
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.21:- ಜೆಡಿಎಸ್ ಒಂದು ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿದ್ದು ಪ್ರಜಾಪ್ರಭುತ್ವದ ನೆಲೆಗಟ್ಟನ್ನು ಮತ್ತಷ್ಟು ಭದ್ರಗೊಳಿಸುವ ದೃಷ್ಠಿಯಿಂದ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಹಕರಿಸುತ್ತಿದೆ. ಜೆಡಿಎಸ್ ಪಕ್ಷದ ಕಾರ್ಯಕರ್ತರು ರಾಜ್ಯದಲ್ಲಿ ಅತಿ ಶೀಘ್ರವಾಗಿ ನಡೆಯುವ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯಲ್ಲಿ ಉತ್ಸುಕತೆಯಿಂದ ಭಾಗವಹಿಸುವಂತೆ ಶಾಸಕ ಹೆಚ್.ಟಿ.ಮಂಜು ಕರೆ ನೀಡಿದರು.
ಅವರು ಪಟ್ಟಣದ ಯಶಸ್ವಿನಿ ಕಲ್ಯಾಣ ಮಂಟಪದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ವಿಶೇಷ ಸಮಗ್ರ ಮತದಾರರ ಪಟ್ಟಿಯ ಪರಿಷ್ಕರಣೆಗೆ ತರಬೇತುಗೊಂಡಿರುವ ಭೂತ್ ಮಟ್ಟದ ಏಜೆಂಟರ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ 2002 ರಿಂದ ಇದುವರೆಗೂ ಮತದಾರರ ಪಟ್ಟಿಯ ಪರಿಷ್ಕರಣೆಯಾಗಿಲ್ಲ. ಇದೀಗ ಕೇಂದ್ರ ಸರ್ಕಾರ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಚಾಲನೆ ನೀಡಿದೆ. ಮತದಾರರ ಪಟ್ಟಿಯಲ್ಲಿ ಸ್ಥಳೀಯವಾಗಿ ಇರುವ ನ್ಯೂನ್ಯತೆಗಳನ್ನು ಸರಿಪಡಿಸಿ ಅರ್ಹ ಮತದಾರರಿಗೆ ಮತದಾನದ ಅಧಿಕಾರ ನೀಡುವುದು ಇದರ ಉದ್ದೇಶ. ಈ ಕಾರ್ಯದಲ್ಲಿ ಭಾಗವಹಿಸಲು ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೂ ಅವಕಾಶ ಕಲ್ಪಿಸಲಾಗಿದೆ. ನಕಲಿ ಮತದಾನವನ್ನು ತಡೆಗಟ್ಟುವುದು ಇದರ ಮೂಲ ಉದ್ದೇಶ. ನೈಜ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದಾಗ ಮಾತ್ರ ಪ್ರಜಾಪ್ರಭುತ್ವ ಬಲಿಷ್ಠಗೊಳ್ಳುತ್ತದೆ. ಮತದಾರರ ಪಟ್ಟಿಯ ಪರಿಷ್ಕರಣೆಯಿಂದ ನಕಲಿ ಮತದಾನ ನಿಲ್ಲುವುದಲ್ಲದೆ ಒಬ್ಬ ವ್ಯಕ್ತಿ ಎರಡೆರಡು ಕಡೆ ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವುದು ತಪ್ಪುತ್ತದೆ. ಇದರಿಂದ ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದಲ್ಲಿಯೂ ಕನಿಷ್ಠ 15 ರಿಂದ 20 ಸಾವಿರ ಮತದಾರರ ಸಂಖ್ಯೆ ಕಡಿಮೆಯಾಗಲಿದೆ. ಮತದಾರರ ಪಟ್ಟಿಯ ಪರಿಷ್ಕರಣನೆಯಿಂದ ಬಿಹಾರದಲ್ಲಿ 47 ಲಕ್ಷ, ಪಶ್ಚಿಮ ಬಂಗಾಳದಲ್ಲಿ 58 ಲಕ್ಷ, ರಾಜಸ್ಥಾನದಲ್ಲಿ 41 ಲಕ್ಷ, ತಮಿಳುನಾಡಿನಲ್ಲಿ 97 ಲಕ್ಷ, ಗುಜರಾತ್ ರಾಜ್ಯದಲ್ಲಿ 73 ಲಕ್ಷ ಮತದಾರರ ಹೆಸರು ಕಡಿಮೆಯಾಗಿದೆ ಎಂದ ಶಾಸಕ ಹೆಚ್.ಟಿ.ಮಂಜು ಕಾರ್ಯಕರ್ತರು ಯಾವುದೇ ರೀತಿಯ ಆಸೆ ಆಮಿಷಗಳಿಗೆ ಬಲಿಯಾಗದೆ ಮತದಾರ ಪರಿಷ್ಕರಣೆಯಲ್ಲಿ ಭಾಗವಹಿಸಬೇಕು. ಮತದಾರ ಪಟ್ಟಿಯ ಪರಿಷ್ಕರಣೆಯ ಅನಂತರ ಮುಂದಿನ ದಿನಗಳಲ್ಲಿ ಬರುವ ಗ್ರಾಮ ಪಂಚಾಯತಿ, ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ಗೆಲ್ಲುವತ್ತ ಗಮನ ಹರಿಸಬೇಕು. ನಿಷ್ಠಾವಂತ ಕಾರ್ಯಕರ್ತರು ಪಕ್ಷದ ಆಸ್ತಿಯಾಗಿದ್ದು ಕಾರ್ಯಕರ್ತರ ಕಷ್ಠಸುಖಗಳ ಜೊತೆ ನಾನಿದ್ದೇನೆಂದರು.
ಪಕ್ಷದ ವತಿಯಿಂದ ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿ ಪ್ರದೀಪ್ ಪಕ್ಷದ ಬಿಎಲ್‍ಎ ಗಳಿಗೆ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳ ಬಗ್ಗೆ ಅಗತ್ಯ ಮಾಹಿತಿ ನೀಡಿದರು.
ಪಕ್ಷದ ರಾಜ್ಯ ವಕ್ತಾರ ಗದ್ದೆಹೊಸೂರು ಅಶ್ವಿನ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಟಿ.ಬಲದೇವ್, ಮುಖಂಡರುಗಳಾದ ಕುರುಬರಹಳ್ಳಿ ನಾಗೇಶ್, ಮಲ್ಲೇನಹಳ್ಳಿ ಮೋಹನ್, ವಿ.ಎಂ.ಮಹದೇವೇಗೌಡ, ಹೆಚ್.ಕೆ.ಅಶೋಕ್, ಹೆಚ್.ಟಿ.ಲೋಕೇಶ್, ಲಾಯರ್ ಧನಂಜಯ, ದಿಶಾ ಸಮಿತಿ ಸದಸ್ಯ ನರಸನಾಯಕ್, ಬೂಕನಕೆರೆ ಹುಲ್ಲೇಗೌಡ, ಮಾಕವಳ್ಳಿ ವಸಂತಕುಮಾರ್, ಬಸವಲಿಂಗಪ್ಪ, ಕಿಕ್ಕೇರಿ ಮಧು, ಸಂಗಾಪುರ ಪುಟ್ಟಸ್ವಾಮಿ, ಸುಜೇಂದ್ರ ಕುಮಾರ್, ತೋಂಟಪ್ಪ ಶೆಟ್ಟಿ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿದ್ದರು.






























