Home ಜಿಲ್ಲೆ ಮಹಿಳೆಯರ ಜೀವನಕ್ಕೆ ಸಾಮಾಜಿಕ ಜಾಲತಾಣಗಳಿಂದ ಕಂಟಕ: ಸಂಶೋಧನಾ ವಿದ್ಯಾರ್ಥಿನಿ ಅನಿತಾ. ಕೆ

ಮಹಿಳೆಯರ ಜೀವನಕ್ಕೆ ಸಾಮಾಜಿಕ ಜಾಲತಾಣಗಳಿಂದ ಕಂಟಕ: ಸಂಶೋಧನಾ ವಿದ್ಯಾರ್ಥಿನಿ ಅನಿತಾ. ಕೆ

ಸಂಜೆವಾಣಿ ವಾರ್ತೆ

ಹೊಸಪೇಟೆ.ಆ.29 ಇಂದಿನ ಆಧುನಿಕ ಯುಗದಲ್ಲಿ ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳು ಮಾನವನ ಜೀವನದ ಅವಿಭಾಜ್ಯ ಅಂಗಗಳಾಗುವ ಜೊತೆಗೆ ಮಹಿಳೆಯರ ಜೀವನಕ್ಕೆ ಸಾಮಾಜಿಕ ಜಾಲತಾಣಗಳು ಕಂಟಕಗಳಾಗಿ ಮಾರ್ಪಟ್ಟಿವೆ ಎಂದು  ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಅನಿತಾ.ಕೆ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದಲ್ಲಿ ಗುರುವಾರ ಜರುಗಿದ ಪಾಕ್ಷಿಕ ಮಾತು 14 ರ ಕಾರ್ಯಕ್ರಮದಲ್ಲಿ ಮಹಿಳೆಯರ ಮೇಲಾಗುತ್ತಿರುವ ಆನ್ಲೈನ್ ವಂಚನೆ ಮತ್ತು ಸೈಬರ್ ಅಪರಾಧಗಳು  ಎಂಬ ವಿಷಯದ ಕುರಿತ ವಿಶೇಷ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಆಧುನಿಕ ಯುಗದಲ್ಲಿ ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಉದ್ಯೋಗ, ಶಿಕ್ಷಣ, ಬ್ಯಾಂಕಿಂಗ್ ಸೇರಿದಂತೆ ಆನ್ಲೈನ್ ಸೇವೆಗಳು ಸಹಯಕಗಳಾಗಿವೆ. ಆದರೆ ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ವಿಶೇಷವಾಗಿ ಮಹಿಳೆಯರಿಗೆ ಆನ್ಲೈನ್ ಕಿರುಕುಳ, ವಂಚನೆ, ಬೆದರಿಕೆ, ನಕಲಿ ಖಾತೆಗಳು ವ್ಯೆಯಕ್ತಿಕ ಮಾಹಿತಿಯ ದುರುಪಯೋಗ  ಹಣಕಾಸು ವಂಚನೆ, ನಕಲಿ ಕರೆಗಳು, ಆಮಿಷಗಳು, ಅಶ್ಲೀಲ ಚಿತ್ರಗಳ ದುರ್ಬಳಕೆ ಮುಂತಾದ ಸೈಬರ್ ಅಪರಾಧಗಳು ಮಹಿಳೆಯರ ಸುರಕ್ಷತೆ ಮತ್ತು ಗೌಪ್ಯತೆಗೆ ಗಂಭೀರ ಸವಾಲುಗಳಾಗಿವೆ ಎಂದು ಹೇಳಿದರು.

ಇಂತಹ ಘೋರ ಅಪರಾಧಗಳಿಂದ ಮಹಿಳೆಯರು ಯುವತಿಯರು ಮಾನಸಿಕ ನೆಮ್ಮದಿ, ಕುಟುಂಬ ನಿರ್ವಾಹಣೆ, ಸಾಮಾಜಿಕ ಗೌರವ, ತಾಳ್ಮೆ, ಆತ್ಮ ಗೌರವ ಮತ್ತು ಆರ್ಥಿಕ ಮೂಲಕ್ಕೆ ದುಷ್ಪರಿಣಾಮ ಉಂಟಾಗಲಿವೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಈ ಕುರಿತು ಮಹಿಳೆಯರಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವುದು ಮತ್ತು ಅವರ ವೈಯಕ್ತಿಕ ಮಾಹಿತಿಯನ್ನು ರಕ್ಷಿಸುವುದು ಸೈಬರ್ ಅಪರಾಧಗಳ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಜರುಗಿಸುವುದು ಇಂದಿನ ಅಗತ್ಯವಾಗಿದೆ. ಆನ್ಲೈನ್ ವಂಚನೆ ಮತ್ತು ಸೈಬರ್ ಅಪರಾಧಗಳು ಎಂದರೇನು? ಎಂಬುದನ್ನು ಮೊದಲು ಮಹಿಳೆಯರು ಯುವತಿಯರು ತಿಳಿದುಕೊಳ್ಳುವುದು ಮುಖ್ಯವಾಗಿದೆ. 

ಸೈಬರ್ ಅಪರಾಧಗಳು ಎಂದರೇ ಇಂಟರ್ನೆಟ್, ಮೊಬೈಲ್, ಕಂಪ್ಯೂಟರ್ ಅಥವ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಮಹಿಳೆಯರಿಗೆ ಅದರಲ್ಲೂ ಯುವತಿಯರಿಗೆ ಮೋಸ ಹಣ ಮತ್ತು ಬಂಗಾರದ ದರೋಡೆ, ಮಾಹಿತಿ ಕಳ್ಳತನದ ಜೊತೆಗೆ ಮಾನಹಾನಿ ಮಾಡುವ ಕೃತ್ಯಗಳು ಆನ್ಲೈನ್ ಸೈಬರ್ ಅಪರಾಧಗಳಾಗುತ್ತವೆ.  ಸೈಬರ್ ವಂಚನೆಯ ವಿರುದ್ಧ ಮಹಿಳೆಯರು, ಯುವತಿಯರು ಅದಷ್ಟು ಜಾಗೃತಿ ವಹಿಸುವುದು  ಅವಶ್ಯಕವಾಗಿದೆ. ಮಹಿಳೆಯರು ಯುವತಿಯರು ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ನಿರುದ್ಯೋಗ, ಕೌಟುಂಬಿಕ ಕಲಹಗಳು,  ವರದಕ್ಷಣೆ ಕಿರುಕುಳ,  ಹಿಂಸೆ, ಅಸೂಯೆ, ಮೋಸ, ವಂಚನೆ, ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ, ಅನಾಚಾರ, ಅತಿಯಾದ ಮೊಬೈಲ್ ಬಳಕೆ, ಆತ್ಮಹತ್ಯೆ ಇತ್ಯಾದಿ  ಗಂಭೀರ ವಿಷಯಗಳು ಮಹಿಳೆಯರ ಜೀವನಕ್ಕೆ ದೊಡ್ಡ ಕಂಟಕಗಳಾಗಿವೆ ಎಂದು ವಿಷಾಧ ವ್ಯಕ್ತಪಡಿಸಿದರು.

ಸರ್ಕಾರ ಕಠಿಣವಾದ ಕಾನೂನುಗಳನ್ನು ಜಾರಿಗೆ ತರಬೇಕಾಗಿದೆ. ಈ ಕುರಿತು ಜಾಗೃತಿ ಮೂಡಿಸಬೇಕು, ಮಹಿಳೆಯರಿಗೆ ಅದರಲ್ಲೂ ಯುವತಿಯರಿಗೆ ಸುರಕ್ಷಿತ ಡಿಜಿಟಲ್ ವಾತಾವರಣ ನಿರ್ಮಿಸುವುದು ಸರ್ಕಾರ, ಸಮಾಜ, ಸಂಘ ಸಂಸ್ಥೆಗಳು ಮತ್ತು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಆಗಿರುತ್ತದೆ. ಈ ಎಲ್ಲಾ ಸಂಸ್ಥೆಗಳು ಮಹಿಳೆಯರ  ಸುರಕ್ಷತೆ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ ಎಂದು ಹೇಳಿದರು.

ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕರು ಹಾಗೂ ಪ್ರಾಧ್ಯಾಪಕರಾದ ಡಾ. ತಾರಿಹಳ್ಳಿ ಹನುಮಂತಪ್ಪ ವಹಿಸಿದ್ದರು. ವಿಭಾಗದ ಮುಖ್ಯಸ್ಥರಾದ ಡಾ. ಎಲ್. ಶ್ರೀನಿವಾಸ ಸಹ ಸಂಚಾಲಕರಾದ ಕುಮಾರ ಡಿ.ಬಿ. ಸೇರಿದಂತೆ ವಿಭಾಗದ ಪ್ರಾಧ್ಯಾಪಕರು, ಸಿಬ್ಬಂದಿಗಳು ಸ್ನಾತಕೋತರ ಮತ್ತು ಸಂಶೋಧನ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಶೋಧನಾ ವಿದ್ಯಾರ್ಥಿ ರಾಮಾಂಜನೇಯ ಸ್ವಾಗತಿಸಿ, ನಿರೂಪಿಸಿದರು. ತಿಪ್ಪೇಶ ಬಿ. ವಂದಿಸಿದರು