
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜ.17: ಸುಗ್ಗಿಯ ಕಾಲದಲ್ಲಿ ಭೂಮಿ ತಾಯಿಗೆ ವಂದಿಸಿ, ದವಸ ಧಾನ್ಯಗಳು ಹಾಗೂ ಗೋಮಾತೆಯನ್ನು ಪೂಜಿಸಿ ಸಂತೋಷಪಡುವ ವಿಶಿಷ್ಟವಾದ ಹಬ್ಬವೇ ಮಕರ ಸಂಕ್ರಾಂತಿ ಎಂದು ಸಮಾಜ ಸೇವಕ ಹಾಗೂ ರಾಜ್ಯ ಆರ್‍ಟಿಓ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಹೇಳಿದರು.
ಅವರು ತಾಲೂಕಿನ ಕಸಬಾ ಹೋಬಳಿಯ ಹಿರಿಕಳಲೆ ಗ್ರಾಮದಲ್ಲಿನ ಕಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಸಂಕ್ರಾಂತಿ ಸುಗ್ಗಿ ಸಂಭ್ರಮ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ರಾಶಿಪೂಜೆ ಮಾಡಿ ಮಾತನಾಡಿದರು.
ರೈತರ ಬದುಕಿನಲ್ಲಿ ನಿರ್ಣಾಯಕವಾಗಿರುವ ಶ್ರೇಷ್ಠ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಹಬ್ಬವು ಅತ್ಯುನ್ನತವಾದ ಸ್ಥಾನವನ್ನು ಪಡೆದುಕೊಂಡಿದೆ ಎಂದು ತಿಳಿಸಿದ ಮಲ್ಲಿಕಾರ್ಜುನ್ ರೈತರ ಬೇಸಾಯ ಚಟುವಟಿಕೆಗಳಿಗೆ ಸಹಕಾರ ನೀಡಿ ಜೊತೆ ಜೊತೆಯಾಗಿ ಹೆಜ್ಜೆ ಹಾಕಿದ ರಾಸುಗಳು, ಪ್ರಕೃತಿ ಮಾತೆ ಹಾಗೂ ಭೂಮಿ ತಾಯಿಗೆ ವಿಶೇಷವಾಗಿ ಪೂಜೆ ಮಾಡಿ ಧನ್ಯತಾ ಭಾವನೆಯನ್ನು ಪ್ರದರ್ಶನ ಮಾಡುವ ಹಬ್ಬವೇ ಸಂಕ್ರಾಂತಿ ಹಬ್ಬವಾಗಿದೆ. ಹೆಣ್ಣು ಮಕ್ಕಳು ವಿಶೇಷವಾಗಿ ಅಲಂಕಾರ ಮಾಡಿಕೊಂಡು ಎಳ್ಳುಬೆಲ್ಲ, ಕಬ್ಬನ್ನು ವಿತರಿಸಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸ್ನೇಹ ಪ್ರೀತಿಯನ್ನು ಹಂಚಿ ಸೌಹಾರ್ದತೆಯ ಸಂದೇಶವನ್ನು ಸಾರುವುದೇ ಸಂಕ್ರಾಂತಿ ಹಬ್ಬದ ವಿಶೇಷವಾಗಿದೆ ಎಂದು ಮಲ್ಲಿಕಾರ್ಜುನ್ ಹೇಳಿದರು.
ಇದೇ ಸಂದರ್ಭದಲ್ಲಿ ಮಂಡ್ಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಂ.ವೈ ಶಿವರಾಮು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಣ್ಣೆದೊಡ್ಡಿ ವಿ.ಹರ್ಷ ಸಾಹಿತಿ, ಹಾಗೂ ಪತ್ರಕರ್ತರಾದ ಬಲ್ಲೇನಹಳ್ಳಿ ಮಂಜುನಾಥ್ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್. ಆರ್.ಪೂರ್ಣಚಂದ್ರ ತೇಜಸ್ವಿ, ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರೇನಹಳ್ಳಿ ಲೋಕೇಶ್, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪುರಸ್ಕೃತ ಹಿರಿಯ ಪತ್ರಕರ್ತ ಡಾ.ಕೆ.ಆರ್.ನೀಲಕಂಠ, ಪ್ರಗತಿಪರ ಕೃಷಿಕರಾದ ಶ್ರೀನಿವಾಸ್ ಮತ್ತು ನಟೇಶ್ ಹಿರಿಕಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ರಾಮಕೃಷ್ಣೇಗೌಡ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಸುಜೇಂದ್ರಕುಮಾರ್, ಹಿರಿಕಳಲೆ ಗ್ರಾಮ ಪಂಚಾಯಿತಿ ಸದಸ್ಯರಾದ ಪುಷ್ಪಲತಾ ಗಣೇಶ್, ಮಮತಾ ರಘು, ಸುಂದರಮ್ಮ ಬಸವರಾಜು, ಪದ್ಮಮ್ಮ ನಾಗರಾಜು, ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಕೆ.ದೇವರಾಜು, ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಸವಿತಾರಮೇಶ್, ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಕಟ್ಟೆಮಹೇಶ್, ಕೋಶ್ಯಾಧ್ಯಕ್ಷ ಸಂತೆಬಾಚಹಳ್ಳಿ ಮಂಜೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮದಾಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಹಲವಾರು ಕವಿಗಳು ಸ್ವರಚಿತ ಕವಿತೆಗಳನ್ನು ವಾಚನ ಮಾಡಿದರು.




























