ಭಾರತ- ಪಾಕ್ ನಡುವೆ ಯುದ್ಧ ನಡೆದರೆ ಹೆಚ್ಚು ಸುಂಕ

ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್/ನವದೆಹಲಿ,ಅ.೧೩- ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ಯುದ್ಧ ಮುಗಿದಿದೆ, ಆದರೆ ಭಾರತ- ಪಾಕಿಸ್ತಾನದ ನಡುವೆ ಯುದ್ಧದ ಭೀತಿ ಇದೆ.

ಒಂದು ವೇಳೆ ಎರಡೂ ದೇಶಗಳು ಯುದ್ದ ಮಾಡಲು ಮುಂದಾದರೆ ಅತಿ ಹೆಚ್ಚಿನ ಸುಂಕ ವಿಧಿಸಲಾಗುವುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಭಾರತ-ಪಾಕಿಸ್ತಾನ ಸೇರಿದಂತೆ ಜಗತ್ತಿನ ಯಾವುದೇ ದೇಶಗಳ ನಡುವೆ ಯುದ್ಧ ನಡೆದರೆ ಆ ದೇಶಗಳ ಮೇಲೆ ಶೇಕಡಾ ೫೦ ರಿಂದ ಶೇಕಡಾ ೨೦೦ರ ತನಕ ತೆರಿಗೆ ವಿಧಿಸಲಾಗುವುದು ಎಂದು ಗುಡುಗಿದ್ದಾರೆ.

ಇಸ್ರೇಲ್‌ಗೆ ತೆರಳುವ ಮಾರ್ಗದಲ್ಲಿ ಏರ್ ಫೋರ್ಸ್ ಒನ್‌ನಲ್ಲಿ ವರದಿಗಾರರೊಂದಿಗೆ ಅವರು ಭಾರತ ಮತ್ತು ಪಾಕಿಸ್ತಾನದ ನಡುವೆ, ಯುದ್ಧ ಮಾಡಲು ಬಯಸಿದರೆ ಮತ್ತು ನಿಮ್ಮ ಬಳಿ ಪರಮಾಣು ಶಸ್ತ್ರಾಸ್ತ್ರಗಳಿದ್ದರೆ. ನಿಮ್ಮಿಬ್ಬರ ಮೇಲೂ ಶೇ. ೧೦೦, ಶೇ. ೧೫೦ ಮತ್ತು ಶೇ. ೨೦೦ ರಷ್ಟು ದೊಡ್ಡ ಸುಂಕಗಳನ್ನು ವಿಧಿಸುತ್ತೇನೆ ಎಂದು ಗುಡುಗಿದ್ದಾರೆ.

ಯುದ್ಧ ಗಂಭೀರ ಪರಿಸ್ಥಿತಿಯನ್ನು ೨೪ ಗಂಟೆಗಳಲ್ಲಿ ಇತ್ಯರ್ಥ ಪಡಿಸಿಕೊಂಡರೆ ಯಾವುದೇ ಸುಂಕವನ್ನು ವಿಧಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಗಾಜಾ ಶಾಂತಿ ಯೋಜನೆ ಮತ್ತು ಅವರ ಮುಂಬರುವ ಇಸ್ರೇಲ್ ಭೇಟಿಯ ಬಗ್ಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಎಲ್ಲರಿಗೂ ಒಮ್ಮತ ಮತ್ತು ಸಮ್ಮತವಾಗುವ ಶಾಂತಿ ಒಪ್ಪಂದ ಜಾರಿ ಮಾಡಿದ್ದೇವೆ, ಇದು ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ಶಾಂತಿ ನೆಲೆಸಲು ಸಾಧ್ಯವಾಗಲಿದೆ ಎಂದಿದ್ದಾರೆ.

ಯಹೂದಿ ಅಥವಾ ಮುಸ್ಲಿಂ ಅಥವಾ ಅರಬ್ ದೇಶಗಳಿಂದ ಹಿಡಿದು ಕದನ ವಿರಾಮಕ್ಕೆ ಮತ್ತು ಯುದ್ಧ ನಿಂತಿರುವುದಕ್ಕೆ ವಿಶ್ವದ ಅನೇಕ ದೇಶಗಳು ಶಾಂತಿ ಬಯಸಿವೆ ಮತ್ತು ಅದರಲ್ಲಿ ಯಶಸ್ವಿಯಾಗುತ್ತಿವೆ ಎಂದು ತಿಳಿಸಿದ್ದಾರೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ’ಮುಗಿದಿದೆ’ ಮತ್ತು ಕದನ ವಿರಾಮ ಒಪ್ಪಂದ ಜಾರಿಯಾಗಬೇಕಾಗಿದೆ, ಈ ಹಿನ್ನೆಲೆಯಲ್ಲಿ ಅಂದುಕೊಂಡಿರುವ ನಿಯಮಗಳನ್ನು ಜಾರಿ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.