ಮಂಡೆಕೋಲು ಗ್ರಾಮಸ್ಥರಿಂದ ಕಾಡಾನೆ ಸಹಿತ ವನ್ಯ ಮೃಗಗಳ ಹಾವಳಿ ಶಾಶ್ವತ ಪರಿಹಾರಕ್ಕೆ ಆಗ್ರಹ

ಕೃಷಿಕರ ಬೃಹತ್ ಪ್ರತಿಭಟನೆ – ಕೃಷಿಕರ ಪ್ರಾಣ ಮತ್ತು ಕೃಷಿ ರಕ್ಷಣೆಗಾಗಿ ಹೋರಾಟ ಅನಿವಾರ್ಯ
ಸುಳ್ಯ:ರೈತ ಹಿತರಕ್ಷಣಾ ವೇದಿಕೆ ಮಂಡೆಕೋಲು ಇದರ ನೇತೃತ್ವದಲ್ಲಿ ಕಾಡಾನೆ ಮತ್ತು ವನ್ಯ ಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಮಂಡೆಕೋಲು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಎದುರು ಸೋಮವಾರ ಬೃಹತ್ ಪ್ರತಿಭಟನಾ ಸಭೆ ನಡೆಸಿದರು.
ಮಂಡಕೋಲು ಗ್ರಾಮವು ಸನಿಹದ ಕೇರಳ ರಾಜ್ಯದ ಗಡಿಯನ್ನು ಹಂಚಿಕೊಂಡಿದ್ದು ಇಲ್ಲಿನ ನಿವಾಸಿಗಳಿಗೆ ಕೃಷಿಯೇ ಜೀವನಾಧಾರ. ಗ್ರಾಮದ ಬಹುತೇಕ ಭಾಗ ಅರಣ ಪ್ರದೇಶದ ಆಸುಪಾಸಿನಲ್ಲಿದ್ದು ಇಲ್ಲಿ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದೆ. ಇತ್ತೀಚೆಗಂತೂ ಕಾಡಾನೆಗಳ ಉಪಟಳ ತೀವ್ರವಾಗಿದ್ದು ಕಷ್ಟಪಟ್ಟು ಬೆಳೆದ ಕೃಷಿಯನ್ನು ಆಹುತಿ ಪಡೆದುಕೊಳ್ಳುತ್ತಿದೆಯಲ್ಲದೆ ಕೆಲವೆಡೆ ಹಗಲಿನಲ್ಲಿ ಸಂಚರಿಸಲು ಕೂಡಾ ಆತಂಕ ಪಡುವಂತಾಗಿದೆ. ಈ ಹಿಂದೆ ಅರಣ್ಯ ಇಲಾಖೆ ಕಂದಕ ನಿರ್ಮಿಸಿ ಕೃಷಿ ಭೂಮಿಗೆ ಅನೆಗಳ ಪ್ರವೇಶ ತಡೆಯಲು ಪ್ರಯತ್ನಿಸಿತ್ತಾದರೂ ಸಮರ್ಪಕ ನಿರ್ವಹಣೆಯ ಕೊರತೆಯ ಪರಿಣಾಮ ಅದೀಗ ಉಪಯೋಗಕ್ಕೆ ಬಾರದಂತಾಗಿದೆ. ಆನೆಗಳು ಮಾತ್ರವಲ್ಲದೆ ಕೋತಿಗಳ ಹಾವಳಿ, ಕಾಡುಕೋಣಗಳ ಉಪಟಳ ಜೊತೆಗೆ ಇನ್ನಿತರ ಪ್ರಾಣಿಗಳಿಂದಲೂ ಇಲ್ಲಿನ ಜನರ ಬದುಕು ಹೈರಾಣಾಗುವ ಪರಿಸ್ಥಿತಿ ಇದೆ. ಅದುದರಿಂದ ಕಾಡುಪ್ರಾಣಿಗಳ ಹಾವಳಿ ತಡೆಯಲು ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವನ್ಯಮೃಗಗಳ ಹಾವಳಿಯನ್ನು ತಡೆಗಟ್ಟುವ ಸಲುವಾಗಿ ಸರಕಾರ ಕೂಡಲೇ ರಕ್ಷಿತಾರಣ್ಯವನ್ನು ರೈತರ ಕೃಷಿ ಭೂಮಿಯಿಂದ ಪ್ರತ್ಯೇಕಿಸಲು ಸರಕಾರದ ವತಿಯಿಂದಲೇ ಸೋಲಾರ್ ಬೇಲಿ ಅಳವಡಿಸಬೇಕು. ಮಂಗಗಳ ಹಾವಳಿ ತಡೆಯಲು ಅವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಹಾಗೂ ಪ್ರತ್ಯೇಕವಾಗಿ ಮಂಕಿ ಪಾರ್ಕ್ ನಿರ್ಮಾಣ ಮಾಡಬೇಕು. ಕಾಡುಪ್ರಾಣಿಗಳಿಂದ ರೈತರಿಗೆ ರಕ್ಷಣೆ ಒದಗಿಸಲು ಗ್ರಾಮ ಕೇಂದ್ರದಲ್ಲಿ ಸದಾ ಸನ್ನದ್ಧ ಸ್ಥಿತಿಯಲ್ಲಿರುವ ಕಾಡಾನೆಗಳನ್ನು ಓಡಿಸಲು ವಿಶೇಷ ಕಾರ್ಯಾಚರಣೆ ಪಡೆ ಕಾರ್ಯಾಚರಿಸಬೇಕು ಎಂದು ಕೃಷಿಕರು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ ಮಾತನಾಡಿ, ಗಡಿನಾಡ ಗ್ರಾಮವಾದ ಮಂಡೆಕೋಲು ಗ್ರಾಮಸ್ಥರು ಕಳೆದ ಹಲವಾರು ವರ್ಷಗಳಿಂದ ಕಾಡುಪ್ರಾಣಿಗಳ ಉಪಟಳದಿಂದ ರೋಸಿ ಹೋಗಿದ್ದಾರೆ. ಈ ಬಗ್ಗೆ ಆಗಾಗ ಗ್ರಾಮಸ್ಥರು ನನ್ನ ಬಳಿಗೂ ದೂರು ತಂದಿದ್ದಾರೆ. ಈ ಹಿಂದಿನ ಅಧಿವೇಶನಗಳಲ್ಲಿ ನಾನು ಸರಕಾರಕ್ಕೆ ಪ್ರಶ್ನೆ ಕೇಳಿ ಕಾಡು ಪ್ರಾಣಿಗಳ ಉಪಟಳಗಳ ಬಗ್ಗೆ ಶಾಸ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದೆ. ಇದೀಗ ಮಂಡೆಕೋಲು ಗ್ರಾಮಸ್ಥರ ಮನವಿ ಮೇರೆಗೆ ಮುಂದಿನ ಬೆಳಗಾವಿ ಅಧಿವೇಶನದಲ್ಲೂ ಈ ಬಗ್ಗೆ ದ್ವನಿ ಎತ್ತಿ ಗ್ರಾಮಸ್ಥರ ಬೇಡಿಕೆ ಈಡೇರಿಸಲು ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.


ಆನೆ ಹಾವಳಿ ತಡೆಗೆ ಸರಕಾರದಿಂದ ರಣ್ಯ ಇಲಾಖೆ ಮೂಲಕ ಸೋಲಾರ್ ಬೇಲಿ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಸೂಕ್ತ ಅನುದಾನವೇ ಬರುತ್ತಿಲ್ಲ. ವೈಯಕ್ತಿಕವಾಗಿಯೂ ಸೋಲಾರ್ ಬೇಲಿ ಅಳವಡಿಸಲು ಅವಕಾಶ ಇದ್ದು, ಅದಕ್ಕೆ ಸರಕಾರ ಶೇ.೫೦ ಸಬ್ಸಿಡಿ ನೀಡುತ್ತಿದೆ. ಆದರೆ ಬಡವರೇ ಹೆಚ್ಚಾಗಿರುವ ಗ್ರಾಮದಲ್ಲಿ ಶೇ.೫೦ರಷ್ಟು ಸಬ್ಸಿಡಿ ಪಡೆದೂ ಸೋಲಾರ್ ಬೇಲಿ ಅಳವಡಿಸಲು ಶಕ್ತಿ ಇಲ್ಲ. ಈ ಹಿನ್ನೆಲೆಯಲ್ಲಿ ಸರಕಾರವೇ ಮುಂದೆ ಬಂದು ಕೃಷಿ ಬೆಳೆ ರಕ್ಷಣೆಗಾಗಿ ಸಂಪೂರ್ಣ ಉಚಿತವಾಗಿ ಸೋಲಾರ್ ಬೇಲಿ ಅಳವಡಿಸಬೇಕು. ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಅರಣ್ಯ ಇಲಾಖೆ ಸುಳ್ಯ ವಲಯದ ಎಸಿಎಫ್ ಮಂಜುನಾಥ್ ಮಾತನಾಡಿ, ಗ್ರಾಮಸ್ಥರ ಬೇಡಿಕೆ ಸಕಾಲಿಕವಾಗಿದೆ. ನಮ್ಮ ಇಲಾಖೆ ವತಿಯಿಂದಲೂ ನಾವು ಆಗಾಗ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಲೇ ಇದ್ದೇವೆ. ಒಂದು ಕೀಮೀ ಉದ್ದ ಸೋಲಾರ್ ಅಳವಡಿಸಲು ಸುಮಾರು ಆರೂವರೆ ಲಕ್ಷ ರೂ. ವೆಚ್ಚವಾಗುತ್ತಿದ್ದು, ಅನುದಾನ ಬಂದಂತೆ ಆದ್ಯತೆ ಮೇರೆಗೆ ಸೋಲಾರ್ ಬೇಲಿ ಅಳವಡಿಕೆ ಮಾಡುತ್ತಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಗೆ ಆನೆ ಕಾರ್ಯಪಡೆ ಘೋಷಣೆ ಆಗಿದ್ದು, ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕ ತಕ್ಷಣ ಕಾರ್ಯಪಡೆ ಜಿಲ್ಲೆಗೆ ಬರಲಿದೆ. ಮುಂದೆ ಕಾರ್ಯಪಡೆ ಮೂಲಕ ಆನೆ ಹಾವಳಿ ತಡೆಯುವ ಪ್ರಯತ್ನ ಮಾಡಲಿದ್ದೇವೆ ಎಂದರು.
ಹೋರಾಟ ಸಮಿತಿಯ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕರು ಮಾತನಾಡಿ “ಕೇರಳದ ಜನವಸತಿ ಪ್ರದೇಶಕ್ಕೆ ಆನೆಗಳು ಬಾರದಂತೆ ಅಲ್ಲಿಯ ಸರಕಾರ ಕ್ರಮಕೈಗೊಂಡಿದೆ. ಅದೇ ರೀತಿಯ ಕ್ರಮ ನಮ್ಮಲ್ಲಿ ಆಗಬೇಕು ಎಂದು ಆಗ್ರಹಿಸಿದರು. ಕಾಡು ವನ್ಯಮೃಗಗಳಿಗೆ ಇರುವುದು ನಿಜ. ಹಾಗಂತ ಆ ಮೃಗಗಳು ನಾಡಿಗೆ ಬಾರದಂತೆ ಇಲಾಖೆಗಳು, ಸರಕಾರ ಕ್ರಮಕೈಗೊಳ್ಳಬೇಕು. ನಮ್ಮ ಅರಣ್ಯ ಪ್ರದೇಶಕ್ಕೆ ಸೋಲಾರ್ ಫೆನ್ಸಿಂಗ್ ಸಹಿತ ಶಾಶ್ವತ ಪರಿಹಾರ ಮಾಡಬೇಕು. ಅಧ್ಯಯನ ಮಾಡಿಕಾರ್ಯ ಪ್ರವೃತ್ತರಾಗಬೇಕು” ಎಂದು ಅವರು ಆಗ್ರಹಿಸಿದರು.
ಮಲೆನಾಡು ಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ ಕಾಡು ಪ್ರಾಣಿಗಳ ಹಾವಳಿ ತಡೆಗೆ ಸರಕಾರ ಯಾವುದೇ ಶಾಶ್ವತ ಪರಿಹಾರ ಮಾಡುತ್ತಿಲ್ಲ. ಪಶ್ಚಿಮ ಘಟ್ಟದಲ್ಲಿ ಜಲವಿದ್ಯುತ್ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಂದ ಅಲ್ಲಿನ ವನ್ಯಮೃಗಗಳು ನಾಡಿಗೆ ಬರುವಂತಾಗಿದೆ. ಕೃಷಿಕರು ೫೦ ವರ್ಷಗಳಿಂದ ಕೃಷಿ ಮಾಡಿಕೊಂಡು ಬರುತ್ತಿದ್ದರೂ ಅವರಿಗೆ ಹಕ್ಕುಪತ್ರ ಕೊಡುತ್ತಿಲ್ಲ. ಆದರೆ ಕಾಡಿನ ಒಳಗೆ ನಡೆಯುವ ಅಭಿವೃದ್ದಿ ಕಾಮಗಾರಿಗಳಿಗೆ ಯಾವ ಕಾನೂನು ಅನ್ವಯಿಸುವುದಿಲ್ವ ಎಂದು ಪ್ರಶ್ನಿಸಿದರು.
ಮೆರವಣಿಗೆಗೆ ಚಾಲನೆ ನೀಡಿದ ಡಾ. ಅನಂತ ಪದ್ಮನಾಭ ಭಟ್ ಮಾತನಾಡಿ, ಕೃಷಿ ತೋಟವನ್ನು ಆನೆಗಳು ಪುಡಿಗಟ್ಟಿರುವುದರಿಂದ ನಮಗೆ ಹೋರಾಟ ಅನಿವಾರ್ಯವಾಗಿದೆ. ಕೃಷಿ ಇಲ್ಲದೇ ಜನರ ಜೀವನ ದುಸ್ತರವಾಗಿದೆ ಎಂದರು.
ಕೃಷಿಕರಾದ ಪ್ರಭಾಕರ ರೈ ಪಿ.ಬಿ., ಕೆ.ಪಿ. ಜಗದೀಶ್, ಕಿಶೋರ್ ಶಿರಾಡಿ, ಅವಿನಾಶ್ ಕುರುಂಜಿ, ಕರುಣಾಕರ ಅಡ್ಯಡ್ಕ, ಸುದರ್ಶನ ಪಾತಿಕಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶಲ ಉದ್ದಂತಡ್ಕ, ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಡಿ.ಸಿ. ಬಾಲಚಂದ್ರ ದೇವರಗುಂಡ, ರಾಮಚಂದ್ರ ಮಾಸ್ತರ್ ಕೇನಾಜೆ, ಜಯರಾಜ್ ಕುಕ್ಕೆಟ್ಟಿ, ವಿನುತಾ ಪಾತಿಕಲ್ಲು ಮೊದಲಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಸುರೇಶ್ ದೇವರಗುಂಡ, ಶಶಿಧರ್ ಕಲ್ಲಡ್ಕ, ಪುರುಷೋತ್ತಮ, ಜನಾರ್ದನ ಬೊಳುಗಲ್ಲು, ಪದ್ಮನಾಭ ಪಾತಿಕಲ್ಲು, ಗಂಗಾಧರ ಮಾವಂಜಿ, ದೇವದಾಸ್ ಕುಕ್ಕುಡೇಲು, ವಾಸುದೇವ ಬತ್ತಿಮನೆ, ಉದಯಕುಮಾರ್ ಆಚಾರ್, ಹರಿಶ್ಚಂದ್ರ ಪಾತಿಕಲ್ಲು, ಮೋಹಿನಿ ಚಂದ್ರಶೇಖರ, ವಸಂತಿ ಮಂಡೆಕೋಲುಬೈಲು, ವಸಂತಿ ಉಗ್ರಾಣಿಮನೆ, ಕೇಶವ ಮೂರ್ತಿ ಹೆಬ್ಬಾರ್, ಗುರು ರಾಘವೇಂದ್ರ ಹೆಬ್ಬಾರ್, ಅನಿಲ್ ತೋಟಪ್ಪಾಡಿ, ನವೀನ್ ಮುರೂರು, ಲಕ್ಷ್ಮಣ ಉಗ್ರಾಣಿಮನೆ, ಶುಭಕರ ಬೊಳುಗಲ್ಲು, ಸುರೇಶ್ ಚೌಟಾಜೆ, ಅನಂತಕೃಷ್ಣ ಚಾಕೋಟೆ, ಗಣೇಶ್ ಮಾವಂಜಿ, ಚಂದ್ರಜಿತ್ ಮಾವಂಜಿ, ಪುರುಷೋತ್ತಮ ಕಾಡುಸೊರಂಜ, ಶ್ರೀಹರಿ ಬೊಳುಗಲ್ಲು, ಸುಂದರ ಗೌಡ ಕಾಡುಸೊರಂಜ, ಲಿಂಗಪ್ಪ ಬದಿಕಾನ, ಪೋಕರೆಕುಂ ಪರ್ಯಾಯ ಬಳ್ಳಕಜೆ, ಶಿವರಾಮ ಕೇನಾಜೆ, ರಾಮಕೃಷ್ಣ ರೈ ಪೇರಾಲುಗುತ್ತು ಮೊದಲಾದವರು ಇದ್ದರು. ಶಿವಪ್ರಸಾದ್ ಉಗ್ರಾಣಿಮನೆ ಕಾರ್ಯಕ್ರಮ ನಿರ್ವಹಿಸಿದರು.