Home ಸಿನೆಮಾ ಮಳೆಯ ಮಧುರ ನೆನಪುಗಳ ಹೊಳೆ

ಮಳೆಯ ಮಧುರ ನೆನಪುಗಳ ಹೊಳೆ

‘ಮತ್ತೆ ಮಳೆ ಹೊಯ್ಯುತ್ತಿದೆ’ ಹಾಡುಗಳ ಬಿಡುಗಡೆ

ಪ್ರೇಮ, ನೆನಪು ಮತ್ತು ಮಳೆಯ ಸವಿಯೊಂದಿಗೆ ಪ್ರೇಕ್ಷಕರ ಮನಸ್ಸು ಕದ್ದುಕೊಳ್ಳಲು ಸಜ್ಜಾಗಿರುವ ‘ಮತ್ತೆ ಮಳೆ ಹೊಯ್ಯುತ್ತಿದೆ’ ಚಿತ್ರದ ಎರಡು ಮನಮೋಹಕ ಹಾಡುಗಳನ್ನು ಭರ್ಜರಿ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು. ‘ಎಲ್ಲ ನೆನಪಾಗುತಿದೆ’ ಎಂಬ ಅಡಿಬರಹ ಹೊಂದಿರುವ ಈ ಚಿತ್ರವು ರೊಮ್ಯಾಂಟಿಕ್ ಹಾಗೂ ಭಾವನಾತ್ಮಕ ಕಥೆಯೊಂದಿಗೆ ಕುತೂಹಲ ಹುಟ್ಟಿಸಿದೆ.

ಮೂರು ದಶಕಗಳಿಂದ ಸಹಾಯಕ ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಗಂಗಾಧರ್ ಗವಿರಂಗನಾಥ ಸ್ವಾಮಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಪತ್ನಿ ಸುಮ ಅವರ ಹೆಸರಿನಲ್ಲಿ ಬಂಡವಾಳ ಹೂಡಿದ್ದಾರೆ. ಸಹ ನಿರ್ಮಾಪಕರಾಗಿರುವ ಶೃತಿ ಅನಿಲ್ ಕುಮಾರ್ ಚಿತ್ರದಲ್ಲಿ ಪ್ರಾಧ್ಯಾಪಕರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಪರಮ್ ಗುಬ್ಬಿ ನಿರ್ದೇಶನ ಮಾಡಿದ್ದು, ಕಥೆ–ಸಂಭಾಷಣೆ–ಸಾಹಿತ್ಯವನ್ನು ಕಬ್ಬಡಿ ನರೇಂದ್ರಬಾಬು”ರಚಿಸಿದ್ದಾರೆ. ಸಂಗೀತ ಸಂಯೋಜನೆ ಅತಿಶಯ ಜೈನ್ ಅವರದು.

ಕಾರ್ಯಕ್ರಮಕ್ಕೆ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಮತ್ತು ಹಿರಿಯ ನಿರ್ದೇಶಕ ನಾಗಣ್ಣ ಚಾಲನೆ ನೀಡಿದರು. ನಿರ್ಮಾಪಕರ ಪುತ್ರ ಜಿ. ಲಿಖಿತ್ ಮತ್ತು ರಂಗಭೂಮಿಯ ಜಯವರ್ಧನ್ ನಾಯಕತ್ವ ವಹಿಸಿದ್ದು, ಇಬ್ಬರೂ ಎರಡು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯರಾಗಿ ಸುಲಕ್ಷ ಖೈರ ಮತ್ತು ಭೂಮಿಕಾ ಗೌಡ ಅಭಿನಯಿಸಿದ್ದಾರೆ. ಇವರೊಂದಿಗೆ ಚಂದ್ರಶೇಖರ ರೆಡ್ಡಿ, ಪ್ರಕಾಶ್ ಮೂರ್ತಿ, ಕುಮಾರಿ ಸ್ವರ್ಣ, ಶೃತಿ, ದಿನಮಣಿ ಹಾಗೂ ಕಾವ್ಯ ಕುಮಾರಿ ಸೇರಿದಂತೆ ಹಲವರು ನಟಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ಸಾಹಿತಿ ಕೆ. ಸದಾಶಿವ ಅವರ ಸಣ್ಣಕತೆಗಳಲ್ಲಿ ಒಂದಾದ ‘ಮತ್ತೆ ಮಳೆ ಹೂಯ್ಯುತಿದೆ’ ಕಥೆಯನ್ನು ಆಧರಿಸಿ ಚಿತ್ರ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಚಿತ್ರವು 1980ರ ದಶಕ ಮತ್ತು 2000ನೇ ಇಸವಿಯ ಎರಡು ವಿಭಿನ್ನ ಕಾಲಘಟ್ಟಗಳಲ್ಲಿ ಸಾಗುತ್ತದೆ. ಮೊದಲ ಜೋಡಿಯ ಪ್ರೇಮ ವಿಫಲವಾಗುತ್ತದೆಯಾದರೂ, ಎರಡನೇ ಜೋಡಿಯ ಪ್ರೇಮಕಥೆ ಯಶಸ್ಸಿನತ್ತ ಸಾಗುತ್ತದೆ. ಈ ಎರಡು ಕಥೆಗಳ ನಡುವೆ ಮೂಡುವ ಭಾವನಾತ್ಮಕ ಸನ್ನಿವೇಶಗಳು ಪ್ರೇಕ್ಷಕರ ಮನಸ್ಸನ್ನು ಸ್ಪರ್ಶಿಸುವಂತಿವೆ. ಸಿನಿಮಾದಲ್ಲಿ ಮಳೆ ಪ್ರಮುಖ ಪಾತ್ರ ವಹಿಸಿದ್ದು, ಜೀವನ ಮೌಲ್ಯಗಳ ಕುರಿತು ಅರ್ಥಪೂರ್ಣ ಸಂದೇಶಗಳನ್ನೂ ಒಳಗೊಂಡಿದೆ. ಶೃಂಗೇರಿ, ಹೊರನಾಡು, ಕೊಪ್ಪ, ಹರಿಹರಪುರ ಮತ್ತು ಆಗುಂಬೆಯಂತಹ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ಪರಮ್ ಗುಬ್ಬಿ ವಿವರಿಸಿದರು.

ಚಿತ್ರಕ್ಕೆ ಶಾಂತಾರಾವ್ ಇಪಿಲಿ ಛಾಯಾಗ್ರಹಣ, ಧನುಷ್ ವೀರ್ ಸಂಕಲನ, ಬಾಬು ಖಾನ್ ಕಲಾ ನಿರ್ದೇಶನ ಮತ್ತು ನಂದ ನೃತ್ಯ ಸಂಯೋಜನೆ ನೀಡಿದ್ದಾರೆ. ಭಾವನೆ, ನೆನಪು ಮತ್ತು ಮಳೆಯ ಸೊಗಡನ್ನು ಒಟ್ಟುಗೂಡಿಸಿರುವ ‘ಮತ್ತೆ ಮಳೆ ಹೊಯ್ಯುತ್ತಿದೆ’ ಸಿನಿಮಾ ಪ್ರೇಕ್ಷಕರಿಗೆ ಮನಮಿಡಿಯುವ ಅನುಭವ ನೀಡಲಿದೆ ಎಂಬ ವಿಶ್ವಾಸ ಚಿತ್ರತಂಡದಲ್ಲಿದೆ.