Home ಜಿಲ್ಲೆ ಮಂಗಳೂರು ‘ಮಗುಭಾಗ್ಯ ಸಂತ್ರಸ್ತೆ ಪಾಲಿಗೆ ‘ತಾಯಿ’ಯಾಗುವೆ- ನಾಗಲಕ್ಷ್ಮಿ ಚೌಧರಿ

‘ಮಗುಭಾಗ್ಯ ಸಂತ್ರಸ್ತೆ ಪಾಲಿಗೆ ‘ತಾಯಿ’ಯಾಗುವೆ- ನಾಗಲಕ್ಷ್ಮಿ ಚೌಧರಿ

ಪುತ್ತೂರು; ಯುವತಿಯನ್ನು ಮದುವೆಯಾಗುವುದಾಗಿ ವಂಚಿಸಿ ಆಕೆಗೆ ‘ಮಗುಭಾಗ್ಯ ನೀಡಿದ ಪ್ರಕರಣದ ಸಂತ್ರಸ್ತೆಯ ತಾರಿಗುಡ್ಡೆಯಲ್ಲಿರುವ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಗುರುವಾರ ಭೇಟಿಯಾಗಿ ಸಾಂತ್ವನ ಹೇಳಿದರು. ಈ ಸಂದರ್ಭ ಅವರು ಮಾದ್ಯಮಗಳೊಂದಿಗೆ ಮಾತನಾಡಿ, ಸಂತ್ರಸ್ತೆಗೆ ತಾಯಿ ಸ್ಥಾನದಲ್ಲಿ ನಿಂತು ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು.
ಯಾವುದೇ ಕಾರಣಕ್ಕೂ ಜೀವನದಲ್ಲಿ ಕುಗ್ಗಿ ಕೆಟ್ಟ ನಿರ್ಧಾರ ಕೈಗೊಳ್ಳಬಾರದು. ಗಟ್ಟಿಯಾಗಿ ನಿಂತು ಸಂಕಷ್ಟವನ್ನು ಎದುರಿಸಬೇಕು ಎಂದು ಸಂತ್ರಸ್ತೆ ಹಾಗೂ ಆಕೆಯ ತಾಯಿಗೆ ಮಹಿಳಾ ಆಯೋಗದ ಅಧ್ಯಕ್ಷೆ ಕಿವಿಮಾತು ಹೇಳಿದರು. ಸಂತ್ರಸ್ತೆಯನ್ನು ಶಿಕ್ಷಣ ಮುಂದುವರಿಸುವಂತೆ ಸೂಚಿಸಿ ಶಿಕ್ಷಣಕ್ಕೆ ಬೇಕಾದ ಎಲ್ಲಾ ನೆರವನ್ನು ನೀಡುವುದಾಗಿ ತಿಳಿಸಿದರು. ಎಲ್ಲಾ ಪ್ರಕರಣದ ಸಂತ್ರಸ್ತೆಯರಿಗೂ ಆಯೋಗ ತಾಯಿ ಸ್ಥಾನದಲ್ಲಿ ನಿಲ್ಲುತ್ತದೆ. ಈ ಪ್ರಕರಣದಲ್ಲಿಯೂ ತಾಯಿ ಸ್ಥಾನದಲ್ಲಿ ನಿಂತು ಸಂತ್ರಸ್ತೆಯ ಎಲ್ಲಾ ರೀತಿಯ ಹೋರಾಟಗಳಿಗೂ ಜತೆ ಇರುತ್ತದೆ ಎಂದರು.
ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಹೆಚ್ಚು ಮಾತನಾಡುವುದಿಲ್ಲ. ನ್ಯಾಯಾಲಯದಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ನನಗಿದೆ. ಸಂತ್ರಸ್ತೆ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸದೃಢಗೊಳ್ಳುವ ನಿಟ್ಟಿನಲ್ಲಿ ಅದಕ್ಕೆ ಪೂರಕವಾದ ಎಲ್ಲಾ ಸಹಕಾರಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಕಾಲೇಜು ಭೇಟಿಗೆ ‘ತಡೆ’
ಧೂಳಿನ ಸಮಸ್ಯೆಯ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯರು ಬೀದಿಗಿಳಿದು ಪ್ರತಿಭಟನೆ ಮಾಡಿದ ಹಿನ್ನಲೆಯಲ್ಲಿ ಸುದ್ದಿಯಾಗಿದ್ದ ಪುತ್ತೂರು ಮಹಿಳಾ ಕಾಲೇಜಿನ ಭೇಟಿಗೆ ತೆರಳಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಪುತ್ತೂರು ಮಹಿಳಾ ಕಾಂಗ್ರೇಸ್ ತಡೆ ಹಾಕಿದೆ. ನಿಯಮ ಉಲ್ಲಂಘನೆ ಹಾಗೂ ಪ್ರತಿಭಟನೆ ಸಂದರ್ಭ ಶಾಸಕ ಅಶೋಕ್ ರೈ ಅವರೊಂದಿಗೆ ವಾಗ್ವಾದ ನಡೆಸಿ ಪ್ರಾಂಶುಪಾಲೆ ಕರ್ತವ್ಯದಿಂದ ಅಮಾನತುಗೊಂಡಿದ್ದರು. ಇಲ್ಲಿನ ವಿದ್ಯಾರ್ಥಿನಿಯರ ಅಹವಾಲು ಕೇಳುವ ಕಾರಣಕ್ಕಾಗಿ ಕಾಲೇಜಿನ ಭೇಟಿಗೆ ಅವರು ಮುಂದಾಗಿದ್ದರು. ಆದರೆ ಪುತ್ತೂರು ಮಹಿಳಾ ಕಾಂಗ್ರೇಸ್ ಈ ಭೇಟಿಯನ್ನು ತಡೆಹಿಡಿದರು. ಕಾಲೇಜಿನಲ್ಲಿ ಪ್ರಸ್ತುತ ಅಂತಾ ಸಮಸ್ಯೆಗಳಿಲ್ಲ. ನಿಯಮ ಉಲ್ಲಂಘನೆಯ ಹಿನ್ನಲೆಯಲ್ಲಿ ಪ್ರಾಂಶುಪಾಲೆ ಅಮಾನತುಗೊಂಡಿದ್ದಾರೆ ಎಂದು ಮಹಿಳಾ ಕಾಂಗ್ರೆಸ್ ಆಯೋಗದ ಅಧ್ಯಕ್ಷೆಗೆ ಮಾಹಿತಿ ನೀಡಿದರು. ಈ ಕಾರಣದಿಂದ ಕಾಲೇಜು ಭೇಟಿ ರದ್ದುಗೊಳಿಸಿ ಅಧ್ಯಕ್ಷೆ ವಾಪಾಸಾದರು. ಮಾರ್ಚ್ ೫ರಿಂದ ೩ ದಿನಗಳ ಕಾಲ ದಕ ಜಿಲ್ಲಾ ಪ್ರವಾಸದಲ್ಲಿರುವ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಪುತ್ತೂರು ಮಹಿಳಾ ಠಾಣೆಗೆ ಭೇಟಿ ನೀಡಿದರು.