ಮಂಗಳೂರಿನಲ್ಲಿ ಅಪಾಯಕಾರಿ ಬೈಕ್ ಸವಾರಿ ಪ್ರಕರಣಗಳು ವರದಿ; ಕಠಿಣ ಕ್ರಮಕ್ಕೆ ಸಾರ್ವಜನಿಕರ ಆಗ್ರಹ

ಮಂಗಳೂರು-ನಗರದಲ್ಲಿ ಅಪಾಯಕಾರಿ ಹಾಗೂ ಕಾನೂನುಬಾಹಿರ ಬೈಕ್ ಸವಾರಿಯ ಎರಡು ಘಟನೆಗಳು ಬೆಳಕಿಗೆ ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮೊದಲ ಘಟನೆ ಜೂನ್ ೭ ರಂದು ಸಂಜೆ ಯೆನೆಪೋಯ (ದೇರಳಕಟ್ಟೆ)ಯಿಂದ ಕೆ.ಎಸ್. ಹೆಗ್ಡೆ ಮಾರ್ಗದಲ್ಲಿ ಸಂಭವಿಸಿದೆ. ಏಂ ೧೯ ಊಐ ೭೩೧೬ ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ನಾಲ್ವರು ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಇದು ಸಂಚಾರ ನಿಯಮದ ಉಲ್ಲಂಘನೆಯಾಗಿರುತ್ತದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿರುವ ಯಾರೂ ಹೆಲ್ಮೆಟ್ ಧರಿಸಿರಲಿಲ್ಲ. ನಾಲ್ವರ ಈ ಸವಾರಿಯು ಅತ್ಯಂತ ಅಪಾಯಕಾರಿಯಾಗಿತ್ತು ಎನ್ನಲಾಗಿದೆ. ಬೈಕ್‌ನ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಎಮಿಷನ್ ಸರ್ಟಿಫಿಕೇಟ್) ಅವಧಿ ಮೀರಿದೆ ಎಂದು ಹೆಚ್ಚಿನ ತನಿಖೆ ವೇಳೆ ತಿಳಿದುಬಂದಿದೆ. ಭವಿಷ್ಯದಲ್ಲಿ ಇಂತಹ ಸಂಚಾರ ನಿಯಮ ಉಲ್ಲಂಘನೆಯ ಘಟನೆಗಳನ್ನು ತಡೆಗಟ್ಟಲು ಸವಾರರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಎರಡನೇ ಪ್ರಕರಣ ಜೂನ್ ೧೨ ರಂದು ಬೆಳಕಿಗೆ ಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಸವಾರರು ಅಪಾಯಕಾರಿಯಾಗಿ ಬೈಕ್ ಚಲಾಯಿಸುತ್ತಿರುವುದು ಕಂಡುಬಂದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಬೈಕ್ ಸವಾರನೊಬ್ಬ ಹೆಲ್ಮೆಟ್ ಇಲ್ಲದೆ ಇಬ್ಬರು ಸಹ ಸವಾರರನ್ನು ಕೂರಿಸಿಕೊಂಡು ಪಂಡಿತ್ ಹೌಸ್ ನಿಂದ ತೊಕ್ಕೊಟ್ಟಿಗೆ ಹೋಗುವ ಮಾರ್ಗದಲ್ಲಿ ಅಪಾಯಕಾರಿಯಾಗಿ ರೈಡಿಂಗ್ ಮಾಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಜೊತೆಗೆ ಸವಾರನು ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳ ಮಧ್ಯೆ ನುಸುಳಿಕೊಂಡು ಅತಿವೇಗವಾಗಿ ಬೈಕ್ ಚಲಾಯಿಸುತ್ತಾ, ತನ್ನ ಪ್ರಾಣಕ್ಕೆ ಮಾತ್ರವಲ್ಲದೆ ಸಹ ಸವಾರರಿಬ್ಬರ ಪ್ರಾಣಕ್ಕೂ ಅಪಾಯ ಉಂಟಾಗುವಂತೆ ಬೈಕ್ ಚಲಾಯಿಸುತ್ತಿರುವುದನ್ನು ವಿಡಿಯೋದಲ್ಲಿ ಕಂಡುಬಂದಿದೆ.
ಈ ಎರಡೂ ಘಟನೆಗಳು ವ್ಯಾಪಕ ಕಳವಳ ಮೂಡಿಸಿದ್ದು, ಸವಾರರ ವಿರುದ್ಧ ಸಂಚಾರ ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ಸವಾರರಿಗೆ, ಸಹ ಸವಾರರಿಗೆ ಅಷ್ಟೇ ಅಲ್ಲದೇ ಇತರ ವಾಹನ ಸವಾರರಿಗೂ ಅಪಾಯವನ್ನುಂಟು ಮಾಡುತ್ತದೆ.