
ಸಂಜೆವಾಣಿ ವಾರ್ತೆ
ಹೊಸಪೇಟೆ.ಜು.10 ವಿಜಯನಗರ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಚುರುಕಿನಿಂದ ಸಾಗುತ್ತಿದ್ದು, ಜಿಲ್ಲೆಯಾದ್ಯಂತ ಈವರೆಗೆ ಒಟ್ಟು 11,42,732 ಇ ಫಾರ್ಮ್ ನಮೂನೆಗಳ ವಿತರಣೆ ಪೈಕಿ ಈಗಾಗಲೇ 11,33,432 (ಶೇ.99.19) ಫಾರ್ಮ್ ಗಳನ್ನು ವಿತರಿಸಲಾಗಿದ್ದು, ಇನ್ನು 9300 ಫಾರ್ಮ್ ಗಳು ಮಾತ್ರ ವಿತರಣೆಗೆ ಬಾಕಿ ಉಳಿದಿವೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಆದ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.
ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಒಟ್ಟು 11,42,732 ಮತದಾರರಿದ್ದು. ಈಗಾಗಲೇ ಶೇ. 94 ರಷ್ಟು ಮತದಾರರ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ಜೂನ್ 30 ರಿಂದ ಅಭಿಯಾನ ಪ್ರಾರಂಭವಾಗಿದ್ದು, ಜುಲೈ 29 ರವರೆಗೆ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಹಾಗೂ ಡಿಜಿಟಲೀಕರಣ ಪ್ರಕ್ರಿಯೆ ನಡೆಯಲಿದೆ.
ವಿತರಿಸಲಾದ ಗಣತಿ ನಮೂನೆಗಳ ಪೈಕಿ ಒಟ್ಟು 1,78,752 (ಶೇ 15.63) ನಮೂನೆಗಳನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದೆ. ಇದಲ್ಲದೆ, 932 ಮತದಾರರು ಸ್ವತಃ ಆನ್ಲೈನ್ ಮೂಲಕ ನಮೂನೆಗಳನ್ನು ಸಲ್ಲಿಸಿದ್ದಾರೆ.
ಬಿಎಲ್ಒಗಳ ಪರಿಶೀಲನೆ ವೇಳೆ ಜಿಲ್ಲೆಯಲ್ಲಿ 1583 ಮೃತ ಮತದಾರರು ಹಾಗೂ ಖಾಯಂ ಆಗಿ ಸ್ಥಳಾಂತರಗೊಂಡಿರುವ 1000 ಮತದಾರರರನ್ನು ಗುರುತಿಸಲಾಗಿದೆ. ಅದಷ್ಟೇ ಅಲ್ಲದೇ ಈಗಾಗಲೇ 400 ದಾಖಲಾಗಿರುವವರು ಹಾಗೂ 14 ಜನ ಸಂಪರ್ಕಕ್ಕೆ ಸಿಗದ ಅಥವಾ ಅಲಭ್ಯವಿರುವ ಮತದಾರರನ್ನು ಗುರುತಿಸಿ ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದ್ದಾರೆ.

































