
ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.21 ಮಹಿಳೆ ಕುಟುಂಬ, ಸಮಾಜ, ದೇಶದ ಪ್ರಗತಿಗೆ ಕಾರಣೀ ಕರ್ತಳಾಗುತ್ತಾಳೆ ತಾನು ಬೆಳೆದರೆ ಮಾತ್ರ ಬೇರೆಯವರನ್ನು ಬೆಳೆಸಲು ಸಾಧ್ಯ, ಹೆಣ್ಣಿಗೆ ಶಿಕ್ಷಣ ಸ್ವಾತಂತ್ರ್ಯ, ಸಮಾನ ಅವಕಾಶ ಮತ್ತು ಸುರಕ್ಷತೆ ಹಾಗೂ ತಮ್ಮ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಅವರಲ್ಲಿ ಬರುತ್ತದೆ. ಆರ್ಥಿಕ ಸ್ವಾವಲಂಬನೆ ಮಹಿಳೆಯರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಮಹಿಳೆಗೆ ಮನೆ, ಶಾಲೆ, ಕೆಲಸದ ಸ್ಥಳ, ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತವಾಗಿ ಮತ್ತು ಗೌರವದಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ತಾಲೂಕು ಘಟಕವು ದಿನಾಂಕ 19/08/2026 ರಂದು ಬಳ್ಳಾರಿಯ ಶರಣ ಸಕ್ಕರೆ ಕರಡೀಶ ವಿದ್ಯಾರ್ಥಿನಿಯರ ಉಚಿತ ಪ್ರಸಾದ ನಿಲಯ ಬಳ್ಳಾರಿಯಲ್ಲಿ 2026 -27 ನೇ ಸಾಲಿನ ದತ್ತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರ್ ವೈ ಎಂ ಇಂಜಿನಿಯರಿಂಗ್ ಕಾಲೇಜಿನ ಉಪ ಪ್ರಾಚಾರ್ಯರಾದ ಡಾ. ಸವಿತಾ ಸೋನೋಳಿ ಚಿತ್ರಿಕಿ ರವರು ತಮ್ಮ ಉದ್ಘಾಟನಾ ನುಡಿಯಲ್ಲಿ ಮಹಿಳೆಯರಿಗೆ ಸಂಪೂರ್ಣ ಸ್ಥಾನಮಾನ ಸಿಗಬೇಕು ಸಂಚಿ ಹೊನ್ನಮ್ಮನನ್ನು ನೆನೆಸಿ ಹೆಣ್ಣನ್ನು ದೂಷಿಸಬೇಡಿ ಎಂದು ತಿಳಿಸುತ್ತಾ ಇಂದಿನ ತಂತ್ರಜ್ಞಾನವನ್ನು ಅವಶ್ಯಕತೆಗೆ ಬಳಸಿ ದುರುಪಯೋಗಪಡಿಸಿಕೊಳ್ಳಬೇಡಿ. ಒಬ್ಬ ಮಹಿಳೆ ಶಿಕ್ಷಣ ಪಡೆದರೆ ಒಂದು ಕುಟುಂಬ ಶಿಕ್ಷಣ ಪಡೆದಂತೆ ಎಂದು ತಮ್ಮ ಉದ್ಘಾಟನಾ ನುಡಿಯಲ್ಲಿ ನುಡಿದರು.
ದತ್ತಿ ಉಪನ್ಯಾಸವನ್ನು ನೀಡಿದ ಕನ್ನಡ ಶಿಕ್ಷಕರಾದ ಕುಮಾರಿ ವಸುಧಾ ಧಾರವಾರ್ ರವರು ” ಧರ್ಮವನ್ನು ಉಳಿಸುವಲ್ಲಿ ಮಹಿಳೆಯರ ಪಾತ್ರ ” ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು ತಮ್ಮ ಉಪನ್ಯಾಸದಲ್ಲಿ ಧರ್ಮ ಎಂದರೆ ಕೇವಲ ಆಚರಣೆ ಅಲ್ಲ ಸತ್ಯ, ನ್ಯಾಯ, ನೀತಿ ಮಾನವೀಯತೆ, ಕರ್ತವ್ಯ, ಕರುಣೆ ಸತ್ಕಾರ್ಯಗಳನ್ನು ಪಾಲಿಸುವ ಜೀವನ ಮೌಲ್ಯ ಈ ಮೌಲ್ಯಗಳನ್ನು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಕೊಂಡಯುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಮಕ್ಕಳಿಗೆ ಸಂಸ್ಕಾರ ನೀಡುವುದರ ಜೊತೆಗೆ ಸತ್ಯ,ಪ್ರಾಮಾಣಿಕತೆ, ಕರುಣೆ ಮುಂತಾದ ಮೌಲ್ಯಗಳನ್ನು ಕಲಿಸಿದಾಗ ಅವರು ಸಮಾಜಕ್ಕೆ ಉತ್ತಮ ಕೊಡುಗೆಗಳಾಗುತ್ತಾರೆ. ಸಾವಿತ್ರಿ ಬಾಪುಲೆ ರವರು ಹೆಣ್ಣಿಗೆ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ದತ್ತಿದಾನಿಗಳಾದ ಎಚ್ ಚಂದ್ರಶೇಖರ್ ಗೌಡ, ಶ್ರೀಮತಿ ಸುಶೀಲಾ ಶಿರೂರು, ಶ್ರೀಮತಿ ಎನ್ ಡಿ ವೆಂಕಮ್ಮ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಹಾವಿನಾಳ್ ಶರಣಬಸಪ್ಪ, ಶ್ರೀ. ಗುರುಪಾದಯ್ಯ ಕಲ್ಮಠ, ಶ್ರೀಮತಿ ಶಿಲ್ಪಾ ಬೆಳಗಲ್, ಶ್ರೀಯುತ ಪ್ರಭಯ್ಯ, ಜಿಲ್ಲಾಧ್ಯಕ್ಷರಾದ ಡಾ. ನಿಷ್ಠಿ ರುದ್ರಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮೆಟ್ರಿ ಮೃತ್ಯುಂಜಯ ವಹಿಸಿಕೊಂಡಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಸಾದ ನಿಲಯದ ವಿದ್ಯಾರ್ಥಿನಿಯಾದ ಕುಮಾರಿ ಭಾವನಾ ಪ್ರಾರ್ಥನೆಯನ್ನು ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ನಾಗರೆಡ್ಡಿ ಕೆ. ವಿ.ರವರು ಗಣ್ಯಮಾನ್ಯರನ್ನು ಸ್ವಾಗತಿಸಿ ಪ್ರಸ್ತಾವಿಕ ನುಡಿಯನ್ನು ನುಡಿದರು.
ಕಾರ್ಯಕ್ರಮದಲ್ಲಿ ಪ್ರಸಾದ ನಿಲಯದ ವಿದ್ಯಾರ್ಥಿನಿಯಾದ ಕುಮಾರಿ ಉಮಾ ಬಸಣ್ಣನವರ ಅವರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಬದಲಾಗುವುದರ ಜೊತೆಗೆ ಸಮಾಜವನ್ನು ಬದಲಿಸುವ ಶಕ್ತಿ ನಮಗೆ ದೊರೆಯುತ್ತದೆ ನಾವು ದುಡಿದಿದ್ದರಲ್ಲಿ ಸ್ವಲ್ಪ ಭಾಗವನ್ನು ಅನಾಥಾಶ್ರಮಗಳಿಗೆ ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯಗಳಿಗೆ ಹಣದ ರೂಪದಲ್ಲಿ ಅಥವಾ ವಸ್ತುವಿನ ರೂಪದಲ್ಲಿ ದಾನ ಮಾಡುವ ಮನೋಭಾವಗಳನ್ನು ನಾವು ನೀವೆಲ್ಲರೂ ಬೆಳೆಸಿಕೊಳ್ಳೋಣ ಎಂದು ತನ್ನ ಮನದಾಳದ ಮಾತನ್ನು ಆಡಿದರು. ಕಾರ್ಯಕ್ರಮದಲ್ಲಿ ಗಣ್ಯಮಾನ್ಯರನ್ನು ಗೌರವಿಸಲಾಯಿತು. ಕೊನೆಗೆ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಶರಣಬಸವ ಎಂ ವಂದಿಸಿದರು.































