ಭೀಕರ ಅಪಘಾತ: ೮ ಮಂದಿ ಸಾವು


ಬುಲಂದ್‌ಶಹರ್,ಆ.೨೫- ಉತ್ತರ ಪ್ರದೇಶದ ಬುಲಂದ್‌ಶಹರ್‍ನ ರಾಷ್ಟ್ರೀಯ ಹೆದ್ದಾರಿ-೩೪ ರಲ್ಲಿ ಭಕ್ತರು ತುಂಬಿದ್ದ ಟ್ರ್ಯಾಕ್ಟರ್‌ಗೆ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ ೮ ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ೪೫ ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಕಾಸ್ಗಂಜ್‌ನಿಂದ ರಾಜಸ್ಥಾನದ ಗೋಗಮೇಡಿಗೆ ಭಕ್ತರು ಹೋಗುತ್ತಿದ್ದಾಗ ವೇಳೆ ಘಾಟಲ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಗಾಯಗೊಂಡರಲ್ಲಿ ೧೨ ಮಕ್ಕಳು ಸೇರಿದ್ದು ಎಲ್ಲಾ ೪೫ ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.
ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ, ಮೃತರನ್ನು ಟ್ರ್ಯಾಕ್ಟರ್ ಚಾಲಕ ಇ.ಯು. ಬಾಬು (೪೦), ರಾಂಬೆಟಿ (೬೫), ಚಾಂದನಿ (೧೨), ಘನಿರಾಮ್ (೪೦), ಮೋಕ್ಷಿ (೪೦), ಶಿವಾಂಶ್ (೬), ಯೋಗೇಶ್ (೫೦) ಮತ್ತು ವಿನೋದ್ (೪೫) ಎಂದು ಗುರುತಿಸಲಾಗಿದ್ದು, ಎಲ್ಲರೂ ಕಾಸ್ಗಂಜ್ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವು,ನೋವಿನ ಸಂಖ್ಯೆ ಹೆಚ್ಚಳವಾಗುವ ಭೀತಿ ಇದೆ. ಮೃತಪಟ್ಟ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ತಂಡಗಳು ಧಾವಿಸಿದ್ದು ಗಾಯಾಳುಗಳನ್ನು ಖುರ್ಜಾದ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಎಸ್‌ಎಸ್‌ಪಿ ಸೇರಿದಂತೆ ಪೊಲೀಸ್ ತಂಡಗಳನ್ನು ಅಪಘಾತ ಸ್ಥಳಕ್ಕೆ ತಕ್ಷಣವೇ ದೌಡಾಯಿಸಿದ್ದಯ ಗಾಯಾಳುಗಳನ್ನು ಅಲಿಘರ್ ವೈದ್ಯಕೀಯ ಕಾಲೇಜು, ಬುಲಂದ್‌ಶಹರ್ ಜಿಲ್ಲಾ ಆಸ್ಪತ್ರೆ ಮತ್ತು ಕೈಲಾಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಅರ್ನಿಯಾ ಪೊಲೀಸರು ಮತ್ತು ಹತ್ತಿರದ ಪೊಲೀಸ್ ಠಾಣೆ ಪಡೆಗಳು ಸ್ಥಳಕ್ಕೆ ತಲುಪಿ, ಹೆಚ್ಚಿನ ಜನರಿಗೆ ಸ್ಥಳಾಂತರಗೊಳ್ಳಲು ಟ್ರ್ಯಾಕ್ಟರ್-ಟ್ರಾಲಿಯನ್ನು ಡಬಲ್ ಡೆಕ್ಕರ್ ಆಗಿ ಪರಿವರ್ತಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಕಂಟೇನರ್ ಅನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಡರಾತ್ರಿ ರಾತ್ರಿ ೨:೧೫ ರ ಸುಮಾರಿಗೆ ಅಲಿಘರ್ ಗಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ೩೪ ರಲ್ಲಿ ಅಪಘಾತ ಸಂಭವಿಸಿದೆ. ಕಾಸ್ಗಂಜ್ ಜಿಲ್ಲೆಯಿಂದ ರಾಜಸ್ಥಾನಕ್ಕೆ ಸುಮಾರು ೬೦ ರಿಂದ ೬೧ ಜನರು ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಢ ಸಂಭವಿಸಿದೆ.
ಹಿಂದಿನಿಂದ ಬರುತ್ತಿದ್ದ ಕಂಟೇನರ್ ಅತಿ ವೇಗದಲ್ಲಿ ಅದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿ ಹೆಚ್ಚಿನ ಸಂಖ್ಯೆಯ ಜನರು
ಗಾಯಗೊಂಡಿದ್ದಾರೆ ೮ ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ ೪೫ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ, ೩ ಜನರನ್ನು ಹೊರತುಪಡಿಸಿ ಉಳಿದವರ ಸ್ಥಿತಿ ಉತ್ತಮವಾಗಿದೆ ಎಂದು ವರದಿಯಾಗಿದೆ ಎಂದು ಬುಲಂದ್‌ಶಹರ್ ಎಸ್‌ಎಸ್‌ಪಿ ದಿನೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.