Home ಸಿನೆಮಾ ಮಕ್ಕಳಿಂದ ಸಮಾಜಕ್ಕೆ ಸಂದೇಶ

ಮಕ್ಕಳಿಂದ ಸಮಾಜಕ್ಕೆ ಸಂದೇಶ

‘ಪಂಚ ರತ್ನಗಳು’ ಟ್ರೈಲರ್ ಬಿಡುಗಡೆ!

ಮಕ್ಕಳೇ ನಾಯಕತ್ವ ವಹಿಸಿ ಸಮಾಜದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕಥಾಹಂದರ ಹೊಂದಿರುವ ಮಕ್ಕಳ ಚಿತ್ರ ‘ಪಂಚ ರತ್ನಗಳು’ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಚಿತ್ರರಂಗದ ಹಲವಾರು ಗಣ್ಯರು ಉಪಸ್ಥಿತರಿದ್ದು, ಚಿತ್ರದ ತಂಡಕ್ಕೆ ಶುಭಹಾರೈಸಿದರು.

ಪ್ರದರ್ಶಕ ಹಾಗೂ ವಿತರಕರಾಗಿರುವ ಜಿ.ಆರ್. ನಾರಾಯಣ ಗೌಡ ಅವರು ಶ್ರೀ ಕ್ಯಾಲಮ್ಮ ದೇವಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹಲವು ಚಿತ್ರಗಳಲ್ಲಿ ನಟನಾಗಿ ಗುರುತಿಸಿಕೊಂಡಿರುವ ಮೈಸೂರು ಮೂಲದ ಗಾಯಕ ಗೌತಮ್ ಆರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿ, ಮೂರು ಹಾಡುಗಳಿಗೆ ಸಾಹಿತ್ಯ ಬರೆದು ಎರಡನೇ ಬಾರಿ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ಚಿತ್ರದ ತಾರಾಗಣದಲ್ಲಿ ಮಕ್ಕಳಾದ ಪ್ರಥಮ್, ಯಶಸ್, ವಿಹಾನ್, ತನ್ವಿ, ಆಧ್ಯ ಪ್ರಥಮ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗೆ ತಾಯಿಯ ಪಾತ್ರದಲ್ಲಿ ಬಿಂದೂ ಆಚಾರ್ಯ, ಶಿಕ್ಷಣ ಸಚಿವರ ಪಾತ್ರದಲ್ಲಿ ಆನಂದ್ ನಗರ್ಕರ್ ಸೇರಿದಂತೆ ಇನ್ನೂ ಹಲವರು ಅಭಿನಯಿಸಿದ್ದಾರೆ.

ಚಿತ್ರಕ್ಕೆ ಪ್ರಣವ್ ಸಂಗೀತ ನೀಡಿದ್ದು, ಅನಿಲ್ ಕಶ್ಯಪ್ ಅವರ ಛಾಯಾಗ್ರಹಣ, ಅಭಿಷೇಕ್ ಅವರ ಸಂಕಲನ, ಅಜಿತ್ ಅವರ ಸಿಂಕ್ ಸೌಂಡ್ ಮತ್ತು ಕ್ರಿಷ್ ಸ್ಟುಡಿಯೋಸ್ ಅವರ ಪೋಸ್ಟ್ ಪ್ರೊಡಕ್ಷನ್ ಕೆಲಸ ಚಿತ್ರಕ್ಕೆ ಮತ್ತಷ್ಟು ಮೆರಗು ತಂದಿದೆ. ವಿತರಕ ವೆಂಕಟ್ ಗೌಡ ಅವರ ಸಾರಥ್ಯದಲ್ಲಿ ಚಿತ್ರವು ಸುಮಾರು 60ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಶೀಘ್ರದಲ್ಲೇ ತೆರೆಗೆ ಬರಲು ಸಿದ್ಧವಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಗೌತಮ್ ಆರ್, “ಇಂದಿನ ಸಮಾಜದಲ್ಲಿ ಹಲವಾರು ದೈನಂದಿನ ಸಮಸ್ಯೆಗಳು ದೊಡ್ಡವರ ಗಮನಕ್ಕೆ ಬಂದರೂ ಅವು ಸರಿಯಾಗಿ ಪರಿಹಾರವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಐದು ಮಕ್ಕಳು ‘ನಾವೇ ಮುಂದೆ ಬಂದು ಏಕೆ ಸರಿಪಡಿಸಬಾರದು?’ ಎಂದು ತೀರ್ಮಾನಿಸುವ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ” ಎಂದು ವಿವರಿಸಿದರು.

ಮಕ್ಕಳ ಮನಸ್ಸಿನ ಕನಸುಗಳು, ಸಮಾಜದ ಜವಾಬ್ದಾರಿ ಮತ್ತು ಪ್ರಕೃತಿಯ ಮೌಲ್ಯಗಳನ್ನು ಒಟ್ಟುಗೂಡಿಸಿದ ‘ಪಂಚ ರತ್ನಗಳು’ ಚಿತ್ರ ಇದೀಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.