
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ: ಆ.31 ಕೈಕೊಟ್ಟ ಮುಂಗಾರು ಮಳೆಯಿಂದ ತಾಲೂಕು ಭೀಕರ ಬರಕ್ಕೆ ತತ್ತರಿಸಿದೆ. ರೈತರ ಬದುಕು ಅಕ್ಷರಶಃ ಬಸುವಳಿದು ಜೀವಕಳೆ ಕಾಣದೇ ಕಂಗಲಾಗಿದ್ದಾರೆ. ಇಂತಹ ಸಂದಿಗ್ಧ ಪ್ರಕೃತಿಯ ವಿಕೋಪ ಪರಿಸ್ಥಿತಿಯಲ್ಲಿ ವರುಣ ಕರುಣೆ ತೋರಿ ಮಳೆ ಸುರಿಸಿ ತಾಲೂಕು ಬರದಿಂದ ಮುಕ್ತಿಯಾಗಿ ಮಾಲವಿ ಜಲಾಶಯ ತುಂಬಿ ರೈತರ ಕೃಷಿಗೆ ವರದಾನವಾಗಲಿ ಎಂದು ತಾಲೂಕು ಉಲವತ್ತಿ ಗ್ರಾಮದ ಸರ್ವಧರ್ಮ ನಾಗರಿಕರು ಒಂಭತ್ತು ದಿನಗಳ ಕಾಲ ಭಜನೆ ವೃತ ಮಾಡಿ ಪ್ರಾರ್ಥಿಸಿದರು
ತಾಲ್ಲೂಕಿನ ಗದ್ದಿಕೆರೆ ಗ್ರಾಮದಲ್ಲಿಯೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಳೆಗಾಗಿ ಹಾಗೂ ಬರಗಾಲದ ಸಂಕಷ್ಟ ನಿವಾರಣೆಗಾಗಿ ಆಹೋರಾತ್ರಿ 24 ಗಂಟೆಗಳ ಕಾಲ ನಿರಂತರ ಭಜನಾ ಕಾರ್ಯಕ್ರಮ ನಡೆಯಿತು.
ವರುಣನ ಕೃಪೆ ದೊರೆಯಲಿ, ಬರಗಾಲದ ಬವಣೆ ನೀಗಲಿ ಎಂಬ ಭಕ್ತರ ಆಶಯದೊಂದಿಗೆ ಧಾರ್ಮಿಕ ಆಚರಣೆ ಹಾಗೂ ಭಜನಾ ಸೇವೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು ಭಜನೆ, ಸಂಕೀರ್ತನೆ ಹಾಗೂ ದೇವರ ನಾಮಸ್ಮರಣೆಯಲ್ಲಿ ತೊಡಗಿದರು.
ಭಜನಾ ಸೇವೆಯಲ್ಲಿ ಭಾಗವಹಿಸಿದ ಭಕ್ತರು ನಿಯಮಾನುಸಾರ ಗಂಟೆಗೊಮ್ಮೆ ಸ್ನಾನ ಮಾಡಿ, ಭಕ್ತಿಭಾವದಿಂದ ನಿರಂತರವಾಗಿ ಸೇವೆ ಸಲ್ಲಿಸಿದರು.
ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಮಳೆಗಾಗಿ ಪ್ರಾರ್ಥಿಸಿ ಇಂತಹ ಧಾರ್ಮಿಕ ಆಚರಣೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಗದ್ದಿಕೆರೆ ಪುಣ್ಯಕ್ಷೇತ್ರದ ವಿಶೇಷತೆಯಾಗಿದೆ. ಕಾರ್ಯಕ್ರಮವು ಭಕ್ತಿಭಾವದ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ನಂತರ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಿದ್ದರು.






























