ಮಹದೇಶ್ವರ ಬೆಟ್ಟದಲ್ಲಿ ಚಿರತೆ ಸೆರೆ ಹಿಡಿದ ಬೆನ್ನಲ್ಲೇ ಮತ್ತೆರಡು ಚಿರತೆ ಪ್ರತ್ಯಕ್ಷ

ಸಂಜೆವಾಣಿ ವಾರ್ತೆ
ಹನೂರು ಜ 24 :-
ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಪಾದಯಾತ್ರಿಕನ ಭಕ್ತನೊಬ್ಬನನ್ನು ಕೊಂದು ಹಾಕಿದ್ದ ಚಿರತೆ ಸೆರೆಹಿಡಿದ ಬೆನ್ನೆಲ್ಲೇ ಮತ್ತೆರಡು ಚಿರತೆಗಳು ಲೊಕ್ಕನಹಳ್ಳಿ
ಒಡೆಯರ್ ಪಾಳ್ಯ ಮುಖ್ಯ ರಸ್ತೆಯ ಅರಣ್ಯ ಮಾರ್ಗದಲ್ಲಿ ಪ್ರತ್ಯಕ್ಷವಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ನರಭಕ್ಷಕ ಚಿರತೆಯನ್ನು ಸೆರೆಹಿಡಿಯಲಾಗಿದ್ದು ಲೋಕನಹಳ್ಳಿ ಹೋಬಳಿ ವ್ಯಾಪ್ತಿಯ ಬೋರೆದೊಡ್ಡಿ ಹಾಗೂ ಹೊಸದೊಡ್ಡಿ ಗ್ರಾಮಗಳ ಮಾರ್ಗ ಮಧ್ಯೆ ರಸ್ತೆ ಬದಿಯಲ್ಲಿ ಎರಡು ಜೋಡಿ ಚಿರತೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.


ರಸ್ತೆಯ ಬದಿಯಲ್ಲಿ ಎರಡು ಚಿರತೆಗಳು ರಾಜಾರೋಷವಾಗಿ ಸಂಚರಿಸುತ್ತಿರುವುದನ್ನು ವಾಹನ ಸವಾರರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಹಿನ್ನಲೆಯಲ್ಲಿ ಈ ಭಾಗದ ರೈತರು, ವಾಹನ ಸವಾರರು ಮತ್ತು ಸಾರ್ವಜನಿಕರು ಆತಂಕಪಟ್ಟಿದ್ದಾರೆ.


ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ಪಾದಯಾತ್ರಿಯೋರ್ವನನ್ನು ಚಿರತೆ ದಾಳಿ ನಡೆಸಿ ಭೀಕರವಾಗಿ ಕೊಂದಿರುವುದು ಮಾಸುವ ಮುನ್ನವೇ ಚಿರತೆಗಳು ಕಾಣಿಸಿಕೊಂಡಿರುವುದರಿಂದ ಜಮೀನುಗಳಲ್ಲಿನ ರೈತರು, ವಾಹನ ಸವಾರರು ಭಯಭೀತರಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆ ಮಾಡಬೇಕು ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.