ಮನುಷ್ಯನಿಗೆ ಉತ್ತಮವಾದ ಆರೋಗ್ಯವಿರಬೇಕು: ದೇಶಿಕೇಂದ್ರ ಶ್ರೀ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.18:
ಮನುಷ್ಯ ಎಷ್ಟೇ ಸಾಧನೆಗಳನ್ನು ಮಾಡಿದರೂ ತನ್ನ ಸಾಧನೆಯ ಫಲವನ್ನು ಅನುಭವಿಸಲು ಉತ್ತಮವಾದ ಆರೋಗ್ಯವಿರಬೇಕು. ಇದನ್ನು ಮನಗಂಡು ನಮ್ಮ ಹಿರಿಯರು ಆರೋಗ್ಯವೇ ಭಾಗ್ಯ ಎಂದಿದ್ದಾರೆಂದು ಸುತ್ತೂರು ಮಠದ ಪೀಠಾಧಿಪತಿ ಶ್ರೀಗಳಾದ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿಗಳು ಹೇಳಿದರು.


ಅವರು ಪಟ್ಟಣದ ಮೈಸೂರು ರಸ್ತೆಯಲ್ಲಿ ಮಂಡ್ಯದ ಹೊಟೆಲ್ ಉದ್ಯಮಿ ಅಪೂರ್ವ ಅನಿಲ್ ಮತ್ತು ಚಿಕ್ಕಬೋರೇಗೌಡ ಅವರು ಆರಂಭಿಸಿರುವ ನ್ಯೂ ಅಪೂರ್ವ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.


ಆಧುನಿಕತೆಯ ಬದುಕಿನ ಒತ್ತಡಗಳಿಗೆ ಸಿಲುಕಿ ಮನುಷ್ಯ ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾನೆ. ನಾವು ಬೆಳೆಯುವ ಭೂಮಿ ವಿಷಯುಕ್ತವಾಗಿದ್ದು ನಾವು ತಿನ್ನುವ ಆಹಾರ ಬೆಳೆಯುವ ಮೊಳಕೆಯಲ್ಲಿಯೇ ವಿಷವಾಗುತ್ತಿದೆ. ನಾವು ಸೇವಿಸುವ ಗಾಳಿ, ತಿನ್ನುವ ಆಹಾರ, ಕುಡಿಯುವ ನೀರು ಸೇರಿದಂತೆ ಎಲ್ಲವೂ ಕಲುಷಿತಗೊಂಡಿದ್ದು ಇದರ ಪರಿಣಾಮ ನಮ್ಮ ಆರೋಗ್ಯದ ಮೇಲೆ ಆಗುತ್ತಿದೆ. ರಾಸಾಯನಿಕ ಕೃಷಿ ಪದ್ದತಿಯಿಂದ ನಾವು ಮತ್ತೆ ನಮ್ಮ ಪ್ರಾಚೀನರ ನೈಸರ್ಗಿಕ ಕೃಷಿ ಪದ್ದತಿಯ ಕಡೆ ಹೋಗಬೇಕಾದ ಅಗತ್ಯವನ್ನು ಕೃಷಿ ವಿಜ್ಞಾನಿಗಳು ಪ್ರತಿಪಾಧಿಸುತ್ತಿದ್ದಾರೆ. ಕಲುಷಿತ ಪರಿಸರದಲ್ಲಿ ಬದುಕುತ್ತಿರುವ ನಮ್ಮ ಆರೋಗ್ಯ ರಕ್ಷಣೆಗೆ ಸುಸಜ್ಜಿತ ಸೌಲಭ್ಯಗಳುಳ್ಳ ಆಸ್ಪತ್ರೆಗಳು ರಕ್ಷಾ ಕವಚದಂತೆ ಕೆಲಸ ಮಾಡುತ್ತಿವೆ. ನಗರ ಪ್ರದೇಶಗಳಿಗೆ ಸೀಮಿತವಾದ ಸುಸಜ್ಜಿತ ವೈದ್ಯಕೀಯ ಸೇವೆಗಳು ಗ್ರಾಮೀಣ ಪ್ರದೇಶಕ್ಕೆ ಲಭಿಸುವಂತಾಗಬೇಕು. ಈ ನಿಟ್ಟಿನಲ್ಲಿ ಹೋಟೆಲ್ ಉದ್ಯಮಿಯಾದ ಅನಿಲ್ ಅವರು ಕೆ.ಆರ್.ಪೇಟೆ ಪಟ್ಟಣದಲ್ಲಿ ನ್ಯೂ ಅಪೂರ್ವ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆ ಆರಂಭಿಸಿ ವೈದ್ಯಕೀಯ ಸೇವಾ ಕ್ಷೇತ್ರಕ್ಕೆ ಕಾಲಿಟ್ಟಿರುವುದು ಇತರರಿಗೂ ಮಾದರಿ ಎಂದು ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.


ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಶ್ರೀಗಳಾದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ ಕೆ.ಆರ್.ಪೇಟೆಯ ತಹಸೀಲ್ದಾರ್ ಆಗಿದ್ದ ತಮ್ಮ ಪೂರ್ವಾಶ್ರಮದ ದಿನಗಳನ್ನು ಸ್ಮರಿಸಿದರು. ಕೆ.ಆರ್.ಪೇಟೆ ನನ್ನ ತಾಯಿಯ ಮನೆಯಿದ್ದಂತೆ. ಇಲ್ಲೊಂದು ಸರ್ವ ಸೌಲಭ್ಯಗಳ ಸುಸಜ್ಜಿತ ಆಸ್ಪತ್ರೆ ಆರಂಭವಾಗಬೇಕು ಎನ್ನುವ ಕನಸು ನನಗಿತ್ತು. ಅದು ಇಂದು ಈಡೇರಿದೆ. ಗ್ರಾಮೀಣ ಜನ ತಮ್ಮ ಸುತ್ತಲ ಪರಿಸರದಲ್ಲಿಯೇ ಕೈಗೆಟುವ ದರದಲ್ಲಿ ಉತ್ತಮ ಚಿಕಿತ್ಸೆ ನೀಡುವ ಆಸ್ಪತ್ರೆಯ ಸೇವಾ ಸೌಲಭ್ಯಗಳ ಲಾಭ ಪಡೆದುಕೊಳ್ಳಬೇಕೆಂದರು.


ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಟಿ.ಮಂಎ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಪುರಸಭೆಯ ಅಧ್ಯಕ್ಷೆ ಪಂಕಜ, ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್, ತಾಲೂಕು ಒಕ್ಕಲಿಗರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಾಟನಹಳ್ಳಿ ಗಂಗಾಧರ,ತಾಲೂಕು ವೈದ್ಯಾಧಿಕಾರಿ ಡಾ.ಅಜಿತ್, ಡಾ.ಶಶಿಧರ್, ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.