
ಬಿ. ನಾಗರಾಜ ಕೂಡ್ಲಿಗಿ.
ಕೂಡ್ಲಿಗಿ. ಜು. 11 :- ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡುವ ಸುಸಮಯ, ಬಂದ ಬೀಗರು ಬಿಜ್ಜರುಗಳ ನಡುವೆ ತುಂಬಿದ ಮನೆಯಲ್ಲಿ ತಾನು ರಚಿಸಿದ ಪುಸ್ತಕವನ್ನು ಸಾಹಿತ್ಯಸಕ್ತರ ಸಮ್ಮುಖದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಕನಸು ನನಸು ಮಾಡಿಕೊಂಡ ಮದುಮಗ ಮರುದಿನವೇ ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟು “ಆದರ್ಶ” ಮದುವೆಗೆ ಸಾಕ್ಷಿಯಾಗಿದ್ದಾನೆ.
ಇಂತಹ ಅಪರೂಪದ ಆದರ್ಶ ಮದುವೆಯಾಗಿದ್ದು ಕೂಡ್ಲಿಗಿ ತಾಲೂಕಿನ ಹುಲಿಕೆರೆ ಎಂಬ ಪುಟ್ಟಗ್ರಾಮದಲ್ಲಿ ಅಲ್ಲೊಂದು ಸಜ್ಜನ ಕುಟುಂಬ ಇದೆ ಅವರ ಕುಟುಂಬದಲ್ಲಿ ಸಾವಯವ ಕೃಷಿ,ಉಪನ್ಯಾಸಕರು, ಪತ್ರಕರ್ತರು,ಉದ್ಯಮಶೀಲರು ಇದ್ದಾರೆ ಎಲ್ಲಾ ಇದ್ದರೂ ಆಡಂಬರ, ಅದ್ದೂರಿ ಮಾಡದೇ ಸರಳ ಸಜ್ಜನಿಕೆಯ ಜೀವನ ನಡೆಸುವ ಕುಟುಂಬದ ಕುಡಿಯೊಂದು ತಾನು ಸಮಾಜದಲ್ಲಿ ಕಂಡುಂಡ ಬದುಕಿನ ವೈರುಧ್ಯಗಳಿಗೆ ಕಥೆಗಳ ರೂಪ ಕೊಟ್ಟು ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿ ಪುಸ್ತಕ ಮುದ್ರಣಗೊಳಿಸಿ ತನ್ನ ಮದುವೆ ಮುಹೂರ್ತದ ಹಿಂದಿನ ದಿನವೇ ಕನಸಿನ ಪುಸ್ತಕವಾದ ‘ಸಮತ್ವ ಕಂಡ ಸಮಾಜ ‘ ಎನ್ನುವ ಕಥಾ ಆಧಾರಿತ ನನಸಿನ ಬುತ್ತಿಯ ಪುಸ್ತಕವನ್ನು ಬೆಂಗಳೂರು, ಕೂಡ್ಲಿಗಿ ಭಾಗದ ಕೆಲ ಸಾಹಿತಿಗಳು, ಸಾಹಿತ್ಯಸಕ್ತರ ಸಮ್ಮುಖದಲ್ಲಿ ಶುಭಸಂಜೆಯ ಮದುವೆ ಸಂಭ್ರಮದ ಅಲಂಕಾರದ ಕುಟುಂಬಸಮೇತರೆಲ್ಲರೂ ಸೇರುವ ಮಹಡಿ ಮನೆಯೊಂದರಲ್ಲಿ ಪುಸ್ತಕ ಲೋಕಾರ್ಪಣೆಗೊಂಡಿತು.
ಅರೆ ಬರೀ ಪುಸ್ತಕ, ಕನಸಿನ ಬುತ್ತಿ ಎಂದೆಲ್ಲ ಹೇಳುತ್ತಿದ್ದು ಯಾರಪ್ಪ ಈ ಪುಸ್ತಕ ಕರ್ತೃ ಎಂದು ಹೇಳುತ್ತಿಲ್ಲ ಎಂದುಕೊಳ್ಳುತ್ತಿದ್ದೀರಾ ಈತನೇ ಮದುವೆ ಸಮಾರಂಭದ ಮುಖ್ಯ ಕೇಂದ್ರಬಿಂದು ಮದುಮಗ ಆದರ್ಶ ಸಜ್ಜನ್ ಹೆಸರಿಗೆ ತಕ್ಕಂತೆ ಆದರ್ಶ ವ್ಯಕ್ತಿತ್ವದ ಯುವಕ ಎಂದರೆ ತಪ್ಪಾಗದು ಇಂದು ಎಲ್ಲಾ ಇದ್ದು ಅದರ ಮದ್ಯ ಮೋಜು ಮಸ್ತಿ ಮಾಡುವ ಯುವಕರನ್ನು ನಾವು ನೋಡಿದ್ದೇವೆ ಆದರೆ ಕುಟುಂಬಕ್ಕೆ ಆದರ್ಶ ತಾನು ಒಂದು ಪುಸ್ತಕ ರಚನೆ ಮಾಡುವ ಮೂಲಕ ಇಡೀ ಕುಟುಂಬದ ಆದರ್ಶಪ್ರಾಯನಾಗಿದ್ದಾನೆ ಈತನ ಪುಸ್ತಕ ರಚನೆಗೆ ತಂದೆ ತಾಯಿ ಸಹಕಾರ ನೀಡಿದ್ದಾರೆ ಅಲ್ಲದೆ ಆದರ್ಶ ತನ್ನ ಅಜ್ಜನಂತೆ ಬುದ್ದಿವಂತಿಕೆ ಇದೆ ಎನ್ನುವ ನೆನಪಿನಲ್ಲಿ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಆದರ್ಶನ ತಂದೆ ಆನಂದಭಾಷ್ಪ ಸುರಿಸಿ ತನ್ನ ತಂದೆಯ ನೆನಪು ಮಾಡಿ ಸಜ್ಜನ್ ಕುಟುಂಬದ ಕುಡಿ ಸಾಹಿತ್ಯವಲಯದ ಹೊಸ ಚಿಗುರು ಎಂದು ಮಗನನ್ನು ತಂದೆ ಬಣ್ಣಿಸಿದರು.
ಇಂತಹ ಅಪರೂಪದ ಕಾರ್ಯಕ್ರಮಕ್ಕೆ ಹಿರಿಯ ಬರಹಗಾರ ಹಾಗೂ ದಿನಪತ್ರಿಕೆಯೊಂದರ ಪುರವಣಿ ಸಂಪಾದಕ ಎ. ಆರ್. ಮಣಿಕಾಂತ್ ಆಗಮಿಸಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡುತ್ತ ಆದರ್ಶ ಸಜ್ಜನ್ ರಚನೆಯ ಪುಸ್ತಕವು ತಾನು ಕಂಡ ಸಮಾಜದ ಸಮತ್ವವನ್ನು ಪುಸ್ತಕ ರೂಪದಲ್ಲಿ ಹೊರ ತಂದು ಬರಹಲೋಕಕ್ಕೆ ಪಾದಾರ್ಪಣೆ ಮಾಡಿದ್ದಾನೆ ಈ ಆದರ್ಶ ವ್ಯಕ್ತಿತ್ವದ ಯುವಕನಿಗೆ ಶುಭವಾಗಲಿ ಮುಂದೆ ಈ ಯುವಬರಹಗಾರನಿಂದ ಸಮಾಜಕ್ಕೆ ಮನ ಮುಟ್ಟುವ ಹೆಚ್ಚು ಹೆಚ್ಚು ಉತ್ತಮ ಪುಸ್ತಕಗಳು ಹೊರತರಲಿ ಎಂದು ತಿಳಿಸಿದರು ಸಾಹಿತ್ಯ ಚಿಂತನೆ ಜೊತೆಗೆ ನವಜೀವನದ ಬದುಕಿಗೆ ಅಡಿ ಇಡುವ ದಾಂಪತ್ಯ ಜೀವನವು ಸುಖವಾಗಿರಲಿ ಎಂದು ತಿಳಿಸಿದರು.
ನಾಟಕ ರಚನೆಗಾರರು ಹಾಗೂ ಹಿರಿಯ ಸಾಹಿತಿಗಳಾದ ಎಂ ಬಿ ಅಯ್ಯನಹಳ್ಳಿ ಎನ್ ಎಂ ರವಿಕುಮಾರ್,ಪತ್ರಕರ್ತರು ಹಾಗೂ ಸಾಹಿತಿ ಭೀಮಣ್ಣ ಗಜಾಪುರ ಮಾತನಾಡಿ ಎಚ್.ವಿ. ಆದರ್ಶ ಸಜ್ಜನ ತಾನು ಕಂಡುಂಡ ಬದುಕಿನ ವೈರುಧ್ಯಗಳಿಗೆ ಕಥೆಗಳ ರೂಪ ಕೊಟ್ಟು ಸಾಹಿತ್ಯ ಲೋಕಕ್ಕೆ ಪಾದಾ ರ್ಪಣೆ ಮಾಡಿದ್ದಾನೆ. ಮದುವೆಯ ದಿನವೇ ಈ ಪುಸ್ತಕ ಲೋಕಾರ್ಪಣೆ ಮಾಡಬೇಕೆಂಬ ಅವರ ಬಹು ದಿನದ ಸಂಕಲ್ಪ ಈಡೇರಿತು. ಮದುವೆಗೆ ಸಂಬಂಧಿಕರಿಗೆ, ಕಾರ್ಯಕ್ರಮಕ್ಕೆ ಆಗಮಿಸಿದಸಾಹಿತ್ಯಾಸಕ್ತರಿಗೆ ಮದುವೆಯ ಸಾಂಪ್ರದಾಯಿಕ ಆಚರಣೆಗಳ ಜೊತೆಗೆ ಪುಸ್ತಕ ಬಿಡುಗಡೆಯೂ ಹೊಸ ಸ್ಪರ್ಶ ಪಡೆಯಿತು ಎಂದರು.
ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ ಬೇವೂರು ಪುಸ್ತಕದಲ್ಲಿ ಬರಹಗಾರರನ ಸಾಮಾಜಿಕ ಚಿಂತನೆ, ಸಮಾಜದಲ್ಲಿ ಸಮತ್ವ ಜೀವನಕ್ಕೆ ಅರ್ಥೈಸುವ ಬರಹದ ಬಗ್ಗೆ, ಯುವಕನ ಮುಂದಿನ ಭವಿಷ್ಯದ ಕಲ್ಪನೆ ಬಗ್ಗೆ ಮಾತನಾಡಿದರು.
ಕಾನಾಮಾಡಗು ದಾಸೋಹಮಠದ ಐಮಡಿ ಶರಣಾರ್ಯರು ಸಾನಿಧ್ಯ ವಹಿಸಿದ್ದರು.ಕಾರ್ಯನಿರತ ಪತ್ರಕರ್ತರ ಸಂಘದ ಕೂಡ್ಲಿಗಿ ತಾಲೂಕು ಅಧ್ಯಕ್ಷ ಹುಡೇo ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಅಜೇಯ ಕುಮಾರ, ಮಂಜುನಾಥ, ಈಶ್ವರಪ್ಪ, ಮಾರೇಶ, ಪ್ರಗತಿಪರ ಕೃಷಿಕ ಎಚ್.ವಿ. ಸಜ್ಜನ, ಸಾರಂಗಮಠದ ಸಂಗಮೇಶ್ವರಯ್ಯ, ವಸಂತ್ ಸಜ್ಜನ, ನಿರಂಜನ, ಸ್ವರೂಪಾನಂದ ಸೇರಿದಂತೆ ನೂರಾರು ಕುಟುಂಬದ ಸದಸ್ಯರು ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಸಾಕ್ಷಿಯಾಗಿದ್ದರು.
ನಾನು ಕಂಡ ಸಮಾಜದ ಆಗು-ಹೋಗುಗಳ ಬಗ್ಗೆ ಪುಸ್ತಕದ ರೂಪಕ್ಕಿಳಿಸಿರುವೆ. ನನ್ನ ಮದುವೆಯ ಸಂದರ್ಭದಲ್ಲಿಯೇ ಈ ಪುಸ್ತಕ ಬಿಡಿಗಡೆ ಮಾಡುವ ಕನಸಿತ್ತು. ಅದು ಈಗ ನನಸಾಗಿದೆ, ಈ ಬರಹಗಳಿಗೆ ಪ್ರೇರಣೆ ನೀಡಿದ ಹಿರಿಯರ, ಕುಟುಂಬದ ಎಲ್ಲರಿಗೂ ನಾನು ಚಿರಋಣಿ – ಎಚ್.ವಿ.ಆದರ್ಶ ಸಜ್ಜನ್. ಮದುಮಗ.ಹಾಗೂ ಪುಸ್ತಕದ ಕರ್ತೃ.































