ಭೂಸ್ವಾಧೀನ ವಿರೋಧಿಸಿ ಜೂ.25ಕ್ಕೆ ದೇವನಹಳ್ಳಿ ಚಲೋ: ಕೆಂಪೂಗೌಡ

ಸಂಜೆವಾಣಿ ವಾರ್ತೆ
ಮಂಡ್ಯ: ಜೂ.21:-
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹೊರಡಿಸಿರುವ ಅಂತಿಮ ಅಧಿಸೂಚನೆ ರದ್ದುಪಡಿಸು ವಂತೆ ಆಗ್ರಹಿಸಿ ಜೂನ್ 25ರಂದು ದೇವನಹಳ್ಳಿ ಚಲೋ ಹಮ್ಮಿಕೊಳ್ಳ ಲಾಗಿದೆ ಎಂದು ಕರ್ನಾಟರ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಅಧಿಸೂಚನೆಯನ್ನು ಸಂಪೂರ್ಣವಾಗಿ ರದ್ದುಪಡಿಸುವಂತೆ ಆಗ್ರಹಿಸಿ, ದೇವನಹಳ್ಳಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು. ಈ ಹೋರಾಟ ದಲ್ಲಿ ರೈತ, ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ ಸಂಘಟನೆ ಗಳು ಪಾಲ್ಗೊಳ್ಳಲಿವೆ. ಸರ್ಕಾರಗಳಿಗೆ ಈ ಭೂಮಿ ಕೇವಲ ಮಾರಾಟದ ಸರಕಷ್ಟೇ. ಆದರೆ ಇಲ್ಲಿನ ರೈತರಿಗೆ ಇದು ಬದುಕಾಗಿದೆ. ಯಾವುದೇ ಕಾರಣಕ್ಕೂ ನಾವು ಭೂಮಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಬಲವಂತವಾಗಿ ಕೆಐಎಡಿಬಿ ಭೂ ಸ್ವಾಧೀನಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿರುವುದು ಹೀನಾಯ ಕೃತ್ಯವಾಗಿದ್ದು,ರಾಜ್ಯ ಸರ್ಕಾರದ ಹೇಡಿತನಕ್ಕೆ ಸಾಕ್ಷಿ ಯಾಗಿದೆ ಎಂದು ಖಂಡಿಸಿದರು.

ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1777 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಲು ಅಲ್ಲಿನ ರೈತರು ಒಪ್ಪದೇ 1180 ದಿನಗಳಿಂದ ನಿರಂತರವಾಗಿ ಚನ್ನರಾಯಪಟ್ಟಣದ ನಾಡ ಕಛೇರಿ ಬಳಿ ಅನಿರ್ಧಿಷ್ಟ ಪ್ರತಿಭಟನೆ ನಡೆಸುತ್ತಿದ್ದು, ಸದರಿ ಸ್ವಾಧೀನ ಪ್ರಕ್ರಿಯೆಗೆ ಶೇ 80ರಷ್ಟು ರೈತರು ವಿರೋಧ ವ್ಯಕ್ತಪಡಿಸಿದ್ದರೂ, ಬಲವಂತವಾಗಿ ಸ್ವಾಧೀನಕ್ಕೆ ಮುಂದಾಗಿದ್ದಾರೆ.ಇದು ಭೂಸ್ವಾಧೀನ ಕಾಯ್ದೆ-2013ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್. ಭರತ್‍ರಾಜ್ ಮಾತನಾಡಿ, ವಿಧಾನಸಭಾ ಚುನಾವಣೆಗೂ ಮುನ್ನ ಭೂ ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಲ್ಲಿನ ಉಸ್ತುವಾರಿ ಮಂತ್ರಿ ಕೆ.ಎಚ್.ಮುನಿಯಪ್ಪ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸುವ ಮೂಲಕ ವಚನ ಭ್ರಷ್ಟ ನಡೆವಳಿಕೆಯನ್ನು ತೋರಿದ್ದಾರೆ ಎಂದು ಕಿಡಿ ಕಾರಿದರು.

ಬಹುರಾಷ್ಟ್ರೀಯ ಸಂಸ್ಥೆಗಳು, ರಿಯಲ್ ಎಸ್ಟೇಟ್ ಮಾಫಿಯಾಗಳ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರದ ಈ ನಡೆಯನ್ನು ರೈತರು ಮಾತ್ರ ವಲ್ಲದೇ ರಾಜ್ಯದಲ್ಲಿ ಅನ್ನತಿನ್ನುವ ಪ್ರತಿಯೊಬ್ಬರು ಖಂಡಿಸಬೇಕಾಗಿದೆ. ಜೂನ್ 25ರಂದು ನಡೆಯುವ ಹೋರಾಟದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ ಅವರು, ಜಿಲ್ಲೆಯಿಂದ 250ರಿಂದ 300 ಮಂದಿ ಭಾಗವಹಿಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಲಿಂಗಪ್ಪಾಜಿ, ಅಣ್ಣಯ್ಯ, ಶಿವಮಲ್ಲಯ್ಯ, ಶಿವಕುಮಾರ್, ಲತಾ, ಹನುಮೇಶ್, ಸತೀಶ್, ಸಿ.ಕುಮಾರಿ ಇದ್ದರು.