
ಸಂಜೆವಾಣಿ ವಾರ್ತೆ
ಹೊಸಪೇಟೆ ನ 22: ಭಾಷಾ ಸೌಹಾರ್ಧತೆಯ ಮೂಲಕ ಆಯಾ ಭಾಷೆಯ ಅಸ್ತಿತ್ವವನ್ನು ಗುರುತಿಸಬೇಕೆ ವಿನಃ ಭಾಷಿಕ ಗಡಿಗಳನ್ನು ಹಾಕಿಕೊಂಡು ಅದರ ಮೂಲವನ್ನು ತಿಳಿಯಬಾರದು ಎಂದು ಹೊಸಪೇಟೆಯ ಕವಿಗಳು ಮತ್ತು ಅನುವಾದಕರಾದ ಡಾ. ರಂಗನಾಥ ಅರನಕಟ್ಟೆ ಅಭಿಪ್ರಾಯಪಟ್ಟರು.
ಅವರು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಅಲ್ಲಮ ಸಭಾಂಗಣದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡ ಬಹುಭಾಷ ಕವಿಗೋಷ್ಠಿ ಹಾಗೂ ಕನ್ನಡ ಮತ್ತು ತಮಿಳು ಸಾಹಿತ್ಯ: ಸೌಹಾರ್ಧ ಪರಂಪರೆ ಎಂಬ ವಿಷಯದ ಕುರಿತು ಮಾತನಾಡುತ್ತಾ ನಾವುಗಳು ಹಾಕಿಕೊಂಡ ಮಿತಿಗಳೇ ಶಕ್ತಿಗಳಾಗಿ ವಿಜೃಂಬಿಸುವ ಕಾಲದಲ್ಲಿ ನಾವಿದ್ದೇವೆ. ಈಗ ನಾವು ಬಳಸುವ ಸೌಹಾರ್ಧ ಎಂಬುದನ್ನು ಈಗಿನ ವಿದ್ವಾಂಸರುಗಳು ಚಾಲನೆಗೆ ತಂದಿಲ್ಲ. ಇದನ್ನು ನಮ್ಮ ಜನಪದರು ಮೌಖಿಕ ಪರಂಪರೆಯ ಮೂಲಕ ಸೌಹಾರ್ಧತೆಯನ್ನು ಕಟ್ಟಿಕೊಂಡಿದ್ದರು. ಕನ್ನಡ ಮತ್ತು ತಮಿಳು ಭಾಷೆಗಳು ಮೂಲ ದ್ರಾವಿಡ ಭಾಷೆಯಲ್ಲಿ ಸೇರಿಕೊಂಡಿದ್ದವು. ಅವು ಚದುರಿಕೊಂಡು ತಮ್ಮದೇ ಆದ ನೆಲೆ ಕಂಡು ಕೊಂಡಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಭಾಗದ ಮುಖ್ಯಸ್ಥರಾದ ಪ್ರೊ. ವೆಂಕಟಗಿರಿ ದಳವಾಯಿ ಅವರು ಮಾತನಾಡಿ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಬಹುಭಾಷ ಕವಿಘೋಷ್ಠಿ ಹಮ್ಮಿಕೊಳ್ಳುವುದರ ಮೂಲಕ ಯಶಸ್ವಿಕಂಡಿತು. ಇಂದು ನಾವುಗಳು ಯಾವುದೇ ಭಾಷೆಯಾಗಿರಲಿ ಅದರ ರೀತಿಯಲ್ಲೇ ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಒದಗಿದೆ. ಅದನ್ನು ಇಂದು ಪಾಲ್ಗೊಂಡ ಕವಿಗಳು ಕನ್ನಡ, ಹಿಂದಿ, ಲಂಬಾಣಿ, ಉರ್ದು, ತೆಲುಗು,ತಮಿಳು, ಇಂಗ್ಲಿಷ್ ಮರಾಠಿ ಭಾಷೆಯಲ್ಲಿ ತಾವು ರಚಿಸಿದ ಕವನಗಳನ್ನು ವಾಚಿಸಿರುವುದು ಪ್ರಸ್ತುತ ಕಾರ್ಯಕ್ರಮಕ್ಕೆ ತಳುಕು ಹಾಕಿಕೊಂಡಂತೆ ಆಯಿತು ಎಂದು ತಿಳಿಸಿದರು. ಬಹುಭಾಷ ಕವಿಘೋಷ್ಠಿ : ಆರಂಭದಲ್ಲಿ ಸಂಶೋಧನಾರ್ಥಿಗಳಾದ ಪವಿತ್ರ, ಶಬ್ರಿನಾ ಭಾನು, ಟಿ. ಅಕ್ಷತಾ, ಲೋಕೇಶ್ ಅವರು ಕನ್ನಡ ಭಾಷೆಯಲ್ಲಿ, ನಂತರ ಸುನಿಲ್ ಲಂಬಾಣಿ ಭಾಷೆಯ ಕವನ ವಾಚಿಸಿದರು. ಬಳಿಕ ನಂದಿನಿ, ಪ್ರಭಾಕರ, ರವೀಂದ್ರ, ಬೋರಯ್ಯ, ಪಾಲಯ್ಯ ತೆಲುಗು ಭಾಷೆ, ಖಾಜಾಸಾಬ್ ಉರ್ದು ಭಾಷೆ, ಶ್ವೇತಾ ಬಾಳಿ ಇಂಗ್ಲಿಷ್, ಇಸ್ಮಾಯಿಲ್ ಸಿದ್ದಿಕ್ ಹಿಂದಿ, ಮಂಜುನಾಥ ಮರಾಠಿ, ಡಾ. ರಾದಾಹಯಾತ್ ಉರ್ದು ಹಾಗೂ ಡಾ. ರಂಗನಾಥ ಅರನಕಟ್ಟೆ ಅವರು ತಮಿಳು ಭಾಷೆಯ ಕವನಗಳನ್ನು ವಾಚಿಸಿ ಜನಮನ ರಂಜಿಸಿದರು.
ಆರಂಭದಲ್ಲಿ ಮಂಜುನಾಥ್ ಕರಿಲಿಂಗಣ್ಣ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಡಾ. ಗೋವಿಂದ ಸ್ವಾಗತಿಸಿದರೆ,ಡಾ. ಸಂತೋಷ ನಿರೂಪಿಸಿ, ವಿನೋಧ ವಂದಿಸಿದರು.

























