
ಮಂಗಳೂರು: ಕೇಂದ್ರ ಸರಕಾರವು ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ರಾಜ್ಯಕ್ಕೆ ೭೫೦ ಹೊಸ ಇಲೆಕ್ಟಿಕ್ ಬಸ್‌ಗಳನ್ನು ಮಂಜೂರು ಮಾಡಿರುವ ಮಧ್ಯೆಯೇ ಖಾಸಗಿಯವರು ಕೂಡ ಇವಿ ಬಸ್ ವ್ಯವಸ್ಥೆಗೆ ಚಿಂತನೆ ನಡೆಸಿದ್ದಾರೆ. ಅದರಲ್ಲೂ ಮಂಗಳೂರಿನಲ್ಲಿ ಸರಕಾರಿ ಇವಿ ಬಸ್ ಗಳಲ್ಲದೆ ಖಾಸಗಿ ಇವಿ ಬಸ್‌ಗಳು ಓಡಾಡಲು ಸಿದ್ಧತೆ ನಡೆಸಿದೆ.
ವಾಹನಗಳಿಂದ ದೇಶಾದ್ಯಂತ ಆಗುತ್ತಿರುವ ವಾಯುಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರಕಾರವು ದೇಶದೆಲ್ಲೆಡೆ ಇಲೆಕ್ಟಿಕ್ ಬಸ್‌ಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾರಂಭಿಸಿದೆ. ಅದರಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಜ್ಯಕ್ಕೆ ೭೫೦ ಇಲೆಕ್ಟಿಕಲ್ ಬಸ್ ಗಳನ್ನು ಮಂಜೂರುಗೊಳಿಸಿದೆ. ಆ ಪೈಕಿ ಮಂಗಳೂರಿಗೆ ೧೦೦ ಬಸ್‌ಗಳು ಬರುವ ಸಾಧ್ಯತೆ ಇದೆ. ಈ ಬಸ್‌ಗಳಿಗೆ ಕುಂಟಿಕಾನ ಕೆಎಸ್ಸಾರ್ಟಿಸಿ ಡಿಪೋ ಮತ್ತು ಬಿಜೈ ಬಸ್ ನಿಲ್ದಾಣದಲ್ಲಿ ಚಾರ್ಜಿಂಗ್ ಪಾಯಿಂಟ್‌ಗೆ ಮೆಸ್ಕಾಂ ಹಾಗೂ ಕೆಪಿಟಿಸಿಎಲ್ ಅನುಮೋದನೆ ನೀಡಿದೆ.
ದೇಶದಲ್ಲೇ ಮೊತ್ತಮೊದಲ ಸಾರಿಗೆ ಬಸ್ ವ್ಯವಸ್ಥೆಯು ಮಂಗಳೂರಿನಲ್ಲಿ ಆರಂಭವಾಗಿತ್ತು. ಅಂದರೆ ೧೯೧೪ರಲ್ಲಿ ಶಂಕರ್ ವಿಠಲ್ ಸಂಸ್ಥೆ ಮಂಗಳೂರು-ಬಂಟ್ವಾಳ ಮಧ್ಯೆ ಮೊದಲ ಖಾಸಗಿ ಬಸ್ ಸಂಚಾರ ಆರಂಭಿಸಿತ್ತು. ಇದೀಗ ಇವಿ ಬಸ್ ವ್ಯವಸ್ಥೆಗೂ ಮಂಗಳೂರು ಮಾದರಿಯಾಗಿದೆ.
ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳು ಆರಂಭಗೊಂಡಿದೆ. ಮಂಗಳೂರಿನಲ್ಲಿ ಇಲೆಕ್ಟಿಕಲ್ ಬಸ್‌ಗಳ ಓಡಾಟವನ್ನು ಪ್ರಾಯೋಗಿಕವಾಗಿ ನಡೆಸಿ ಅದರಲ್ಲಿ ಯಶಸ್ವಿಯಾದರೆ ಇವಿ ಬಸ್‌ಗಳನ್ನು ಮತ್ತಷ್ಟು ಖರೀದಿಸಲು ಖಾಸಗಿ ಬಸ್ ಮಾಲಕರು ಕೂಡ ನಿರ್ಧರಿಸಿದ್ದಾರೆ.
ಖಾಸಗಿ ಇವಿ ಬಸ್‌ಗಳು ೯ ಮೀ. ಉದ್ದವಿರಲಿದೆ. ೩೨-೪೧ ಸೀಟುಗಳನ್ನು ಹೊಂದಿವೆ. ೨೦೦ಕಿ.ಮೀ. ಓಡಾಟದ ಬ್ಯಾಟರಿ ಸಾಮರ್ಥ್ಯವಿದೆ. ೨ ಗಂಟೆಗಳಲ್ಲಿ ರಿಚಾರ್ಜ್ ಆಗಲಿದೆ. ಹವಾನಿಯಂತ್ರಣ ಬಸ್ ಇದಾಗಿದ್ದು, ೫ ವರ್ಷದ ಬ್ಯಾಟರಿ ಗ್ಯಾರಂಟಿಯೂ ಇದೆ. ಪುಣೆಯಲ್ಲಿ ಬಸ್‌ನ ಬಾಡಿ ವಿನ್ಯಾಸ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.






























