
ಸಂಜೆವಾಣಿ ವಾರ್ತೆ
ಹನೂರು ಜ 25 :- ಎಪ್ಪತ್ತೇಳು ಮಲೆಯಲ್ಲಿ ನೆಲೆಸಿರುವ ಪವಾಡ ಪುರುಷ ಶ್ರೀ ಮಹದೇಶ್ವರ ಸ್ವಾಮಿ ಸನ್ನಿಧಾನ ಲಕ್ಷಾಂತರ ಭಕ್ತಾದಿಗಳ ಪುಣ್ಯಕ್ಷೇತ್ರ ಶ್ರೀ ಮಲೈ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರುವ ಭಕ್ತಾದಿಗಳ ಪೈಕಿ ಗೆಜ್ಜಲಗೆರೆ ಗ್ರಾಮಸ್ಥರ ಪಾದಯಾತ್ರೆಯು 16ನೇ ವರ್ಷವನ್ನು ಪೂರೈಸಿ ಗಮನ ಸೆಳೆದಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹಲವು ಗ್ರಾಮಗಳಿಂದ ಶ್ರೀ ಕ್ಷೇತ್ರಕ್ಕೆ ಪಾದಯಾತ್ರೆ ಮಾಡುವ ಮೂಲಕ ತಲುಪುವುದು ವಾಡಿಕೆ. ಯಾವುದೇ ಜಾತಿ ಭೇದಗಳಿಲ್ಲದೆ ಎಲ್ಲರೂ ಒಟ್ಟಾಗಿ ಪಾದಯಾತ್ರೆ ಮಾಡುವುದು ಗಮನಾರ್ಹವಾಗಿದೆ.
ಕಷ್ಟ ಕಾರ್ಪಣ್ಯಗಳ ನಿವಾರಣೆಗಾಗಿ ಭಕ್ತರು ಹರಕೆ ಹೊತ್ತು ನೂರಾರು ಕಿಲೋಮೀಟರ್ ನಡೆದು ತಮ್ಮ ಹರಕೆ ತೀರಿಸಿಕೊಳ್ಳುತ್ತಾರೆ. ಎಲ್ಲಾ ವಿವಿಧ ಹರಕೆ ಹೊತ್ತು ಭಕ್ತರಿಂದ ಚಿನ್ನದ ತೇರು ಉತ್ಸವ ಹಾಗೂ ಬೆಳ್ಳಿತೇರಿನ ಉತ್ಸವ ರುದ್ರಾಕ್ಷಿ ಮಂಟಪೆÇೀತ್ಸವ, ಬಸವ ವಾಹನ ಉತ್ಸವ ಉಲಿವಾಹನ ಉತ್ಸವ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ .
ಶ್ರೀ ಮಲೈ ಮಾದಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ ಕೈಂ ಕಾರ್ಯಗಳು ಹರಕೆ ಹೊತ್ತು ಕುಟುಂಬದ ಆರೋಗ್ಯ ಸುಧಾರಿಸಲಿ, ಹಾಗೂ ಸಕಾಲಕ್ಕೆ ಮಳೆಯಾದರೆ ರೈತರು ಮತ್ತು ಪ್ರಾಣಿಪಕ್ಷಿಗಳಿಗೆ ಅನುಕೂಲವಾಗುತ್ತದೆ. ದೇಶಕ್ಕೆ ಒಳ್ಳೆಯದಾಗಬೇಕಿದೆ ಎಂದು ಪ್ರಾರ್ಥಿಸುತ್ತಾ ಮಹದೇಶ್ವರ ಸ್ವಾಮಿ ಕೃಪೆಗೆ ಪಾತ್ರರಾಗುತ್ತಾರೆ.
ಬರುವಂತ ಭಕ್ತಾದಿಗಳಿಗೆ ದಾರಿ ಉದ್ದಕ್ಕೂ ಎಳನೀರು, ಪಾನಕ, ಪ್ರಸಾದ ವ್ಯವಸ್ಥೆ ಅವರೆಕಾಳು ಸಾಂಬಾರ್ ಮುದ್ದೆ, ಅನ್ನ, ಪಾಯಸ, ಮಜ್ಜಿಗೆ, ಹಪ್ಪಳ, ಕಜ್ಜಾಯ. ತರಕಾರಿ ಪಲ್ಯ, ಹೀಗೆ ವಿವಿಧ ಪ್ರಸಾದಗಳನ್ನು ಮಾಡಿ ಬರುವಂತ ಪಾದಯಾತ್ರೆಗಳಿಗೆ ಸಂತರ್ಪಣೆ ಮಾಡಲಾಗಿದೆ.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಶ್ರೀಮತಿ ರಾಜಮ್ಮ ಲೇಟ್ ಜಿ.ಡಿ ಮಹಾದೇವ್ (ಆರ್.ಎಂ.ಎಸ್ ಟ್ರಾನ್ಸ್ ಪೆÇೀರ್ಟ್ ಮಾಲಿಕರು) ಅವರ ನೇತೃತ್ವದಲ್ಲಿ ಗ್ರಾಮದ ಮುಖಂಡರುಗಳು ಗ್ರಾಮಸ್ಥರು ಸೇರಿದಂತೆ ಸಾವಿರಾರು ಜನರು ಪಾದಯಾತ್ರೆಯ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾರೆ . ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ವೈಭೋಗದಿಂದ ದಾನಿಗಳ ಸಹಾಯದಿಂದ ಪಾದಯಾತ್ರೆ ನೆರವೇರಿಸುತ್ತಿದ್ದಾರೆ.
ಸಿಂಗಾನಲ್ಲೂರು ಕಟ್ಟೆ ಬಸವೇಶ್ವರ ಸ್ವಾಮಿಗೆ ಪ್ರಥಮ ಪೂಜೆ:
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಭಕ್ತರು, ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಸನ್ನಿಧಿಗೆ ಕೈಗೊಂಡಿರುವ 16ನೇ ವರ್ಷದ ಪಾದಯಾತ್ರೆಯ ಅಂಗವಾಗಿ, ಸಂಪ್ರದಾಯದಂತೆ ಸಿಂಗಾನಲ್ಲೂರು ಗ್ರಾಮದ ಶ್ರೀ ಕಟ್ಟೆ ಬಸವೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಪ್ರಥಮ ಪೂಜೆ ಸಲ್ಲಿಸಿ ವಾಸ್ತವ್ಯ ಹೂಡುವ ಮೂಲಕ ತಮ್ಮ ಭಕ್ತಿ ಶ್ರದ್ಧೆಯನ್ನು ವ್ಯಕ್ತಪಡಿಸಿದರು.
ಕಾಲ್ನಡಿಗೆಯಲ್ಲಿ ಆಗಮಿಸಿದ ಭಕ್ತಾದಿಗಳು, ಸಿಂಗಾನಲ್ಲೂರು ಗ್ರಾಮದ ಶ್ರೀ ಕಟ್ಟೆ ಬಸವೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಪ್ರಥಮ ಪೂಜೆ ಸಲ್ಲಿಸಿ ವಾಸ್ತವ್ಯ ಹೂಡಿದ್ದು, ಈ ಸಂದರ್ಭದಲ್ಲಿ ಸಂಜಯ್ ಮತ್ತು ಪ್ರತಾಪ್ ತಂಡದವರಿಂದ ಭಕ್ತಿಗಾಯನ ಕಾರ್ಯಕ್ರಮ ನಡೆಯಿತು. ಭಕ್ತಿಗೀತಗಳ ಮಧುರ ನಾದವು ಸನ್ನಿಧಿಯನ್ನು ಆವರಿಸಿ, ಭಕ್ತರಲ್ಲಿ ಅಪಾರ ಆಧ್ಯಾತ್ಮಿಕ ಉತ್ಸಾಹವನ್ನು ಮೂಡಿಸಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾನಿತ್ಯವಹಿಸಿದ ಸರಗೂರು ಶರಣರಾದ ಶ್ರೀ ಸಿದ್ದಪ್ಪ ಅವರು ಭಕ್ತರಿಗೆ ಆಶೀರ್ವಚನ ನೀಡುತ್ತಾ, ಶ್ರೀ ಮಲೆ ಮಹದೇಶ್ವರ ಸ್ವಾಮಿಗೆ ನಡೆಯುವ ಎಣ್ಣೆಮಜ್ಜನ ಸೇವೆಯ ಮಹತ್ವ ಹಾಗೂ ಅಮಾವಾಸ್ಯೆಯ ಹಿಂದಿನ ದಿನ ಈ ಸೇವೆಯನ್ನು ಸಲ್ಲಿಸುವ ವಿಶಿಷ್ಟ ಪದ್ಧತಿಯ ಕುರಿತು ವಿವರವಾಗಿ ತಿಳಿಸಿದರು.
ನಂತರ ಶನಿವಾರ ಮುಂಜಾನೆ ಸಿಂಗಾನಲ್ಲೂರು ಕಟ್ಟೆ ಬಸವೇಶ್ವರ ಸ್ವಾಮಿಯ ಸನ್ನಿಧಾನದಿಂದ ಹೊರಟು ಹನೂರು ಮಾರ್ಗವಾಗಿ ಕೆಲಕಾಲ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಗಿನ ಉಪಹಾರ ಮುಗಿಸಿ ವಿಶ್ರಾಂತಿ ಮಾಡಿ ಮುಂದೆ ಸಾಗಿ ಕೌದಳಿಯಲ್ಲಿ ಮಧ್ಯಾಹ್ನ ಬಿಸಿ ಬಿಸಿ ರಾಗಿ ಮುದ್ದೆ, ವಿವಿಧ ಸೊಪ್ಪಿನ ಪಲ್ಯ ಸೀಗೆ ಸೊಪ್ಪಿನ ಉಪ್ಪು ಸಾಂಬಾರ್ ಸವಿದು ಮಧ್ಯಾಹ್ನ ವಿಶ್ರಾಂತಿ ಮುಗಿಸಿ, ಸಂಜೆಯ ಹೊತ್ತಿಗೆ ತಾಳುಬೆಟ್ಟ ತಲುಪಿ ಸ್ವಾಮಿಯವರಿಗೆ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿ, ವಿಶೇಷ ಪ್ರಸಾದ ದೊಂದಿಗೆ ವಾಸ್ತವ್ಯ ಹೂಡಲಾಗುತ್ತದೆ.
ಗೆಜ್ಜರಗೆರೆ ಗ್ರಾಮದಿಂದ ಪಾದಯಾತ್ರೆ ಹೊರಟಿ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಅಲ್ಲಲ್ಲಿ ವಿಶ್ರಾಂತಿ ಪಡೆದು, ಮೊದಲನೇ ದಿನ ಮಳವಳ್ಳಿಯಲ್ಲಿ, ಎರಡನೇ ದಿನ ಸಿಂಗಾನಲ್ಲೂರು ಕಟ್ಟೆ ಬಸವೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ನಂತರ ಕೌದಳ್ಳಿ ಹಾಗೂ ತಾಳು ಬೆಟ್ಟಕ್ಕೆ ತಲುಪಿ ಪ್ರಸಾದ ವ್ಯವಸ್ಥೆ ಪೂಜೆ ಪುರಸ್ಕಾರ ಭಜನೆಯೊಂದಿಗೆ ಸೇವೆ ಸಲ್ಲಿಸಿ, ನಂತರ ಕೊನೆಯ ದಿನವೂ ಕೂಡ ಮಲೆ ಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ ಹೂಡಿ ಅನ್ನ ಸಂತರ್ಪಣೆ ನಡೆಸಲಾಗುತ್ತದೆ.
ಸರಗೂರಿನ ಮೂಗಪ್ಪ ರಾಮವ್ವ ದಂಪತಿಗಳ ಸ್ಮರಣೆ:
ಶ್ರೀ ಸ್ವಾಮಿಗೆ ಪ್ರಥಮ ಪಾದಯಾತ್ರೆ ಕೈಗೊಂಡ ಸರಗೂರಿನ ಮೂಗಪ್ಪ ರಾಮವ್ವ ದಂಪತಿಗಳ ಪವಿತ್ರ ಇತಿಹಾಸವನ್ನು ಸ್ಮರಿಸಿ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಪ್ರಥಮ ಪಾದಯಾತ್ರೆಯನ್ನು ಕೈಗೊಂಡು, ಹಿಂದಿನಿಂದಲೂ ಎಲ್ಲಾ ಹೆಣ್ಣುಮಕ್ಕಳಿಗೆ ದರ್ಶನದ ಅವಕಾಶ ದೊರೆಯಲು ಕಾರಣೀಭೂತರಾಗಿದ್ದ ಶರಣ ಸಂತತಿಯವರಾದ, ಎಣ್ಣೆಮಜ್ಜನ ಸೇವೆಯ ಕರ್ತೃ ಶ್ರೀ ಮೂಗಪ್ಪ ರಾಮವ್ವ ತಾಯಿಯವರ ವಂಶಸ್ಥರಾದ ಶ್ರೀ ಸಿದ್ದಪ್ಪ ಸ್ವಾಮಿಗಳು ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ಈ ಪವಿತ್ರ ಸಂಪ್ರದಾಯವನ್ನು ಇಂದಿಗೂ ಶ್ರದ್ಧಾಭಕ್ತಿಯಿಂದ ಮುಂದುವರಿಸುತ್ತಾ ಬಂದಿದ್ದಾರೆ.
ಹಿಂದಿನ ಕಾಲದಲ್ಲಿ ಪಾದಯಾತ್ರಿಕರು ಕೈಸೇರಿಸಿಕೊಂಡ ಪಂಜು ಹಿಡಿದು ಅರಣ್ಯ ಮಾರ್ಗಗಳಲ್ಲಿ ನಡೆದು ಹೋಗುತ್ತಿದ್ದ ವಿಚಾರವನ್ನು ನೆನಪಿಸಿ, ಇಂದಿನ ದಿನಗಳಲ್ಲಿ ಅರಣ್ಯ ಪ್ರದೇಶ ಸಂಪೂರ್ಣ ಕಾಯ್ದಿರಿಸಿದ ಅರಣ್ಯವಾಗಿವುದರಿಂದ ಸರ್ಕಾರದ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಂತ ಅಗತ್ಯವೆಂದು ಮನವಿ ಮಾಡಿದರು.
ಇತ್ತೀಚೆಗೆ ಸಂಭವಿಸಿದ ಚಿರತೆ ದಾಳಿಯ ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿದ ಅವರು, ಭಕ್ತಾದಿಗಳು ಅರಣ್ಯ ಇಲಾಖೆ ಹಾಗೂ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು, ಯಾವುದೇ ರೀತಿಯ ಅವಘಡಗಳಿಗೆ ಅವಕಾಶ ಕೊಡಬಾರದು ಎಂದು ಕಿವಿಮಾತು ಹೇಳಿದರು.
ಕೆಲವು ಭಕ್ತರು ವಾಹನಗಳ ಮೂಲಕ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಎಲ್ಲಾರು ಒಟ್ಟಿಗೆ ಸೇರಿ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಗಿದೆ. ಹರಕೆ ಹೊತ್ತ ಭಕ್ತರು ತಮ್ಮ ಪೂಜಾ ಕಾರ್ಯಗಳನ್ನು ಮುಗಿಸಿ ಮಂಗಳವಾರ ನಮ್ಮ ಗ್ರಾಮಗಳಿಗೆ ಹಿಂತಿರುಗುವ ಮುನ್ನ ಮಳವಳ್ಳಿ ಪಟೇಲಮ್ಮ ಸನ್ನಿಧಾನದಲ್ಲಿ ವಿಶೇಷ ಪ್ರಸಾದ ಪರ ಸೇವೆ ನೆರವೇರಿಸುತ್ತಾರೆ, ಪ್ರಸಾದ ವ್ಯವಸ್ಥೆ ಮುಗಿದ ನಂತರ ಅವರವರ ಮನೆಗೆ ತಲುಪುವುದು ನಮ್ಮವಾಡಿಕೆ ಎಂದು ಮದ್ದೂರು ಹರೀಶ್ ಅವರು ತಿಳಿಸಿದ್ದಾರೆ. ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮಸ್ಥರು ಹಾಗೂ ಚಾಪರ್ ದೊಡ್ಡಿ, ಹಾಗೂ ತಾಲೂಕಿನ ಗ್ರಾಮಸ್ಥರು, ಪಾದಯಾತ್ರೆಯ ಮುಖ್ಯಸ್ಥರು, ಹಿರಿಯ ಮುಖಂಡರು ಭಾಗವಹಿಸಿದ್ದರು.

























