ಬ್ರಹ್ಮಾವರ- ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಅವರನ್ನು ಬಂಧನ ಮಾಡಲು ಬ್ರಹ್ಮಾವರ ಪೊಲೀಸರು ಹೋದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣವರ್, ಜಯಂತ್ ಸೇರಿದಂತೆ ಇತರ ೭ ರಿಂದ ೧೦ ಜನರು ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ ಪೊಲೀಸ್ ಠಾಣಾ ಅ.ಕ್ರ. ೧೭೭/೨೦೨೫, ಕಲಂ ೧೯೬(೧) (ಎ) ಬಿಎನ್‌ಎಸ್ ಪ್ರಕರಣದ ತನಿಖಾಧಿಕಾರಿಯಾಗಿರುವ, ಸದ್ರಿ ಠಾಣಾ ಪೊಲೀಸ್ ಉಪ-ನಿರೀಕ್ಷಕರು (ಕಾನೂನು & ಸುವ್ಯವಸ್ಥೆ) ರವರು, ಈ ಪ್ರಕರಣದಲ್ಲಿ ಆಪಾದಿತನಾದ ಮಹೇಶ್ ಶೆಟ್ಟಿ ತಿಮರೋಡಿ ಪ್ರಕರಣದ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ, ಮೇಲಾಧಿಕಾರಿಯವರ ಸೂಚನೆಯ ಮೇರೆಗೆ ಆಪಾದಿತನನ್ನು ದಸ್ತಗಿರಿ ಮಾಡುವುದಕ್ಕಾಗಿ, ಇಲಾಖಾ ಮೇಲಾಧಿಕಾರಿಯವರೊಂದಿಗೆ ಹಾಗೂ ಸಿಬ್ಬಂದಿಗಳೊಂದಿಗೆ ಆ.೨೧ರ ಬೆಳಗ್ಗೆ, ಆಪಾದಿತನ ಮನೆಯಾದ ಬೆಳ್ತಂಗಡಿ, ಉಜಿರೆ ಗ್ರಾಮದ ತಿಮರೋಡಿ ಹೌಸ್ ಎಂಬಲ್ಲಿಗೆ ತೆರಳಿದ್ದಾರೆ. ಈ ವೇಳೆ ಆಪಾದಿತನ ಮನೆಯಲ್ಲಿದ್ದ ಗಿರೀಶ್ ಮಟ್ಟಣ್ಣವರ್, ಜಯಂತ್ ಎಂಬವರುಗಳು ಹಾಗೂ ಇತರ ೭ ರಿಂದ ೧೦ ಜನರು ಆಪಾದಿತನನ್ನು ದಸ್ತಗಿರಿ ಮಾಡಲು ತಡೆಯೊಡ್ಡಿದ್ದಾರೆ.
ಸ್ಥಳದಲ್ಲಿ ಹೆಚ್ಚಿನ ಜನರನ್ನು ಸೇರಿಸಿ, ಇಲಾಖಾ ಕರ್ತವ್ಯ ನಿರ್ವಹಿಸದಂತೆ ಬಲಪ್ರಯೋಗ ನಡೆಸಿ ಅಡ್ಡಿಪಡಿಸಿರುತ್ತಾರೆ. ಮುಂದುವರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕಾರವಾಗಿ ಸಂದೇಶಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆಯೊಡ್ಡಿರುತ್ತಾರೆ. ಪ್ರಕರಣದ ಅಪಾದಿತ ಮಹೇಶ್ ಶೆಟ್ಟಿಯನ್ನು ದಸ್ತಗಿರಿ ಮಾಡಿದ ಬಳಿಕ, ಆಪಾದಿತನು ಇಲಾಖಾ ಜೀಪಿನಲ್ಲಿ ಬರಲು ನಿರಾಕರಿಸಿ, ಆತನ ಖಾಸಗಿ ಕಾರಿನಲ್ಲಿ ಬಂದಿದ್ದು, ಆ ವೇಳೆ ಸ್ಥಳದಲ್ಲಿ ನೆರೆದಿದ್ದ ಜನರು, ಸುಮಾರು ೧೦ ರಿಂದ ೧೫ ಕಾರುಗಳನ್ನು ಹಿಂಬಾಲಿಸಿಕೊಂಡು ಬಂದು ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ.
ಇನ್ನು ಈ ಬಗ್ಗೆ ದೂರುದಾರರು ನೀಡಿದ ದೂರಿನ ಮೇರೆಗೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: ೯೪/೨೦೨೫, ಕಲಂ: ೧೩೨, ೧೮೯(೨), ೩೫೧(೨), ೨೬೩(ಎ), ೧೯೦, ೨೬೨ ಬಿಎನ್‌ಎಸ್-೨೦೨೩ರಂತೆ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.




























