ್ಲಿ ಶರನ್ನವರಾತ್ರಾರಂಭ

ಸಂಜೆವಾಣಿ ವಾರ್ತೆ
ಹನೂರು ಸೆ 22 :-
ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಾದಪ್ಪನ ಸನ್ನಿಧಿಯಲ್ಲಿ ಇಂದು ಸೋಮವಾರ ರಾತ್ರಿ ಮಲೈ ಮಹದೇಶ್ವರ ಸ್ವಾಮಿಯ ದೇವಾಲಯದಲ್ಲಿ ಬೇಡ ಗಂಪಣ ಸಂಪ್ರದಾಯದಂತೆ ಬೇಡ ಗಂಪಣ ಕುಲ ಗುರುಗಳು ಶ್ರೀ ಸಾಲೂರು ಬೃಹನ್ಮಠದ ಅಧ್ಯಕ್ಷರು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ಸಾನಿತ್ಯದಲ್ಲಿ ಮಹಾ ನವಮಿಯ ದಸರಾ ಉತ್ಸವ ಸೇವೆ ಜರುಗಲಿದೆ.
ದಕ್ಷಿಣ ಘಟ್ಟಗಳ ಅರಣ್ಯದ ಸಾಲಿನ ನಡುವಿನ ಹನೂರು ತಾಲ್ಲೂಕಿನ ಪವಿತ್ರ ಪವಾಡ ಪುರುಷ ಮಲೆ ಮಹದೇಶ್ವರ ಸ್ವಾಮಿಯವರಿಗೆ ಬೇಡಗಂಪಣ ಬುಡ ಕಟ್ಟು ಪರಂಪರೆಯ ಪದ್ದತಿಯಂತೆ ಶ್ರೀ ಮಲೈ ಮಹದೇಶ್ವರ ಸ್ವಾಮಿಯವರಿಗೆ ದಸರಾ ಪೂರ್ವಕಾಲದಿಂಲೂ ಮಹಾ ನವಮಿಯ ಪೂಜಾಕಾರ್ಯಗಳನ್ನು ಶ್ರೀ ಸಾಲೂರು ಗುರು ಪರಂಪರೆಯ ಸಾನಿತ್ಯದಲ್ಲಿ ಬೇಡಗಂಪಣ ಕುಲದ ಶಿಷ್ಯ ಪರಂಪರೆಯ ಆಚಾರ ಪದ್ದತಿಯಂತೆ ಮಾಡಿಕೊಂಡು ಬರಲಾಗುತ್ತಿದೆ.


ಮಹಾ ನವಮಿಯ ಪಟ್ಟದ ಉಯ್ಯಾಲೆ ಉತ್ಸವಕ್ಕೆ ಆಗತ್ಯವಿರುವ ಬಿದಿರು ಮರಗಳನ್ನು ಕಾಡಿನಿಂದ ತಂದು ದೇವಾಲಯ ಪಶ್ಚಿಮ ದಿಕ್ಕಿನ ಕಂಠ ಶಾಲೆಯ ಅವರಣದಲ್ಲಿ ಹಸಿರು ಚಪ್ಪರವನ್ನು ಹಾಕಿ.ಪಟ್ಟದ ತೂಗು ಉಯ್ಯಾಲೆಯ ತೊಟಿಲು ಮಂಟಪವನ್ನು ನೂತನವಾಗಿ ನಿರ್ಮಾಣ ಮಾಡಲಾಗುತ್ತಿದೆ.


ಮಲೆ ಮಾದಪ್ಪನ ದಸರಾ ಪಟ್ಟದ ಉಯ್ಯಾಲೆಯ ಉತ್ಸವಕ್ಕೆ ಬೇಡಗಂಪಣ ಸರದಿಯ ಅರ್ಚಕರು ಸಿದ್ದತೆಯನ್ನು ಮಾಡಿಕೊಂಡು. ರಾತ್ರಿ 8-30 ರಿಂದ 10-00 ಗಂಟೆಯವರಿಗೆ 9 ದಿನಗಳಕಾಲ ಪ್ರತಿ ದಿನವೂ ಮಾದಪ್ಪನ ಪಟ್ಟದ ಉಯ್ಯಾಲೆಯ ಉತ್ಸವ ಸೇವೆಯು ದೇವಾಲಯದ ಒಳ ಆವರಣದಲ್ಲಿ ಜರುಗುತ್ತದೆ.


ಪ್ರತಿ ದಿನವೂ ಒಂದೂಂದು ಬೇಡಗಂಪಣ ಕುಲಸ್ಥರ ಮನೆ ತನದವರಿಂದ ಹಾಗೂ ಶ್ರೀ ಸಾಲೂರು ಬೃಹನ್ಮಠದ ಗುರು ಪರಂಪರೆ ಜೋತೆಯಲ್ಲಿ ಬೇಡ ಗಂಪಣರ ಶಿಷ್ಯ ಪರಂಪರೆಯ ಬೇಡ ಗಂಪಣ ತಮ್ಮಡಿಗಳಿಂದ ಹಾಗೂ ಬೇಡರ ಹಲವು ಪಾಲು ಪಂಗಡ ಗುಂಪಿನ ಮನೆತನದವರಿಂದ ಶ್ರೀ ಸಾಲೂರು ಮಠದ ಶ್ರೀಗಳ ಸಾನಿತ್ಯದಲ್ಲಿ ನಡೆಯಲಿದೆ.