ಮನ್ ಮುಲ್ ಅಧಿಕಾರಿಗಳ ವಿರುದ್ಧ ಶಾಸಕ ಮಂಜು ಆಕ್ರೋಶ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.21:
ಮಾರ್ಗ ವಿಸ್ತರಣಾಧಿಕಾರಿಗಳೇ ಪರಿಶೀಲಿಸಿ ಹಾಲು ಅಳೆಸಿದ್ದರೂ ಹಾಲು ಫೇಲ್ ಆಗಿದೆ ಎಂದರೆ ಇದರ ಹಿಂದೆ ಇರುವ ಉದ್ದೇಶವಾದರೂ ಏನು ಎಂದು ಶಾಸಕ ಹೆಚ್.ಟಿ.ಮಂಜು ಮನ್ಮುಲ್ ಅಧಿಕಾರಿಗಳ ವಿರುದ್ದ ಕಿಡಿಕಾರಿದರು.


ಅವರು ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ಗ್ರಾಮ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಾದಾಫುರ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಪಟ್ಟಣದ ಸೀಲಿಂಗ್ ಸೆಂಟರ್ ಗೆ ಸರಬರಾಜಾಗುವ ಹಾಲು 21 ದಿನ ಫೇಲ್ ಆಗಿದೆ ಎಂದರೆ ಇದರ ಹಿಂದೆ ಇರುವ ವ್ಯಕ್ತಿಗಳು ಯಾರು ? ಇವರಿಗೆ ರೈತರ ಬಗ್ಗೆ ಸ್ವಲ್ಪವೂ ಅನುಕಂಪ ಇಲ್ಲವೇ ಉದ್ದೇಶಪೂರಕವಾಗಿ ಈ ರೀತಿ ಮಾಡಿದರೆ ಇದನ್ನು ಏನೆನ್ನಬೇಕು. ಇದರ ಹಿಂದೆ ಮನ್ಮುಲ್ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಅಧಿಕಾರಿಗಳು ಬೇಜವಾಬ್ದಾರಿತನ ಬಿಟ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡದಿದ್ದರೆ ರೈತರೇ ನಿಮ್ಮ ಕಛೇರಿಗೆ ಬಂದು ದಿಗ್ಬಂಧನ ಹಾಕುವ ದಿನಗಳು ದೂರವಿಲ್ಲ ಎಂದರು.


ಗ್ರಾಮ ಮಟ್ಟದಲ್ಲಿ ನಡೆಯುವ ಗ್ರಾಮ ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಾಗುವುದು ಕಡ್ಡಾಯವಾಗಿದ್ದು ತಮ್ಮ ತಮ್ಮ ಇಲಾಖೆಗಳ ಪ್ರಗತಿಯನ್ನು ಕಡ್ಡಾಯವಾಗಿ ಹಾಜರಾಗಿ ಅಗತ್ಯ ಮಾಹಿತಿಗಳನ್ನು ಒದಗಿಸಿಕೊಡಬೇಕು. ಹಾಗೂ ಸರ್ಕಾರದ ಕಾರ್ಯಕ್ರಮಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿವೆ ಎಂಬುದನ್ನು ಪರಿಶೀಲನೆ ಮಾಡಿ ವಿಳಂಬವಾಗದಂತೆ ಅನುಷ್ಟಾನ ಮಾಡುವ ದೃಷ್ಟಿಯಿಂದ ಪ್ರಗತಿ ಪರಿಶೀಲನಾ ಸಭೆಗಳನ್ನು ಆಯೋಜಿಸಲಾಗುತ್ತದೆ ಕೆಲವು ಇಲಾಖೆಗಳು ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಂಥಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹೆಚ್.ಟಿ.ಮಂಜು ಎಚ್ಚರಿಕೆ ನೀಡಿದರು.


ಪಿಡಿಓ ವಿರುದ್ಧ ಸಾರ್ವಜನಿಕರ ದೂರ:-ಪಿಡಿಓ ಚಂದ್ರು ವಿರುದ್ಧ ದೂರಿದ ಸಾರ್ವಜನಿಕರು ಎಲ್ಲಾ ದಾಖಲೆಗಳು ಸರಿಯಿದ್ದರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಮಾದಾಪುರ ಗ್ರಾಮದ ಸ್ವಚ್ಛತೆ, ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿಲ್ಲ ಮನೆ ನಿವೇಶನಗಳ ಈ ಸ್ವತ್ತು ಮಾಡಲು ಸುಕಾಸುಮ್ಮನೆ ಕಚೇರಿಗೆ ಅಲೆಸುತ್ತಾರೆ ನಿವೇಶನ ಒಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವಿದ್ದರು ಖಾತೆ ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡಿದರು ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಮಂಜು ಇದೇ ರೀತಿ ಮುಂದುವರಿದರೆ ಪಿಡಿಓ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ಸಭೆಯಲ್ಲಿ ತಾ.ಪಂ.ಇ.ಒ ಕೆ.ಸುಷ್ಮಾ,ತಾ.ಪಂ.ಯೋಜನಾಧಿಕಾರಿ ಶ್ರೀನಿವಾಸ್, ಗ್ರಾಮ ಪಂಚಾಯತಿ ಅಧ್ಯಕ್ಷ ಕೃಷ್ಣೇಗೌಡ, ಉಪಾಧ್ಯಕ್ಷೆ ಕೋಕಿಲ,ಪಿಡಿಓ ಚಂದ್ರು ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಸದಸ್ಯರು ಸಾರ್ವಜನಿಕರು ಹಾಜರಿದ್ದರು.