
ಸಂಜೆವಾಣಿ ನ್ಯೂಸ್
ಮೈಸೂರು, ಆ.30:- ಕರ್ನಾಟಕದಲ್ಲಿ ಸರ್ಕಾರಕ್ಕಿಂತಲೂ ಮಠ-ಮಾನ್ಯಗಳು, ಖಾಸಗಿ ಸಂಸ್ಥೆಗಳು ಶೈಕ್ಷಣಿಕ ಹಾಗೂ ಧಾರ್ಮಿಕ ಸಂಪತ್ತನ್ನು ಸೃಷ್ಟಿಸಿವೆ. ಈ ಸಂಸ್ಥೆಗಳು ಸರ್ಕಾರದ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲದಿದ್ದರೆ ನಮ್ಮ ರಾಜ್ಯ ಶೈಕ್ಷಣಿಕವಾಗಿ, ತಾಂತ್ರಿಕವಾಗಿ ಇಷ್ಟು ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮಿಗಳ 111ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 46,302 ಸರ್ಕಾರಿ ಶಾಲೆಗಳಿದ್ದು ಅವುಗಳಲ್ಲಿ 36 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, 24,000 ಖಾಸಗಿ ಹಾಗೂ ಮಠಗಳ ಶಾಲೆಗಳಲ್ಲೇ 57 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರಕ್ಕೆ ಮಾಡಲು ಸಾಧ್ಯವಾಗದ ಬೃಹತ್ ಶೈಕ್ಷಣಿಕ ಸೇವೆಯನ್ನು ಮಠಗಳು ಮತ್ತು ಖಾಸಗಿ ಸಂಸ್ಥೆಗಳು ಮಾಡುತ್ತಿವೆ. ಇಂತಹ ಸಂಸ್ಥೆಗಳಿಗೆ ಸದಾ ಬೆಂಬಲ ಮತ್ತು ಪೆÇ್ರೀತ್ಸಾಹ ನೀಡುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.
ರಾಜೇಂದ್ರ ಸ್ವಾಮಿಗಳು ಕೇವಲ 12ನೇ ವಯಸ್ಸಿನಲ್ಲಿ, ಆಟವಾಡುವ, ಕಲಿಯುವ ಪ್ರಾಯದಲ್ಲೇ ಮಠದ ಪೀಠ ಅಲಂಕರಿಸಿ ಸಮಾಜಕ್ಕೆ ಮಾರ್ಗದರ್ಶನ ನೀಡಲು ಪ್ರಾರಂಭಿಸಿದರು. ಇಡೀ ದಕ್ಷಿಣ ಭಾರತದಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿದ ಅವರು, ಆ ಕಾಲದಲ್ಲೇ ಅನ್ನ ದಾಸೋಹ ಮತ್ತು ಅಕ್ಷರ ದಾಸೋಹ ಪ್ರಾರಂಭಿಸಿದರು. ಇಂದಿನ ಸರ್ಕಾರಗಳು ಜಾರಿಗೆ ತಂದಿರುವ ಉಚಿತ ಶಿಕ್ಷಣ ಮತ್ತು ಬಿಸಿಊಟದಂತಹ ಯೋಜನೆಗಳಿಗೆ ಶ್ರೀಗಳೇ ನಿಜವಾದ ಮುನ್ನುಡಿ ಬರೆದವರು. ಪ್ರಸ್ತುತ ಮಠದ ನೇತೃತ್ವ ವಹಿಸಿರುವ ದೇಶಿಕೇಂದ್ರ ಸ್ವಾಮಿಗಳು ಕಳೆದ 40ಕ್ಕೂ ಹೆಚ್ಚು ವರ್ಷಗಳಿಂದ ಗುರುಗಳ ಹೆಜ್ಜೆಯಲ್ಲೇ ಸಾಗಿ ಸಮಾಜ ಸೇವೆ ಮಾಡುತ್ತಿರುವುದನ್ನು ಶ್ಲಾಘಿಸಿದರು.
ನಾನು ಕೆಪಿಸಿಸಿ ಅಧ್ಯಕ್ಷನಾದ ಬಳಿಕ ಸಿದ್ದರಾಮಯ್ಯನವರ ಜೊತೆಗೂಡಿ ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆ ಕೈಗೊಳ್ಳುವ ಮುನ್ನ ಸುತ್ತೂರು ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೆ. ಆಗ ಶ್ರೀಗಳು ಸುಮಾರು 2,000 ಮಕ್ಕಳನ್ನು ಒಟ್ಟುಗೂಡಿಸಿ, ಮಕ್ಕಳ ಕೈಯಿಂದ ಪ್ರಾರ್ಥನೆ ಮಾಡಿಸಿ ಆಶೀರ್ವದಿಸಿದ್ದರು. ಆ ಪ್ರಾರ್ಥನೆಯ ಬಲದಿಂದಲೇ ನಮ್ಮ ಹೋರಾಟ ಯಶಸ್ವಿಯಾಗಿ, ಇಂದು ಸುಪ್ರೀಂ ಕೋರ್ಟ್‍ನಲ್ಲಿ ಮೇಕೆದಾಟು ಯೋಜನೆಗೆ ಅನುಕೂಲಕರವಾದ ಮಾರ್ಗದರ್ಶನ ಸಿಕ್ಕಿದೆ ಎಂದರು.
ಸಂಕಷ್ಟದಲ್ಲಿ ಶ್ರೀಗಳ ಬೆಂಬಲ: ನನ್ನ ಆರೋಗ್ಯ ಕೆಟ್ಟಾಗ, ವೈಯಕ್ತಿಕವಾಗಿ ಕಷ್ಟ ಬಂದಾಗ ಹಾಗೂ ನಾನು ಜೈಲಿಗೆ ಹೋಗಿ ಬಂದಂತಹ ಸಂದರ್ಭಗಳಲ್ಲಿ ದೇಶಿಕೇಂದ್ರರು ಸ್ವತಃ ನನ್ನ ಮನೆಗೆ ಬಂದು ಧೈರ್ಯ ತುಂಬಿ ಆಶೀರ್ವದಿಸಿದ್ದಾರೆ. ಈ ಋಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾದರು.
ನನಗೆ ಸಿಕ್ಕಿರುವುದು ಸಿಂಹಾಸನವಲ್ಲ: ನಾಡಿನಲ್ಲಿ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ ಅನೇಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದೇ ರೀತಿ ರಾಜ್ಯಕ್ಕೆ ಸಾಕ್ಷಿ ಗುಡ್ಡೆ ಬಿಟ್ಟು ಹೋಗುವಂತೆ ಕೆಲಸ ಮಾಡುವೆ. ನನಗೆ ಸಿಕ್ಕಿರುವುದು ಸಿಂಹಾಸನವಲ್ಲ. ಜನರ ಸೇವೆಗೆ ಕೊಟ್ಟ ಅವಕಾಶವೆಂದು ಕೆಲಸ ಮಾಡುತ್ತೇನೆ. ಇದಕ್ಕೆ ಜನರ ಮತ್ತು ಮಠಾಧೀಶರ ಆಶೀರ್ವಾದ ಮುಖ್ಯ ಎಂದರು.
ಇದೇ ವೇಳೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಜೆಎಸ್‍ಎಸ್ ವಿಜ್ಞಾನ ವಾಹಿನಿಗೆ ಚಾಲನೆ ನೀಡಿದರು. ಮ್ಯಾನ್ ವಿತ್ ಡಿವೈನಿಟಿ ಪೂಜ್ಯ ರಾಜೇಂದ್ರ ಶ್ರೀ ಕೃತಿಯನ್ನು ಪಶುಸಂಗೋಪನೆ ಸಚಿವ ಸಿ.ಪುಟ್ಟರಂಗಶೆಟ್ಟಿ ಬಿಡುಗಡೆ ಮಾಡಿದರು. ರಾಜೇಂದ್ರ ನುಡಿನಮನ 2ನೇ ಆವೃತ್ತಿ, ನಮ್ಮೊಡನಿದ್ದ ದೈವ ಪೂಜ್ಯ ರಾಜೇಂದ್ರ ಶ್ರೀ, ಪ್ರಸಾದ ವಿಶೇಷ ಸಂಚಿಕೆ, ಜೆಎಸ್‍ಎಸ್ ಮಾಸಪತ್ರಿಕೆ ಬಿಡುಗಡೆ ಮಾಡಲಾಯಿತು.
ತೇಗದ ಸಿರಿ ಯೋಜನೆ: ಬಾಲಗಂಗಾಧರ ಸ್ವಾಮೀಜಿ ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ ಐದು ಕೋಟಿ ಸಸಿ ನೆಡುವ ಕಾರ್ಯಕ್ರಮ ರೂಪಿಸಿದ್ದರು. ಅದೇ ರೀತಿ ಸರ್ಕಾರಿ ರಸ್ತೆಗಳು, ರೈತರ ಜಮೀನು ಹಾದು ಹೋಗುವ ರಸ್ತೆಗಳಲ್ಲಿ ಪ್ರತಿ ವರ್ಷ ಒಂದು ಕೋಟಿ ತೇಗದ ಗಿಡ ನೆಡಲು ತೇಗದ ಸಿರಿ ಯೋಜನೆ ಜಾರಿಗೆ ತರಲು ಚಿಂತನೆ ಮಾಡಿ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಪ್ರತಿಯೊಬ್ಬರ ಜಮೀನಿನ ಮುಂದೆ ಸರ್ಕಾರಿ ರಸ್ತೆಯಲ್ಲಿ ಸಂಪೂರ್ಣವಾಗಿ ತೇಗದ ಮರ ನೆಡಲು ಸೂಚಿಸಿದ್ದೇನೆ. ಮುಂದಿನ 25 ವರ್ಷಗಳಲ್ಲಿ ಅದು ದೊಡ್ಡ ಸಂಪತ್ತಾಗುತ್ತದೆ. ಈ ಹಿಂದೆ ಶ್ರೀಗಂಧ ಹಾಕಲು ಅವಕಾಶ ನೀಡಲಾಗಿತ್ತು. ಜಮೀನಿನ ಮಾಲೀಕರಿಗೆ ಶೇ.70ರಷ್ಟು ಹಾಗೂ ರಾಜ್ಯ ಸರ್ಕಾರಕ್ಕೆ ಶೇ.30 ಲಾಭಾಂಶ ಪಾಲು ಸಿಗುವ ತೇಗದ ಸಿರಿ ಯೋಜನೆ ರೂಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಅವಧೂತ ದತ್ತಪೀಠದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಡಾ.ನಿಶ್ಚಲಾನಂದ ಸ್ವಾಮೀಜಿ, ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ಎ.ಆರ್.ಕೃಷ್ಣಮೂರ್ತಿ, ಅಶೋಕ್ ಪಟ್ಟಣ್, ಕೆ.ಹರೀಶ್‍ಗೌಡ, ಗಣೇಶ್ ಪ್ರಸಾದ್, ಜಿ.ಡಿ.ಹರೀಶ್‍ಗೌಡ, ದರ್ಶನ್ ಧ್ರುವನಾರಾಯಣ್, ಡಿ.ರವಿಶಂಕರ್, ಎಂಎಲ್ಸಿಗಳಾದ ಕೆ.ವಿವೇಕಾನಂದ, ಡಾ.ಡಿ.ತಿಮ್ಮಯ್ಯ, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಲವರು ಇದ್ದರು.

































