ಮಕ್ಕಳಲ್ಲಿ ಭ್ರಾತೃತ್ವ, ದೇಶಪ್ರೇಮ ಬೆಳೆಸಬೇಕು: ಮಧು ಬಂಗಾಪ್ಪ

ಸಂಜೆವಾಣಿ ನ್ಯೂಸ್
ಮೈಸೂರು: ಸೆ.24:
– ಮಕ್ಕಳಲ್ಲಿ ಭ್ರಾತೃತ್ವ, ದೇಶಪ್ರೇಮ ಹಾಗೂ ಜಾತ್ಯಾತೀತ ಮನೋಭಾವ ಮೂಡಿಸಲು ಸಂವಿಧಾನ ಪೀಠಿಕೆಯನ್ನು ಓದಿಸಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾಪ್ಪ ಹೇಳಿದರು.
ನಗರದ ಕಲಾಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ವತಿಯಿಂದ ಆಯೋಜಿಸಿರುವ ಮಕ್ಕಳ ದಸರಾ ಕ್ರಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ನಾವು ಚಿಕ್ಕವರಾಗಿದ್ದಾಗ ನಮಗೆ ಸಂವಿಧಾನ ಪೀಠಿಕೆ ಹೇಳಿಕೊಡುತ್ತಿರಲಿಲ್ಲ. ಭಾರತ ದೇಶದ ಪ್ರತಿಯೊಬ್ಬ ಪ್ರಜೆಯೂ ಸಹ ಸಂವಿಧಾನ ಪೀಠಿಕೆ ಓದುವ ಮೂಲಕ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಕೊಡುವ ಕೆಲಸವನ್ನು ಮಾಡಬೇಕು ಎಂದರು.


ದೇವಸ್ಥಾನದ ಗಂಟೆಗಳು ಎಷ್ಟೊತ್ತಿಗೆ ಹೊಡೆಯುತ್ತದೆಯೋ ಗೊತ್ತಿಲ್ಲ. ಆದರೆ ದೇಶ ಉದ್ದಾರವಾಗಬೇಕಾದರೆ, ಒಳ್ಳೆ ದಿಕ್ಕಿಗೆ ಹೋಗಬೇಕಾದರೆ ಹಾಗೂ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಿರುವ ಪ್ರಜಾಪ್ರಭುತ್ವದ ಅಡಿಗಲ್ಲು ಸಂವಿಧಾನ ಅನುಷ್ಠಾನವಾಗಬೇಕಾದರೆ ಶಾಲೆಗಳಲ್ಲಿ ಸಮಯಕ್ಕೆ ಗಂಟೆ ಹೊಡೆಯಬೇಕು ಎಂದು ತಿಳಿಸಿದರು.


ಸಂವಿಧಾನದ ಪೀಠಿಕೆಯಲ್ಲಿ ಆರ್ಥಿಕ, ಶೈಕ್ಷಣಿಕ, ಸಮಾಜಿಕ ಪದಗಳು ಇವೆ. ಹೀಗಾಗಿ ನಾವೆಲ್ಲರೂ ಜಾತಿ ಬಿಟ್ಟು ಒಂದೇ ತಾಯಿಯ ಮಕ್ಕಳರ ರೀತಿಯಲ್ಲಿ ಬೆಳೆಯಬೇಕೆಂದರೆ ಸಂವಿಧಾನದ ಪೀಠಿಕೆ ಓದಬೇಕು. ಭಾರತದಲ್ಲಿ ಹುಟ್ಟಿ ಒಂದೇ ರೀತಿಯ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇಂತಹ ಶಕ್ತಿಯನ್ನು ನೀಡಿದವರು ಡಾ.ಬಿ.ಆರ್.ಅಂಬೇಡ್ಕರ್ ಎಂದರು.


ಟಿಇಟಿ ಪರೀಕ್ಷೆಯನ್ನು ಮಾಡಬೇಡಿ. ರದ್ದು ಮಾಡಿ ಎಂದು ಹೇಳುತ್ತಿದ್ದಾರೆ. ಆದರೆ ಆ ಕಾನೂನನ್ನು ತಂದವರು ನಾವಲ್ಲ. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೂಲಕ ಕಡ್ಡಾಯ ಮಾಡಿದೆ. ಸುಪ್ರೀಂ ಕೋರ್ಟ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿಬೇಕು. ಮುಂದಿನ ವರ್ಷದಿಂದ ಇಂಗ್ಲೀಷ್, ಹಿಂದಿ, ತಮಿಳ್ ಎಲ್ಲಾ ಪಠ್ಯಪುಸ್ತಕಗಳಲ್ಲಿ ಅದರ ಕನ್ನಡವನ್ನೂ ಸಹ ಕಡ್ಡಾಯವಾಗಿ ಮುದ್ರಣವನ್ನು ಮಾಡಬೇಕು ಎಂಬ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.


ಕನ್ನಡವನ್ನು ಉಳಿಸಬೇಕಾಗಿದೆ. 10 ಕೋಟಿ ಪಠ್ಯಪುಸ್ತಕವನ್ನು ಸರ್ಕಾರದಿಂದ ಕೊಡುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಇದರಲ್ಲಿ ಕನ್ನಡವನ್ನು ಕಡ್ಡಾಯವಾಗಿ ತರಬೇಕೆಂಬ ತೀರ್ಮಾನವನ್ನು ಮಾಡುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಎಲ್ಲಾ ಇಲಾಖೆಯವರ ಜತೆಗೆ ಮಾತನಾಡುತ್ತಿದ್ದೇವೆ. ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು ಸರ್ಕಾರ ವೇದಿಕೆಯನ್ನು ನಿರ್ಮಿಸಿಕೊಡುತ್ತಿದೆ. ಅವರ ಪ್ರತಿಭೆಗೆ ಅವಕಾಶ ರೂಪಿಸುತ್ತಿದೆ ಎಂದರು.


ಮಕ್ಕಳು ಶಿಕ್ಷಿತರಾದರೆ ಆ ಕುಟುಂಬ ಬಡತನದಿಂದ ಹೊರಬಹುದು. ಸರ್ಕಾರಿ ಶಾಲೆಯಲ್ಲಿ ಮಾತ್ರ ಒಳ್ಳೆಯ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಕರು ಇದ್ದಾರೆ. ಮಕ್ಕಳ ಆರೋಗ್ಯದ ಬಗ್ಗೆ ಸರ್ಕಾರ ಕಾಳಜಿ ವಹಿಸಿದ್ದು ಅವರಿಗೆ ಶಿಕ್ಷಣದ ಜತೆಗೆ ವಾರದ 5 ದಿನವೂ ಮೊಟ್ಟೆ, ಬಾಳೆಹಣ್ಣು, ರಾಗಿ ಮಾಲ್ಟ್ ನೀಡುತ್ತಿದೆ ಎಂದು ತಿಳಿಸಿದರು.


ಶಿಕ್ಷಣ ಇಲಾಖೆ ಬಹುದೊಡ್ಡ ಇಲಾಖೆ. ಈ ಇಲಾಖೆಯನ್ನು ನನಗೆ ಕೊಡಬೇಕಾದರೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಎಚ್ಚರಿಸಿದ್ದರು. ಈ ಇಲಾಖೆಯಲ್ಲಿರುವ ಸಮಸ್ಯೆಗಳು ಇಂದು ಉದ್ಬವವಾಗಿರುವುದಲ್ಲ. ತುಂಬಾ ವರ್ಷಗಳಿಂದ ಕ್ರಮೇಣವಾಗಿ ಬಂದುಬಿಟ್ಟಿದೆ. ಈ ಸಮಸ್ಯೆಗಳ ನಡುವೆಯೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡುವ ಕರ್ತವ್ಯವಿದೆ ಎಂದು ಸಚಿವ ಮಧು ಬಂಗಾಪ್ಪ ತಿಳಿಸಿದರು.
ಗಮನ ಸೆಳೆದ ಮಕ್ಕಳ ನೃತ್ಯ, ಗಾಯನ: ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಮಕ್ಕಳಿಂದ ಮೂಡಿಬಂದ ನೃತ್ಯ, ಗಾಯನ, ಭÀರತ ನಾಟ್ಯ ಎಲ್ಲರ ಗಮನ ಸೆಳೆಯಿತು. ವಿಜಯವಿಠ್ಹಲ ಶಾಲೆಯ ವಿದ್ಯಾರ್ಥಿಗಳ ತಂಡ ಭÀರತನಾಟ್ಯ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಟಿಪ್ಪು ಮೆಮೋರಿಯಲ್ ಶಾಲೆಯ ವಿದ್ಯಾರ್ಥಿಗಳು ಕವಾಲು ನೃತ್ಯ ಮಾಡುವ ಮೂಲಕ ನೆರೆದಿದ್ದ ಸಮೂಹವನ್ನು ರಂಜಿಸಿದರು. ಉತ್ತರವಲಯ ಪೀಪಲ್ಸ್ ಪಾರ್ಕ್ ಶಾಲೆಯ ಮಕ್ಕಳು ಸಾವಿರ ದಳ ಕಮಲಿನಿ ಓ ಭಾರತಿ ಗೀತೆ ಹಾಡುವ ಮೂಲಕ ಸಭಿಕರನ್ನು ಸಂಗೀತದ ಅಲೆಯಲ್ಲಿ ತೇಲುವಂತೆ ಮಾಡಿದರು.