ಮಂಗಳಾ ಕ್ರೀಡಾಂಗಣದಲ್ಲಿ ಶಾರದಾ ವಿದ್ಯಾ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ

ಮಂಗಳೂರು – ಮಂಗಳೂರು ಮಹಾನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯ ಮತ್ತು ಶಾರದಾ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವು ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಒಕ್ಕೂಟದ ಕ್ರೀಡಾ ಸಂಯೋಜಕ, ಅಂತರಾಷ್ಟ್ರೀಯ ಮಟ್ಟದ ಖ್ಯಾತ ಕ್ರೀಡಾಪಟು, ಜಿಲ್ಲಾ ಕ್ರೀಡಾ ತರಬೇತುದಾರರಾದ ಶ್ರೀ ಪ್ರೇಮನಾಥ ಶೆಟ್ಟಿಯವರು ದೀಪ ಪ್ರಜ್ವಲನೆ ಹಾಗೂ ಕ್ರೀಡಾಧ್ವಜಾರೋಹಣಗೈದು ಕ್ರೀಡಾಕೂಟದ ಉದ್ಘಾಟನೆಗೈದರು. ಕ್ರೀಡೆ ಎನ್ನುವುದು ನಮ್ಮ ಹುಟ್ಟಿನೊಂದಿಗೆ ಆರಂಭಗೊಳ್ಳುವುದು. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ, ಮಾನಸಿಕ ಆರೋಗ್ಯದ ವೃದ್ಧಿಯಾಗುವುದರ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈಯ್ಯುವ ವಿದ್ಯಾರ್ಥಿಗಳಿಗೆ ಇಂಜಿನಿಯರ್, ವೈದ್ಯಕೀಯ ಮುಂತಾದ ಉನ್ನತ ಹಾಗೂ ಉಜ್ವಲ ಭವಿಷ್ಯದ ಶಿಕ್ಷಣವಕಾಶಕ್ಕೆ ಹೆಚ್ಚಿನ ಪ್ರಾಶಸ್ತ್ಯ ಲಭಿಸುವುದು. ಆದ್ದರಿಂದ ವಿದ್ಯಾರ್ಥಿಗಳು ತಾವೆಂದಿಗೂ ಕ್ರೀಡೆಯಿಂದ ದೂರ ಉಳಿಯದಿರಿ ಎಂಬುದಾಗಿ ಶ್ರೀ ಪ್ರೇಮನಾಥ ಶೆಟ್ಟಿಯವರು ಮುಖ್ಯ ಅತಿಥಿ ಭಾಷಣದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಪ್ರೇರಣಾದಾಯಕ ಸಂದೇಶವನ್ನಿತ್ತು ಶುಭ ಹಾರೈಸಿದರು.
ಸಮಾರಂಭದ ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ| ಎಂ.ಬಿ.ಪುರಾಣಿಕರು ಕೂಡಾ ಕ್ರೀಡೆಗಳ ಮಹತ್ವ, ಪ್ರಯೋಜನಗಳನ್ನು ವಿವರಿಸಿ ತಮ್ಮ ವಿದ್ಯಾ ಸಂಸ್ಥೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ನೀಡುವ ಪ್ರೋತ್ಸಾಹವನ್ನು ಉಲ್ಲೇಖಿಸಿ, ಪ್ರೋತ್ಸಾಹದಾಯಕ ಮಾತುಗಳೊಂದಿಗೆ ಕ್ರೀಡಾಳು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾರದಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ, ವಿಶ್ವಸ್ಥರಾದ ಶ್ರೀ ಸುಧಾಕರ ರಾವ್ ಪೇಜಾವರ, ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಚಂದ್ರಿಕಾ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾರದಾ ವಿದ್ಯಾಲಯದ ಪ್ರಾಂಶುಪಾಲ ಶ್ರೀ ದಯಾನಂದ ಕಟೀಲ್ ಸ್ವಾಗತಿಸಿದರು. ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಪ್ರಕಾಶ್ ನಾಯ್ಕ್ ವಂದನಾರ್ಪಣೆಗೈದರು. ಶಾರದಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ರಮೇಶ್ ಆಚಾರ್ಯ, ಶ್ರೀಮತಿ ಅಂಬಿಕಾ ಎಚ್. ಎಸ್. ಆರ್., ಶ್ರೀಮತಿ ಸಂಧ್ಯಾ ಭಟ್ ನಿರ್ವಹಣೆಗೈದರು.
ಆರಂಭದಲ್ಲಿ ವಿದ್ಯಾಲಯದ ಎನ್.ಸಿ.ಸಿ. ಕೆಡೆಟ್‌ಗಳು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸಹಿತ ಕ್ರೀಡಾಳು ವಿದ್ಯಾರ್ಥಿಗಳು ಘೋಷ್ ವಾದ್ಯದೊಂದಿಗೆ ಆಕರ್ಷಕ ಪಥ ಸಂಚಲನಗೈದು ಅತಿಥಿ-ಗಣ್ಯರಿಗೆ ಗೌರವ ವಂದನೆಗಳನ್ನು ಸಲ್ಲಿಸಿದರು. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿದ ವಿದ್ಯಾಸಂಸ್ಥೆಯ ಕ್ರೀಡಾ ಸಾಧಕ ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿಯನ್ನು ಬೆಳಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಶಾರದಾ ಪದವಿಪೂರ್ವ ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಮಾ| ನಿಶಾನ್ ಚೌಟ ಕ್ರೀಡಾಳುಗಳಿಗೆ ಪ್ರತಿಜ್ಞಾ ಭೋಧನೆಗೈದರು. ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಶ್ರೀ ಸುಧಾಕರ ಶೆಟ್ಟಿ, ಶ್ರೀ ಶಶಿಕಾಂತ್, ಶ್ರೀ ಕಾರ್ತಿಕ್, ಶ್ರೀ ವೇಲ್‌ರಾಜ್ ಮತ್ತು ಶ್ರೀಮತಿ ದಿವ್ಯ ಮಾರ್ಗದರ್ಶನವಿತ್ತರು. ಕ್ರೀಡಾಕೂಟವು ಯಶಸ್ವಿಯಾಗಿ ನೆರವೇರಿ ಸಾಯಂಕಾಲ ಸಮಾರಂಭ ಸಮಾರೋಪಗೊಂಡಿತು.