ಮಂಗಳೂರು.ಅ22: ರಾಜ್ಯದಲ್ಲಿ ಮಸಾಜ್ ಹಾಗೂ ಸ್ಪಾ ಹೆಸರಿನಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಸೂಕ್ತ ಕಾನೂನು ರೂಪಿಸಬೇಕೆಂಬ ಆಗ್ರಹ ಹೆಚ್ಚಿದೆ. ಕೇರಳದಲ್ಲಿ ಅಸ್ತಿತ್ವದಲ್ಲಿರುವಂತೆಯೇ ಕರ್ನಾಟಕದಲ್ಲೂ ಸೂಕ್ತ ಕಾಯ್ದೆ ಜಾರಿಗೆ ತರಬೇಕೆಂದು ವಕೀಲರ ಸಮೂಹ ಆಗ್ರಹಿಸಿದೆ.
ರಾಜ್ಯದಲ್ಲಿ ಕೇಂದ್ರಗಳ ಮೇಲೆ ಪೆÇಲೀಸರು ಆಗಾಗ್ಗೆ ದಾಳಿ ನಡೆಸುತ್ತಿರುವ ಸನ್ನಿವೇಶಗಳು ಮರುಕಳಿಸುತ್ತಿವೆ. ಮಸಾಜ್ ಹಾಗೂ ಸ್ಪಾ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕಾನೂನೇ ಇಲ್ಲದಿರುವಾಗ ಅಕ್ರಮ ಎಂಬ ವ್ಯಾಖ್ಯಾನವೂ ಇರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಪೆÇಲೀಸರು ಮಸಾಜ್ ಹಾಗೂ ಸ್ಪಾ ವಿರುದ್ಧ ಕೈಗೊಳ್ಳುವ ಕಾರ್ಯಾಚರಣೆಗಳೂ ಅನೈತಿಕವಾಗುತ್ತದೆ ಎಂಬುದು ಕಾನೂನು ತಜ್ಞರ ಅಭಿಪ್ರಾಯ.
ಈ ವಿಚಾರದಲ್ಲಿ ರಾಜ್ಯದ ನ್ಯಾಯಾಂಗ ಕ್ಷೇತ್ರದ ಪರಿಣಿತರು ಇಟ್ಟಿರುವ ಹೆಜ್ಜೆ ಗಮನಸೆಳೆದಿದೆ. ಈ ಸಂಬಂಧ ಮಾಜಿ ಸರ್ಕಾರಿ ಅಭಿಯೋಜಕರೂ ಆದ ಮನೋರಾಜ್ ರಾಜೀವ್ ನೇತೃತ್ವದಲ್ಲಿ ಮಂಗಳೂರಿನ ವಕೀಲರ ತಂಡವು ರಾಜ್ಯ ಸರ್ಕಾರ ಹಾಗೂ ಪ್ರತಿಪಕ್ಷ ನಾಯಕರಿಗೆ ಮನವಿ ಸಲ್ಲಿಸಿ, ಮಸಾಜ್ ಹಾಗೂ ಸ್ಪಾ ಇತ್ಯಾದಿ ಹೆಲ್ತ್ ಕೇರ್ ಸೆಂಟರ್ ಗಳಿಗೆ ಸೂಕ್ತ ಕಾನೂನು ರೂಪಿಸಬೇಕೆಂದು ಆಗ್ರಹಿಸಿದೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ವಕೀಲರಾದ ಶಿಶಿರ್ ಭಂಡಾರಿ, ರೋಶನಿ ಸೊರಬ್, ನಾದಿನಿ ಅಖಿಲ್ ಉಪಸ್ಥಿತಿಯಲ್ಲಿ ಹಿರಿಯ ನ್ಯಾಯವಾದಿ ಮನೋರಾಜ್ ರಾಜೀವ್ ಸುದ್ದಿಗೋಷ್ಠಿ ನಡೆಸಿ ಕರ್ನಾಟಕದಲ್ಲಿ ಮಸಾಜ್ ಹಾಗೂ ಸ್ಪಾ ಹೆಸರಿನಲ್ಲಿ ನಡೆಯುತ್ತಿರುವ ಅನೈತಿಕ ದಂಧೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕೆಲವು ಮಾಫಿಯಾಗಳ ಅನೈತಿಕ ದಂಧೆಯಿಂದಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವವರಿಗೆ ಅನ್ಯಾಯವಾಗುತ್ತಿದೆ ಎಂದು ಗಮನಸೆಳೆದರು. ಆಯುರ್ವೇದಿಕ್, ಮಸಾಜ್, ಸ್ಪಾ, ಹೇರ್ ಕೇರ್ ಸಹಿತ ಹೆಲ್ತ್ ಕೇರ್ ಸೆಂಟರ್ ಗಳ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಸೂಕ್ತ ಕಾನೂನು ರೂಪಿಸಬೇಕು ಹಾಗೂ ಆ ಉದ್ಯಮ ಕ್ಷೇತ್ರವನ್ನು ನಿಯಂತ್ರಣಕ್ಕೊಳಪಡಿಸಬೇಕು ಎಂದು ಆರ್.ಮನೋರಾಜ್ ಪ್ರತಿಪಾದಿಸಿದರು.


























