
ಸಂಜೆವಾಣಿ ನ್ಯೂಸ್
ಮೈಸೂರು, ಏ.01:- ಮಹಾಪುರುಷರ ತತ್ವಗಳ ಅಳವಡಿಕೆಯಿಂದ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ, ಮೌಲ್ಯಯುತ ಜೀವನಕ್ಕೆ ಮಹಾವೀರರ ಬೋಧನೆಗಳೇ ಆಧಾರ ಎಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸ ಅವರು ಹೇಳಿದರು.
ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಗವಾನ್ ಮಹಾವೀರ ಜಯಂತೋತ್ಸವ ಸಮಿತಿ ವತಿಯಿಂದ ಕರ್ನಾಟಕ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮoದಿರದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಮಹಾವೀರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಮಹಾಪುರುಷರ ಸ್ಮರಣೆಯನ್ನು ಮಾಡುವ ಮುಖಾಂತರ ನಾವು ನಮ್ಮಲ್ಲಿ ಏನಾದರೂ ಪರಿವರ್ತನೆಯನ್ನು ಕಾಣಬೇಕೆಂಬ ಹಿತದೃಷ್ಟಿಯಿಂದ ಇಂತಹ ಜಯಂತಿ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜಿಸುತ್ತಾ ಬಂದಿದೆ ಎಂದು ಹೇಳಿದರು.
ಭಗವಾನ್ ಮಹಾವೀರರು, ಜೈನ ಧರ್ಮದ 24ನೇ ತೀರ್ಥಂಕರರಾಗಿದ್ದರು. ಮಹಾರಾಜರಾಗಿ ಜೀವನ ನಡೆಸಬೇಕಾದವರು ಅರಮನೆಯ ಸಕಲ ವೈಭವಗಳನ್ನು ತ್ಯಜಿಸಿ, ವೈರಾಗ್ಯವನ್ನು ತಾಳಿದ ಮಹಾಪುರುಷರು. ಜಗತ್ತಿಗೆ ಅಹಿಂಸೋ ಪರಮೋಧರ್ಮ ಎಂಬ ಸಂದೇಶವನ್ನು ಸಾರಿದ ವ್ಯಕ್ತಿ ಎಂದು ಹೇಳಿದರು.
ಭಗವಾನ್ ಮಹಾವೀರರು ನಮಗೆ ಇಂದ್ರಿಯ ನಿಗ್ರಹ, ಬ್ರಹ್ಮಚರ್ಯ, ಅಹಿಂಸೆ, ಅನ್ಯರ ವಸ್ತುಗಳಿಗೆ ಆಸೆ ಪಡಬಾರದು ಎಂಬ ಅವರ ಪರಿಕಲ್ಪನೆಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ದೇಶಗಳಲ್ಲಿ ಯುದ್ಧ ಎಂಬ ಶಬ್ದವೇ ಇಲ್ಲದಂತಾಗುತ್ತದೆ ಎಂದು ತಿಳಿಸಿದರು.
ಹಿರಿಯ ಸಾಹಿತಿಗಳಾದ ಪೆÇ್ರ.ಎಸ್. ಶಿವರಾಜಪ್ಪ ಅವರು ಮಾತನಾಡಿ ಈ ಜಗತ್ತಿಗೆ ಶಾಂತಿ, ಸೌಹಾರ್ದತೆ ಹಾಗೂ ಬದುಕುವ ರೀತಿ ನೀತಿಯನ್ನು ದಯಪಾಲಿಸಿದಂತಹ ಮಹಾವೀರ ಜಯಂತಿಯನ್ನು ಬಹಳ ಅರ್ಥಪೂರ್ಣವಾಗಿ ನಾವು ಇಂದು ಆಚರಿಸುತ್ತಿರುವುದು ಸಂತೋಷವಾಗಿದೆ. ನಾವು ಮಹಾವೀರ, ಗೌತಮ ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ರಂತಹ ಮಹಾವೀರರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರ ಅವರ ಜೀವನ, ಶ್ರಮ, ಸಾಧನೆ, ತ್ಯಾಗ ಹಾಗೂ ಹೋರಾಟಗಳ ಬಗ್ಗೆ ತಿಳಿಯಲು ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸಿ ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು ಎಂದು ಹೇಳಿದರು.
ವ್ಯಕ್ತಿತ್ವ ವಿಕಸನದ ಪರಿಕಲ್ಪನೆಯನ್ನು ಸಾರಿದ ವ್ಯಕ್ತಿ ಎಂದರೆ ಅದು ಮಹಾವೀರ. ಜಗತ್ತಿನ ಯಾವ ಜೀವಿ ಜಂತುಗಳಿಗೂ ಹಿಂಸೆಯನ್ನು ಕೊಡಬಾರದೆಂದು ಹೇಳಿ ಮಾನವೀಯತೆಯನ್ನು ಮೆರೆದ ಸಂತ. ಮಹಾತ್ಮ ಗಾಂಧೀಜಿ ಅವರು ಮಹಾವೀರರು ಹೇಳಿದ ಮೂಲತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜಗತ್ಪ್ರಸಿದ್ಧ ವಾದರೂ ಹಾಗೂ ವಿಶ್ವದಲ್ಲಿ ಮೂಲ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಹೇಳಿದರು.ಅವರನ್ನು ಕೇವಲ ಆರಾಧನೆ ಮತ್ತು ಆಚರಣೆ ಮಾಡಿದರೆ ಸಾಲದು ಅವರ ಆದರ್ಶಗಳನ್ನು ನಾವು ಪಾಲಿಸಬೇಕು. ಈ ಜಗತ್ತಲ್ಲವನ್ನು ಭ್ರಾತೃತ್ವದಿಂದ ಕಾಣುವುದು ಜೈನ ಧರ್ಮದ ಮೂಲ ಆಶಯವಾಗಿದೆ ಎಂದು ತಿಳಿಸಿದರು. ನಾವು ನಮ್ಮ ಜೀವನದಲ್ಲಿ ಬುದ್ಧನ ಕರುಣೆ, ಬಸವಣ್ಣನ ಸಮಾನತೆ, ಮಹಾವೀರರು ಶಾಂತಿ ಮತ್ತು ಅಹಿಂಸೆಯನ್ನು ಅಳವಡಿಸಿಕೊಳ್ಳಬೇಕು. ಮಹಾವೀರ ಕೇವಲ ಏಕಕಾಲಕ್ಕೆ ಮಾತ್ರ ಸೀಮಿತವಾದವರಲ್ಲ ಬದಲಾಗಿ ಸರ್ವಕಾಲಿಕ ಪುರುಷ ಎಂದು ಹೇಳಿದರು.
ಕಂಬದಹಳ್ಳಿ ಜೈನ ಮಠ ಶ್ರೀ ಕ್ಷೇತ್ರ ಪರಮಪೂಜ್ಯ ಸ್ವಸ್ತಿ ಶ್ರೀ ಭಾನು ಕೀರ್ತಿ ಭಟ್ಟಾರಕ ಭಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಮಾತನಾಡಿ ಮಹಾವೀರರು ಜಾತಿ ಪದ್ಧತಿ ಮತ್ತು ಪ್ರಾಣಿ ಬಲಿಯನ್ನು ತೀವ್ರವಾಗಿ ವಿರೋಧಿಸಿದರು. ಆತ್ಮ ಶುದ್ಧೀಕರಣಕ್ಕೆ ಹೆಚ್ಚಿನ ಒತ್ತು ನೀಡಿದರು. ಜೈನ ಧರ್ಮದ ಪ್ರಕಾರ ಮಹಾವೀರರು ಕೇವಲ ಒಬ್ಬ ಧರ್ಮ ಪ್ರಚಾರಕರಲ್ಲ ಬದಲಿಗೆ ಆತ್ಮದ ವಿಮೋಚನೆಯ ಹಾದಿಯನ್ನು ತೋರಿಸಿಕೊಟ್ಟ ಮಹಾನ್ ಗುರು ಆಗಿದ್ದಾರೆ ಎಂದು ತಿಳಿಸಿದರು.
ಮಹಾವೀರರು ತಮ್ಮ ತ್ರಿರತ್ನಗಳಾದ ಸಮ್ಯಕ್ ಜ್ಞಾನ, ಸಮ್ಯಕ್ ದರ್ಶನ ಹಾಗೂ ಸಮ್ಯಕ್ ಚರಿತ್ರೆಗಳ ಕುರಿತು ತಿಳಿಸಿದ್ದಾರೆ. ಸರಿಯಾದ ನಂಬಿಕೆಯು ಜ್ಞಾನಕ್ಕೆ ದಾರಿಯಾದರೆ, ಆ ಜ್ಞಾನವು ವ್ಯಕ್ತಿಯನ್ನು ಸನ್ಮಾರ್ಗದ ನಡತೆಯಲ್ಲಿ ನಡೆಸುತ್ತದೆ. ಇವುಗಳ ಪಾಲನೆಯಿಂದ ಮಾತ್ರ ಒಬ್ಬ ವ್ಯಕ್ತಿಯು ಕರ್ಮದಿಂದ ಮುಕ್ತನಾಗಿ ಮೋಕ್ಷ ಪಡೆಯಲು ಸಾಧ್ಯ ಎಂಬುದಾಗಿ ಬೋಧಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ. ಸುದರ್ಶನ್, ದಿಗಂಬರ ಜೈನ ಸಮಾಜದ ಅಧ್ಯಕ್ಷರಾದ ಅಮರ್ ಸುನಿಲ್ ಕುಮಾರ್, ಕಾರ್ಯದರ್ಶಿಗಳಾದ ಲಕ್ಷ್ಮೀಶ್ ಬಾಬು, ಜೈನ ಮಹಿಳಾ ಸಮಾಜದ ಅಧ್ಯಕ್ಷರಾದ ನಂದಿನಿ ಸುಜಯ್ ಹಾಗೂ ಕಾರ್ಯದರ್ಶಿಗಳಾದ ಸುಮಾ ದಾಯಕರ್ ಅವರು ಉಪಸ್ಥಿತರಿದ್ದರು.























