ಸಂಜೆವಾಣಿ ವಾರ್ತೆ
ಹನೂರು.ಆ.18:- ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ಶನಿವಾರದಿಂದ ಪ್ರಾರಂಭವಾಗುವ ಅಮಾವಾಸ್ಯೆ ದೀಪಾವಳಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಐದು ದಿನಗಳ ಕಾಲ ಜರುಗಲಿದ್ದು ಈ ದೀಪಾವಳಿ ಜಾತ್ರೆಯು ಬುದುವಾರ ರಾತ್ರಿ ಜರುಗುವ ತೆಪ್ಪೂತ್ಸವದ ಮೂಲಕ ಜಾತ್ರೆಗೆ ತೆರೆ ಎಳೆಯಲಾಗುವುದು.
ಇಂದು ಶನಿವಾರ ದೀಪಾವಳಿ ಜಾತ್ರಾ ಮಹೋತ್ಸವದ ಪ್ರಯುಕ್ತ ವಿಷೇಶ ಪೂಜಾ ಕಾರ್ಯಕ್ರಮಗಳು ನೆರವೇರಲಿದ್ದು, ಭಾನುವಾರ ಮಹದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ, ವಿಷೇಶ ಸೇವೆ ಹಾಗೂ ಉತ್ಸವಗಳು ನೆರವೇರಲಿದೆ. ಸೋಮವಾರ ನರಕ ಚತುರ್ಧಶಿ ಮತ್ತು ಉತ್ಸವ, ಮಂಗಳವಾರ ದೀಪಾವಳಿ ಅಮಾವಾಸ್ಯೆಯ ಪ್ರಯುಕ್ತ ಬೆಳಿಗ್ಗೆ 9 ಗಂಟೆಯ ನಂತರ ಹಾಲರುವೆ ಉತ್ಸವ ಹಾಗೂ ವಿಷೇಶ ಸೇವೆಗಳು ನೆರವೇರಿಸಲಾಗುವುದು.
ಬುಧವಾರ ಬೆಳಿಗ್ಗೆ 9 ಗಂಟೆಯ ನಂತರ ಮಹದೇಶ್ವರ ಸ್ವಾಮಿಯ ಮಹಾ ರಥೋತ್ಸವವು ಲಕ್ಷಾಂತರ ಭಕ್ತಾಧಿಗಳ ಸಮ್ಮುಖದಲ್ಲಿ ಜರುಗಲಿದೆ, ನಂತರ ಗುರುಬ್ರಹ್ಮೋತ್ಸವ, ಅನ್ನಭ್ರಹ್ಮೋತ್ಸವ ಹಾಗೂ ರಾತ್ರಿ ಮಹಾ ನೈವೇದ್ಯದ ನಂತರ ನಡೆಯುವ ತೆಪೆÇ್ಪೀತ್ಸದ ಮೂಲಕ ದೀಪಾವಳಿ ಜಾತ್ರೆಗೆ ತೆರೆ ಎಳೆಯಲಾಗುವುದು.
ಮಲೆ ಮಹದೇಶ್ವರ ಸ್ವಾಮಿಗೆ ಹಾಲರವಿ ಉತ್ಸವ: ಹಸಿರು ಸೀರೆ ಉಟ್ಟ ಹೆಣ್ಣು ಮಕ್ಕಳು ಹಾಲರವಿಯನ್ನು ತಲೆ ಮೇಲೆ ಹೊತ್ತು ಹಾಲ ಹಳ್ಳದಿಂದ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ ಕಳಸ ಹೊತ್ತು ದೇವಾಲಯಕ್ಕೆ ಪಾದಯಾತ್ರೆಯಲ್ಲಿ ತಲುಪುತ್ತಾರೆ.
ಸoಪ್ರದಾಯದಂತೆ ತಲತಲಾಂತರದಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಸ್ಥಳೀಯ ಬೇಡಗಂಪಣರ 10 ರಿಂದ 12 ವರ್ಷದ 101 ಹೆಣ್ಣು ಮಕ್ಕಳು ಉಪವಾಸ ವಿದ್ದು, ಬೆಳ್ಳಂಬೆಳಿಗ್ಗೆ ಮಲೆ ಬೆಟ್ಟದಿಂದ 7 ಕಿ.ಮೀ ಅರಣ್ಯದ ಕಾಲು ದಾರಿಯಲ್ಲಿ ನಡೆದು ಹಾಲಹಳ್ಳದಲ್ಲಿ ವಾದ್ಯ ಮೇಳದೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಮೆರವಣಿಗೆ ಸಾಗಲಿದ್ದಾರೆ.
ಪಟ್ಟದ ಆನೆ, ಡೊಳ್ಳು ಕುಣಿತದ ಜೊತೆ ಛತ್ರಿ ಚಾಮರದ ಜೊತೆಗೆ ದೇವಾಲಯ ಪ್ರದಕ್ಷಿಣೆ ಹಾಕಿ ಕಳಸಗಳಲ್ಲಿರುವ ನೀರನ್ನು ಮಲೆ ಮಾದಪ್ಪನಿಗೆ ಅಭಿಷೇಕ ಮಾಡುವ ಮೂಲಕ ಹಾಲರವೆ ಉತ್ಸವ ನೆರವೇರಿಸಲಾಗುವುದು.
ಹಾಲರುವೆ ಹೊತ್ತುತರುವ ಹೆಣ್ಣು ಮಕ್ಕಳು ತಂಬಡಿಗೇರಿ ಗ್ರಾಮದ ಮುಖ್ಯದ್ವಾರದಲ್ಲಿ ಪ್ರವೇಶಿಸಿ ಮುಖ್ಯ ಧ್ವಾರದ ಬಳಿ ಒಂದೆಡೆ ಇರಿಸಿ ಅಲ್ಲಿ ದೊಡ್ಡ ಸಾಲಿಗೆ ಸೇರಿ ಬೇಡಗಂಪಣ ಸಮುದಾಯದವರಿಂದ ಕತ್ತಿ ಪವಾಡವನ್ನು ಮಾಡಲಾಗುತ್ತದೆ. ಇದರಲ್ಲಿ ಇಬ್ಬರು ಕತ್ತಿಯನ್ನು ಹಿಡಿದು ನಿಲ್ಲುತ್ತಾರೆ ಮತೊಬ್ಬರು ಕತ್ತಿಯ ಅಲಗಿನ ಮೇಲೆ ಮಲಗುತ್ತಾರೆ.
ಅವರ ಬೆನ್ನ ಮೇಲೆ ಬೇಡಗಂಪಣ ಪ್ರಮುಖ ವ್ಯಕ್ತಿ ಕಾಲನ್ನಿಡುತ್ತಾರೆ ಇದು ಭಕ್ತರಿಗೆ ನಡೆದುಕೊಂಡು ಹೋಗುವ ಭಾಸವಾಗುತ್ತದೆ. ಉಪವಾಸವಿದ್ದು ಬರಿಗಾಲಿನಲ್ಲಿ ಹೆಣ್ಣು ಮಕ್ಕಳು ನಡೆದುಕೊಂಡು ಹೋಗುವ ಮಾರ್ಗಮಧ್ಯ ಯಾವುದೇ ದುಷ್ಟ ಶಕ್ತಿ ಕಣ್ಣು ಬೀಳದಂತೆ ಕತ್ತಿ ಪವಾಡ ನಡೆದುಕೊಂಡು ಬಂದಿದೆ.
ಐದು ದಿನಗಳ ಕಾಲ ನೆರವೇರುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಮಲೆ ಮಹದೆಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಂಡಿದೆ. ಶೌಚಾಲಯದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಸರದಿ ಸಾಲಿನ ವ್ಯವಸ್ಥೆ, ನಿರಂತರ ಅನ್ನ ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಮುಂಗಡವಾಗಿ 2 ಲಕ್ಷ ಲಾಡು ಪ್ರಸಾದವನ್ನು ದಾಸ್ತಾನು ಮಾಡಲಾಗಿದೆ.



























