ಭಾರತ ಸ್ವಾವಲಂಬನೆ ಸಾಧಿಸುತ್ತಿರುವುದು ಹೆಮ್ಮೆಯ ಸಂಗತಿ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.16:
ಭಾರತ ದೇಶ ಇಂದು ಯಾವುದೇ ದೇಶವನ್ನು ಅವಲಂಭಿಸದೆ ಸ್ವಾವಲಂಬನೆ ಸಾಧಿಸುತ್ತಿರುವುದು ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು.

ಅವರು ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ಆಯೋಜುಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೆ.ಆರ್.ಪೇಟೆ ತಾಲ್ಲೂಕು ಸ್ವಾತಂತ್ರ ಹೋರಾಟಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ತಾಲ್ಲೂಕಿನ ಅಕ್ಕಿಹೆಬ್ಬಾಳು, ಮಡುವಿನಕೋಡಿ, ಬಳ್ಳೆಕೆರೆ, ಸಿಂಧಘಟ್ಟ, ರಾಯಸಮುದ್ರ ಮುಂತಾದ ಹಲವಾರು ಗ್ರಾಮಗಳ ನೂರಾರು ಮುಖಂಡರುಗಳು ಸ್ವಾತಂತ್ರ್ಯ ಚಳುವಳಿಗಳಲ್ಲಿ ಭಾಗವಹಿಸಿ ದೇಶಪ್ರೇಮ ಮೆರೆದಿದ್ದಾರೆ. ಮಂಡ್ಯ ಜಿಲ್ಲೆಯ ಶಿವಪುರದಲ್ಲಿ ಸತ್ಯಾಗ್ರಹ ನಡೆಸಿದ ಕುರುಹು ನಮ್ಮ ಕಣ್ಣಮುಂದೆ ಇದೆ. ಭಾರತ ಸ್ವಾತಂತ್ರ್ಯ ನಂತರ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ವೈರಿ ರಾಷ್ಟ್ರಗಳಿಗೆ ತನ್ನ ತಂಟೆಗೆ ಬಂದರೆ ಬಿಡುವುದಿಲ್ಲ ಎಂಬ ಸಂದೇಶವನ್ನು ಇಂಡೋಪಾಕ್ ಯುದ್ದ, ಕಾರ್ಗಿಲ್‍ಯುದ್ದ ಹಾಗೂ ಪಹಲ್ಗಾಮ್ ಘಟನೆಗಳಲ್ಲಿ ಸಾಬೀತುಪಡಿಸಿದೆ.

ಜಗತ್ತಿನ ದೊಡ್ಡಣ್ಣ ಅಮೇರಿಕ ಅಧ್ಯಕ್ಷ ಟ್ರಂಪ್ ಬಾರತದ ಮೇಲೆ ಅಧಿಕ ಸುಂಕವಿಧಿಸಿದ್ದರೂ ಭಾರತ ಯಾವುದಕ್ಕೂ ಸೊಪ್ಪು ಹಾಕದೇ ಜಗತ್ತಿನ ಎಲ್ಲಾ ದೇಶಗಳೊಂದಿಗೆ ಉತ್ತಮ ಭಾಂದವ್ಯ ಹೊಂದುವ ಮೂಲಕ ನಿಮ್ಮ ಜೊತೆ ನಾವಿದ್ದು ನಿಮಗೆ ಸಹಕಾರ ನೀಡಲಿದ್ದೇವೆ ಎಂಬ ಸಂದೇಶ ನೀಡಿರುವುದು ನಾವೆಲ್ಲರೂ ಸಂತಸಪಡುವ ವಿಷಯವಾಗಿದೆ. ಭಾರತ ಸಂಪದ್ಭರಿತವಾದ ದೇಶವಾಗಿದ್ದು ಪ್ರಪಂಚದಲ್ಲಿಯೇ ಎಲ್ಲೂ ಸಿಗದ ಸಂಜೀವಿನಿ ಗಿಡಮೂಲಿಕೆಗಳು ಕಾಶ್ಮೀರದಲ್ಲಿ ಇರುವುದು ಹೆಮ್ಮೆಯ ವಿಷಯವಾಗಿದೆ. ಇಂಥಹ ನೆಲದಲ್ಲಿ ಹುಟ್ಟಿ ಭಾರತೀಯನಾಗಿರುವುದಕ್ಕೆ ನಮಗೆಲ್ಲರಿಗೂ ಹೆಮ್ಮೆ ಎನಿಸುತ್ತಿದೆ. ತಾಲ್ಲೂಕಿನ ಹಲವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಭಾರತ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದರು.

ತಹಶೀಲ್ದಾರ್ ಲೆ.ಕರ್ನಲ್.ಡಾ. ಎಸ್.ಯು ಅಶೋಕ್ ದ್ವಜಸಂದೇಶ ನೀಡಿ ಮಾತನಾಡಿ ಸಾವಿರಾರು ಜನರ ಹೋರಾಟ, ತ್ಯಾಗ, ಬಲಿದಾನದ ಪ್ರತೀಕವಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರ್ಯ ಪಡೆದ ನಾವು ದೇಶಕ್ಕಾಗಿ ಉತ್ತಮ ಕೆಲಸ ಮಾಡಬೇಕು. ದೇಶಕ್ಕೆ ಹೆಸರು ತರುವ ಕೆಲಸ ಮಾಡುವ ಮೂಲಕ ಸದೃಢ ಭಾರತ ದೇಶದ ನಿರ್ಮಾಣ ಮಾಡುವತ್ತ ನಮ್ಮ ಚಿತ್ತ ಇರಬೇಕು ಎಂದರು.

ಇದೇ ಸಂದರ್ಭದಲ್ಲಿ 2025-26 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ರಾಜ್ಯಕ್ಕೆ ಟಾಪರ್ ಸ್ಥಾನ ಪಡೆದ ಹಾಗೂ ಈ ಶೈಕ್ಷಣಿಕ ವರ್ಷದಲ್ಲಿ ಮೆಡಿಕಲ್ ಸೀಟು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮಕ್ಕಳಿಂದ ವಿವಿಧ ದೇಶಭಕ್ತಿ ಸಾರುವ ಮನರಂಜನಾ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷೆ ಪಂಕಜ, ಉಪಾದ್ಯಕ್ಷೆ ಸೌಭಾಗ್ಯ, ತಾಪಂ ಇ.ಓ ಸುಷ್ಮ, ಎಂಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಹೆಚ್.ಕೆ.ಅಶೋಕ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಪುರಸಬಾ ಸದಸ್ಯ ಶಾಮಿಯಾನತಿಮ್ಮೇಗೌಡ, ಸುಗುಣ, ಬೇಗಂ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಂಜುಳ, ಬಿಇಓ ತಿಮ್ಮೇಗೌಡ, ಡಾ.ಹೆಚ್.ಎಸ್.ದೇವರಾಜು, ಮೀನುಗಾರಿಕೆ ಸ.ನಿ. ಜಗದೀಶ್, ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಬಿಸಿಎಂ ವೆಂಕಟೇಶ್ ಟಿಹೆಚ್‍ಓ ಡಾ.ಅಜಿತ್, ನಯನಜ ಕ್ಷತ್ರಿಯ ಸಮಾಜದ ಅಧ್ಯಕ್ಷ ಶಿವಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ವಿವಿಧ ಶಾಲೆಗಳ ಶಾಲಾ ಮಕ್ಕಳು ಹಾಜರಿದ್ದರು.