
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಗರದ ಆರಾಧ್ಯ ದೈವ ಕೋಟೆ ಮಲ್ಲೇಶ್ವರಸ್ವಾಮಿಯ ವಾರ್ಷಿಕ ರಥೋತ್ಸವ ಇಂದು. ಇಲ್ಲಿನ ತೇರು ಬೀದಿಯಲ್ಲಿ ಅಲಂಕಾರಗೊಂಡ ರಥವನ್ನು ಬೆಳಿಗ್ಗೆ 11 ಗಂಟೆಗೆ ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಿ ನೂರಾರು ಭಕ್ತರು ಮಡಿ ತೇರು ಎಳೆದರು.
ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಮೇಯರ್ ಪಿ. ಗಾದೆಪ್ಪ, ದತ್ತಿ ಧಾರ್ಮಿಕ ಇಲಾಖೆಯ ಆಯುಕ್ತೆ ಸವಿತಾ, ಕಾರ್ಯನಿರ್ವಾಹಕ ಅಧಿಕಾರಿ ಸೆಲ್ವಂ ಹಾಗು ಅರ್ಚಕರು ತೇರಿಗೆ ಪೂಜೆ ಸಲ್ಲಿಸಿ. ಹೂ ಹಣ್ಣು ಅರ್ಪಿಸಿ ಮಡಿತೇರನ್ನು ಒಂದಿಷ್ಟು ದೂರಕ್ಕೆ ಎಳೆಯಲಾಯ್ತು.
ಈ ವೇಳೆ ಇಲ್ಲಿಗೆ ಆಗಮಿಸಿದ್ದ ಭಕ್ತರು ಸಹ ತೇರಿಗೆ ಹೂ ಹಣ್ಣು ಎಸೆದು, ತೆಂಗಿನ ಕಾಯಿ ಅರ್ಪಿಸಿ ನಮನ ಸಲ್ಲಿಸಿದರು. ಜೊತೆಗೆ ಕೋಟೆ ಪ್ರದೇಶದಲ್ಲಿರುವ ಮಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಿ ಭಕ್ತರ ದರ್ಶನಕ್ಜೆ ಅಣಿ ಮಾಡಲಾಗಿತ್ತು. ದೇವಸ್ಥಾನವನ್ನು ಪುಷ್ಪ ಅಲಂಕಾರದ ಮೂಲಕ ಭಕ್ತರ ಮನ ಸೆಳೆಯುವಂತೆ ಮಾಡಲಾಗಿದೆ. ಭಕ್ತರು ಸಾಲಾಗಿ ಬಂದು ದರ್ಶನ ಪಡೆಯುವ ದೃಶ್ಯ ಸಾಮಾನ್ಯವಾಗಿತ್ತು.

























