ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು

ಸಂಜೆವಾಣಿ ನ್ಯೂಸ್
ಮೈಸೂರು: ಸೆ.02:-
ಮಕ್ಕಳಿಗೆ ಶಿಕ್ಷಣ ಕೊಡಿಸುವ ಜತೆಗೆ ಸಂಸ್ಕಾರಯುತ ಶಿಕ್ಷಣವನ್ನು ಒದಗಿಸಲು ಮುಂದಾಗಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.


ರಿಂಗ್ ರಸ್ತೆಯಲ್ಲಿರುವ ಲಿಂಗಾಂಬುದಿಪಾಳ್ಯ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶ್ರೀರಾಂಪುರ ಪಟ್ಟಣ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ನೂತನ ಅಂಗನವಾಡಿ ಕಟ್ಟಡ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ಮಕ್ಕಳು ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು. ಪೆÇೀಷಕರು ಹೇಳಿದ ಮಾತನ್ನು ಮಕ್ಕಳು ಕೇಳುತ್ತಾರೆ. ಇಂದು ಸಂಸ್ಕಾರಯುತ ಶಿಕ್ಷಣ ಕಲಿಸಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.


ಚಾಮುಂಡೇಶ್ವರಿ ಕ್ಷೇತ್ರ ಸೇರಿದಂತೆ ಅನೇಕ ಕಡೆಗಳಲ್ಲಿ ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ಕಟ್ಟಡಗಳ ಸಮಸ್ಯೆ ಇದೆ. ಈ ಕ್ಷೇತ್ರದಲ್ಲಿ ಸ್ವಂತ ಕಟ್ಟಡ ಇಲ್ಲದಿರುವುದನ್ನು ಗಮನಿಸಿ ಸಿಎಸ್‍ಆರ್ ನಿಧಿಯಿಂದ ಕಟ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇರುವುದನ್ನು ನೀಗಿಸಲು ಸ್ಥಳೀಯ ಕಾರ್ಖಾನೆಗಳ ಮೂಲಕ ಅನುದಾನ ಕೊಡಿಸಿ ನಿರ್ಮಿಸಲಾಗಿದೆ. ಈಗ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೂ ಕೆಲವು ಸಂಸ್ಥೆಗಳ ಜತೆಗೆ ಮಾತನಾಡಿದ್ದೇನೆ ಎಂದರು. ಚಾಮುಂಡೇಶ್ವರಿ ಕ್ಷೇತ್ರ ದೊಡ್ಡ ಕ್ಷೇತ್ರವಾಗಿದೆ. ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಗ್ರಾಮಕ್ಕೆ ಕುಡಿಯುವ ನೀರು ತಲುಪುವಂತೆ ಮಾಡುವುದಲ್ಲದೆ, ಚರಂಡಿ, ವಿದ್ಯುತ್, ರಸ್ತೆ ಕಲ್ಪಿಸಲಾಗಿದೆ. ಯುಜಿಡಿ ಸಮಸ್ಯೆ ಬಗ್ಗೆ ಆಗಿಂದಾಗ್ಗೆ ದೂರುಗಳು ಬರುತ್ತಿರುವುದರಿಂದ ಪರಿಗಣಿಸಲಾಗಿದೆ. ಶೀಘ್ರದಲ್ಲೇ ಯುಜಿಡಿ ಸಮಸ್ಯೆ ನಿವಾರಿಸಲಾಗುವುದು ಎಂದು ಭರವಸೆ ನೀಡಿದರು.


ಇಂದು ಹಲವರಿಗೆ ಶ್ರೀಮಂತಿಕೆ ಬರುತ್ತದೆ. ಕೆಲವರಿಗೆ ದುಡ್ಡು ಕೂಡಿ ಹಾಕುವುದು ಗೊತ್ತಿರುತ್ತದೆ. ಆದರೆ, ಕೈಯ್ಯಾರೆ ದಾನ ಮಾಡುವ ಮನಸ್ಸು ಬರಲ್ಲ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಮನಸ್ಸು ಬಂದರೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ ಎನ್ನುವುದಕ್ಕೆ ಎ.ಎನ್.ಪ್ರಕಾಶ್ ಅವರೇ ಸಾಕ್ಷಿಯಾಗಿದ್ದಾರೆ ಎಂದರು.


ಕಟ್ಟಡ ನಿರ್ಮಾಣದ ದಾನಿ ಎ.ಎನ್.ಪ್ರಕಾಶ್ ಮಾತನಾಡಿ, ನಾನು ಈ ರಸ್ತೆಯಲ್ಲಿ ಓಡಾಡುವ ಸಮಯದಲ್ಲಿ ಶಿಥಿಲಗೊಂಡು ಹಾಳಾಗಿದನ್ನು ನೋಡಿದ ಮೇಲೆ ಹೊಸ ಕಟ್ಟಡ ನಿರ್ಮಿಸಬೇಕೆಂದು ಮನಸ್ಸು ಬಂತು. ಅದಕ್ಕಾಗಿ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿಕೊಡಲಾಗಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಗ್ರಾಮದ ಮುಖಂಡ ಮಂಜು ಅಂಗನವಾಡಿಯ 25 ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸಿದರು. ಶ್ರೀರಾಂಪುರ ಮುಖ್ಯಾಧಿಕಾರಿ ಎಚ್.ಎಂ.ಸುರೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ತಿಬ್ಬಯ್ಯ, ಇಂಜಿನಿಯರ್‍ಗಳಾದ ಶ್ರೀನಿವಾಸ್, ಶರತ್ ಮತ್ತಿತರರು ಹಾಜರಿದ್ದರು.