ಮಂಗಳೂರು ಬೂದಿ ಮುಚ್ಚಿದ ಕೆಂಡ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್, ಎಡಿಜಿಪಿಯಿಂದ ಪರಿಸ್ಥಿತಿ ಅವಲೋಕನ

ಮಂಗಳೂರು,ಮೇ.೨೮- ಮಂಗಳೂರಿನಲ್ಲಿ ಮತ್ತೇ ನೆತ್ತರು ಹರಿದಿದ್ದು, ಪಿಕಪ್ ವಾಹನ ಚಾಲಕ ಅಬ್ದುಲ್‌ರೆಹಮಾನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ಜನ ಬೆಚ್ಚಿ ಬಿದ್ದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮಂಗಳೂರು ನಗರದಲ್ಲಿ ಈ ತಿಂಗಳ ೩೦ರ ವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಸ್ತ್ ವ್ಯವಸ್ಥೆ ಮಾಡಲಾಗಿದೆ.
ರೆಹಮಾನ್ ಕೊಲೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕಿಸಲು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಮಂಗಳೂರು ನಗರಕ್ಕೆ ಭೇಟಿ ನೀಡಿ ಬಂದೋಬಸ್ತ್‌ನ್ನು ಪರಿಶೀಲಿಸಿ ಯಾವುದೇ ಅಹಿತಕರ ಘಟನೆಗಳಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ
ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಲೆಯಾದ ಅಬ್ದುಲ್ ರೆಹಮಾನ್‌ನ ಅಂತ್ಯಕ್ರಿಯೆ ಇಂದು ನಡೆದಿದ್ದು, ಶವಯಾತ್ರೆಯ ಮೆರವಣಿಗೆಯಲ್ಲಿ ನೂರಾರು ಜನರು ಭಾಗವಹಿಸಿದ್ದು, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಶವಯಾತ್ರೆ ಸಾಗಿದ ದಾರಿಯುದ್ದಕ್ಕೂ ಬಿಗಿ ಪೊಲೀಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
೧೫ ಮಂದಿ ವಿರುದ್ಧ ಎಫ್‌ಐಆರ್
ಬಂಟ್ವಾಳದಲ್ಲಿ ನಡೆದ ಅಬ್ದುಲ್ ರೆಹಮಾನ್ ಕೊಲೆ ಹಾಗೂ ಕಲಂದರ್ ಶಾಫಿ ಮೇಲಿನ ಕೊಲೆ ಯತ್ನ ಪ್ರಕರಣ ಸಂಬಂಧ ಸ್ಥಳೀಯ ಇಬ್ಬರು ಸೇರಿ ೧೫ ಮಂದಿಯ ವಿರುದ್ಧ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ದೀಪಕ್ ಮತ್ತು ಸುಮಿತ್ ಸೇರಿ ಒಟ್ಟು ೧೫ ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ದೀಪಕ್ ಮತ್ತು ಸುಮಿತ್ ಕೊಲೆಯಾದ ಅಬ್ದುಲ್ ರೆಹಮಾನ್ ಮತ್ತು ಕಲಂದರ್ ಅವರಿಗೆ ಪರಿಚಯಸ್ಥರೇ ಆಗಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಕೊಳತ್ತಮಜಲು ಜುಮ್ಮಾ ಮಸೀದಿ ಕಾರ್ಯದರ್ಶಿ ಪಿಕಪ್ ಚಾಲಕ ಅಬ್ದುಲ್ ರೆಹಮಾನ್ ಅವರ ಕೊಲೆ ಮತ್ತು ಕಲಂದರ್ ಶಾಫಿ ಕೊಲೆ ಯತ್ನ ನಿನ್ನೆ ನಡೆದಿತ್ತು.
ಅಬ್ದುಲ್ ರಹಿಮಾನ್ ಮತ್ತು ಕಂದರ್ ಶಾಫಿ ಅವರು ನದಿ ಬದಿಯಿಂದ ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್ ಮಾಡಿ ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬುವರ ಮನೆ ಬಳಿ ಇಳಿಸುವ ಸಮಯದಲ್ಲಿ ಪರಿಚಯಸ್ಥರಾದ ದೀಪಕ್, ಸುಮಿತ್ ಮತ್ತು ೧೫ ಮಂದಿ ಏಕಾಏಕಿ ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರೆಹಮಾನ್ ಅವರನ್ನು ಹೊರಗೆ ಎಳೆದು ತಲವಾರು, ಚೂರಿ, ರಾಡ್‌ಗಳೊಂದಿಗೆ ತಿವಿದು, ಕಡಿದರು. ಆಗ ಪಕ್ಕದಲ್ಲಿದ್ದ ನಾನು ತಡೆಯಲು ಹೋದಾಗ ಚೂರಿಯಿಂದ, ಎದೆಗೆ, ಬೆನ್ನಿಗೆ, ಕೈಗೆ, ತಿವಿದು ತಲವಾರಿನಿಂದ ಕಡಿದಿದ್ದಾರೆ. ಈ ವೇಳೆ ಅಲ್ಲಿದ್ದವರು ಬೊಬ್ಬೆ ಹಾಕಿದ್ದರಿಂದ ಹಲ್ಲೆ ಮಾಡಿದ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪರಾರಿಯಾಗಿದ್ದಾರೆ. ಹಲ್ಲೆಗೈದವರ ಪೈಕಿ ಇಬ್ಬರು ಪರಿಚಯಸ್ಥರು ಎಂದು ಹಲ್ಲೆಗೊಳಗಾಗಿ ಆಂಬ್ಯುಲೆನ್ಸ್‌ನಲ್ಲಿ ಸಾಗಿಸುತ್ತಿದ್ದ ವೇಳೆ ಕಲಂದರ್ ಶಾಫಿ ಮಾಹಿತಿ ನೀಡಿದ್ದಾರೆ ಎಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಮುಹಮ್ಮದ್ ನಿಸಾರ್ ಎಂಬವರು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.


ಮೃತ ಅಬ್ದುಲ್ ರೆಹಮಾನ್ ಅವರು ಕೊಳ್ತಮಜಲು ಜುಮ್ಮಾ ಮಸೀದಿಯ ಕಾರ್ಯದರ್ಶಿಯಾಗಿದ್ದು ತೀವ್ರವಾಗಿ ಗಾಯಗೊಂಡ ಕಲಂದರ್ ಶಾಫಿ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಊರಿನ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಘಟನೆಗೆ ಸಂಬಂಧಿಸಿ ದುಷ್ಕರ್ಮಿಗಳಿಂದ ಕೊಲೆ ಯತ್ನಕ್ಕೀಡಾಗಿದ್ದ ಕಲಂದರ್ ಶಾಫಿ ಅವರು ನೀಡಿದ ಮಾಹಿತಿ ಆಧರಿಸಿ ನಾಸೀರ್ ಅವರು ನೀಡಿದ ದೂರಿನಂತೆ ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
೫ ಪೊಲೀಸ್ ತಂಡ:
ಅಬ್ದುಲ್ ರೆಹಮಾನ್ ಹತ್ಯೆ ಮತ್ತು ಕಲಂದರ್ ಶಾಫಿ ಮೇಲಿನ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕಾಗಿ ಡಿವೈಎಸ್ಪಿ ವಿಜಯ ಪ್ರಕಾಶ್ ನೇತೃತ್ವದಲ್ಲಿ ೫ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಸದ್ಯ ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಡಿವೈಎಸ್ಪಿ ನೇತೃತ್ವದಲ್ಲಿ ಆರೋಪಿಗಳ ಮಾಹಿತಿ ಕಲೆಹಾಕಲಾಗಿದೆ. ಈ ಕಾರ್ಯಾಚರಣೆಯನ್ನು ಮಂಗಳೂರು ನಗರ ಸಿಸಿಬಿ ತಂಡ ಮತ್ತು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಜಂಟಿಯಾಗಿ ನಡೆಸಲಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.
ರಾತ್ರಿ ಪ್ರತಿಭಟನೆ:
ರಹೀಂ ಹತ್ಯೆ ಸುದ್ದಿ ಹಬ್ಬುತ್ತಿದ್ದಂತೆ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದರು. ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಹಿಂದೂ ಮುಖಂಡರ ಪ್ರಚೋದನಕಾರಿ ಹೇಳಿಕೆಯಿಂದಲೇ ಇದೀಗ ಅಮಾಯಕ ಮುಸ್ಲಿಂ ಯುವಕನ ಹತ್ಯೆಯಾಗಿದೆ ಎಂದು ಸೇರಿದ ಜನ ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡಿ ಪೊಲೀಸರ ವಿರುದ್ಧ ಸಿಟ್ಟು ಹೊರಹಾಕಿದರು.
ಅಮಾಯಕನಾಗಿದ್ದ:
ಹತ್ಯೆಗೀಡಾದ ಅಬ್ದುಲ್ ರೆಹಮಾನ್ ಪಿಕಪ್ ವಾಹನದಲ್ಲಿ ಬಾಡಿಗೆ ಮಾಡಿ ಜೀವನ ಸಾಗಿಸುತ್ತಿದ್ದು ಸ್ಥಳೀಯ ಮಸೀದಿಯ ಕಾರ್ಯದರ್ಶಿಯಾಗಿದ್ದರು. ಮದುವೆಯಾಗಿ ಎರಡು ಮಕ್ಕಳಿರುವ ರಹೀಂ ಯಾವುದೇ ಕೃತ್ಯಗಳಲ್ಲೂ ಭಾಗಿಯಾಗಿಲ್ಲ, ಯಾವುದೇ ಸಂಘಟನೆಗಳಲ್ಲೂ ಗುರುತಿಸಿಕೊಂಡಿಲ್ಲ. ಅಮಾಯಕ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ, ಈ ಹತ್ಯೆ ಹಿಂದೆ ಇರುವ ಎಲ್ಲರನ್ನೂ ತಕ್ಷಣ ಬಂಧಿಸಬೇಕೆಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಆಗ್ರಹಿಸಿದ್ದಾರೆ.
೩ ದಿನ ನಿಷೇಧಾಜ್ಞೆ:
ಅಬ್ದುಲ್ ರೆಹಮಾನ್ ಹತ್ಯೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು ಜಿಲ್ಲಾದ್ಯಂತ ಮೇ ೩೦ ಸಂಜೆ ೬ ರವರೆಗೆ ನಿಷೇಧಾಜ್ಞೆ ಹಾಕಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೊರ ಜಿಲ್ಲೆಯಿಂದ ಹೆಚ್ಚುವರಿ ಪೊಲೀಸರನ್ನು ತರಿಸಿಕೊಳ್ಳಲಾಗಿದೆ.
ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಇಂದು ಮಂಗಳೂರಿಗೆ ಭೇಟಿ ನೀಡಲಿದ್ದು ಭದ್ರತೆ ಪರಿಶೀಲಿಸಲಿದ್ದಾರೆ. ಮೃತ ಅಬ್ದುಲ್ ರೆಹಮಾನ್ ಅಂತ್ಯ ಸಂಸ್ಕಾರ ಇಂದು ಅವರ ಸ್ವಗ್ರಾಮ ಕೊಳ್ತಮಜಲ್ ನಲ್ಲಿ ನಡೆಯಲಿದೆ.