ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.02- ವಿದ್ಯಾರ್ಥಿಗಳು, ಯುವಜನರು ಮತ್ತುಬರಿಸುವ ಮದ್ಯ, ಮಾದಕ ಪದಾರ್ಥಗಳ ಸೇವನೆಯ ದುಶ್ಚಟಗಳಿಗೆ ಬಲಿಯಾಗದೇ ಅವುಗಳಿಂದ ದೂರವಿರುವಂತೆ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ಮಾಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಶ್ರೀ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಚಿನ್ನದಂತಹ ಸಮಯವಾಗಿದೆ. ಇಂದಿನ ಯುವಜನರು ಸಿಗರೇಟ್, ಆಲ್ಕೋಹಾಲ್ ಗಾಂಜಾ, ಗುಟ್ಕಾ, ಅಫೀಮು ಸೇರಿದಂತೆ ಮತ್ತುಬರಿಸುವ ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿದ್ದಾರೆ. ಮಾದಕ ಪದಾರ್ಥಗಳನ್ನು ಒಂದುಬಾರಿ ಉಪಯೋಗಿಸಿದರೇ ಅದು ವ್ಯಸನವಾಗಿ ಬದಲಾಗುತ್ತದೆ. ಮಾದಕ ವಸ್ತುಗಳು ಆರೋಗ್ಯಕ್ಕೆ ಹಾನಿಕರ ಎಂಬ ಸಂದೇಶವಿದ್ದರೂ ಅವುಗಳನ್ನು ಹೆಚ್ಚಾಗಿ ಬಳಸುತ್ತಿರುವುದು ಹಾಗೂ ಎಷ್ಟೇ ದುಬಾರಿಯಾದರೂ ಅವುಗಳನ್ನು ಬಿಡುವಂತಹ ಮನಸ್ಥಿತಿ ಜನರಲ್ಲಿ ಇಲ್ಲದಿರುವುದು ವಿಪರ್ಯಾಸವಾಗಿದೆ. ಇಂತಹ ದುಶ್ಚಟಗಳ ಬಗ್ಗೆ ಯುವಜನರು ಎಚ್ಚರದಿಂದಿರಬೇಕು ಎಂದರು.
ಸಾರ್ವಜನಿಕರು ಸಹ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚು ಅರಿವು ಹೊಂದುವುದು ಅವಶ್ಯವಾಗಿದೆ. ಮದ್ಯ, ಮಾದಕ ವಸ್ತುಗಳ ಸೇವನೆಯಿಂದ ಸಂಸಾರ, ಕುಟುಂಬ, ಸಾಮಾಜಿಕ ವಾತಾವರಣ ಹಾಳಾಗಲಿದೆ. ಇದನ್ನು ಮನಗಂಡಿದ್ದ ಮಹಾಂತ ಶಿವಯೋಗಿ ಸ್ವಾಮಿಯವರು ಊರೂರನ್ನು ಸುತ್ತಿ ಭಿಕ್ಷೆ ಬೇಡಿ ಜನರು ತಮ್ಮಲ್ಲಿರುವ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿ ಎಂದು ಸಾರಿ ಜನಜಾಗೃತಿ ಉಂಟುಮಾಡಿದ್ದರು. ಅವರ ಹೆಸರಿನಲ್ಲಿ ವ್ಯಸನ ಮುಕ್ತ ದಿನ ಆಚರಿಸುತ್ತಿರುವುದು ಹೆಚ್ಚು ಅರ್ಥಪೂರ್ಣವಾಗಿದೆ. ವಿದ್ಯಾರ್ಥಿಜೀವನದಲ್ಲಿ ಶಿಕ್ಷಣ ಮುಖ್ಯವಾದ ಘಟ್ಟ. ದುಶ್ಚಟಗಳನ್ನು ಕಲಿಯಬೇಡಿ, ಕಲಿತಿದ್ದರೆ ಅದರಿಂದ ಹೊರಬರುವಂತೆ ಶಾಸಕರಾದ ಪುಟ್ಟರಂಗಶೆಟ್ಟಿ ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ಮಾತನಾಡಿ ಮಕ್ಕಳು ಈ ದೇಶದ ಸತ್ಪ್ರಜೆಗಳು, ಮುಂದೆ ಬಾಳಿ ಬದುಕುವವರು, ಈ ದೇಶದ ಭವಿಷ್ಯ ಯುವಜನತೆಯ ಮೇಲೆ ಅವಲಂಬಿತವಾಗಿದೆ. ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯ ದುಶ್ಚಟಗಳಿಗೆ ಯುವಜನತೆ ಬಲಿಯಾಗದೇ ಉತ್ತಮ ಶಿಕ್ಷಣ ಪಡೆಯಬೇಕು. ಜ್ಞಾನಿಗಳಾಗಬೇಕು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು. ಉನ್ನತ ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳಬೇಕು. ತಂದೆ-ತಾಯಿ, ಪೋಷಕರು, ಗುರುಗಳು, ಶಾಲೆಗಳಿಗೆ ಕೀರ್ತಿ ತರಬೇಕು ಎಂದರು.
ವಿದ್ಯಾರ್ಥಿಗಳು ಗ್ರಂಥಾಲಯಗಳಲ್ಲಿ ಹೆಚ್ಚಿನ ಅವಧಿ ಕಳೆಯಬೇಕು. ಪ್ರತಿ ಗ್ರಾಮಗಳಲ್ಲಿ ಗುಡಿಗೋಪುರಗಳನ್ನು ಕಟ್ಟುವ ಬದಲು ಶಾಲೆ, ಗ್ರಂಥಾಲಯಗಳನ್ನು ಕಟ್ಟುವಂತೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದಾರೆ. ಸ್ವಾಮಿ ವಿವೇಕಾನಂದರು ವಿದ್ಯಾರ್ಥಿಗಳು ಗುರಿ ಮುಟ್ಟುವವರೆಗೆ ನಿಲ್ಲದಿರು ಎಂದಿದ್ದಾರೆ. ಅವರ ಧ್ಯೇಯೋದ್ದೇಶಗಳನ್ನು ಅರ್ಥೈಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಾಡಾ ಅಧ್ಯಕ್ಷ ಮರಿಸ್ವಾಮಿ ಅವರು ತಿಳಿಸಿದರು.
ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ ಅವರು ಮಾತನಾಡಿ ವಿದ್ಯಾರ್ಥಿಜೀವನ ಒಮ್ಮೆ ಕಳೆದುಹೋದರೆ ಮತ್ತೆ ಸಿಗದು. ಇದರ ಮಹತ್ವವನ್ನು ಅರಿತು ಯಾವ ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಶ್ಚಟಗಳಿಗೆ ದಾಸರಾಗಬಾರದು. ತಂದೆ-ತಾಯಿ ವಿದ್ಯಾರ್ಥಿಗಳ ಮೇಲೆ ಇಟ್ಟಿರುವ ನಂಬಿಕೆ, ಕಾಳಜಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಈ ದೇಶದ ಆಸ್ತಿಯಾಗಿರುವ ವಿದ್ಯಾರ್ಥಿಗಳು ಉತ್ತಮ ಜೀವನವನ್ನು ವ್ಯರ್ಥ ಮಾಡಿಕೊಳ್ಳಬಾರದು ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ವ್ಯಸನ ಮುಕ್ತ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ಪಿ.ಎಸ್. ಗುರುಪ್ರಸಾದ್, ಸೆಂಟ್ ಕಿಟ್ ಮತ್ತು ನೆವಿಸ್ (ವೆಸ್ಟ್ ಇಂಡೀಸ್) ನ ವಿಂಡ್ಸರ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸನ್ ಮತ್ತು ಬ್ಯಿಹೇವಿಯರ್ ಸೈನ್ಸಸ್ ವಿಭಾಗದ ಮುಖ್ಯಸ್ಥರು ಹಾಗೂ ಪಾಸಿಟಿವ್ ಸೈಕಾಲಜಿಸ್ಟ್ ಪ್ರಾಧ್ಯಾಪಕರಾದ ಡಾ. ವಿ. ಸಂಪತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎ. ರಮೇಶ್, ವಾರ್ತಾ ಸಹಾಯಕರಾದ ಸುರೇಶ್‍ಕುಮಾರ್, ಕಾಲೇಜಿನ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪಲ್ಲವಿ ಇಳಕಲ್, ಪಿಯು ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಸೋಮಣ್ಣ, ಇತರರು ಕಾರ್ಯಕ್ರಮದಲ್ಲಿ ಇದ್ದರು.


























