
(ನಮ್ಮ ಪ್ರತಿನಿಧಿಯಿಂದ)
ಬಳ್ಳಾರಿ, ಜ.02: ನಿನ್ನೆ ರಾತ್ರಿ ನಗರದಲ್ಲಿ ನಡೆದ ಪೈರಿಂಗ್ ನಲ್ಲಿ ಗುಂಡು ಹಾರಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಬಿಜೆಪಿ ಮುಖಂಡ, ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.
ನಗರದ ಜನಾರ್ಧನರೆಡ್ಡಿ ಅವರ ನಿವಾಸದಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಮಾತನಾಡುತ್ತಿದ್ದರು.
ಅವರಿಗೇ ಅವರೇ ಗುಂಡು ಹಾರಿಸಿ ನಮ್ಮಮೇಲೆ ನುಗ್ಗಲು ಬಂದಿದ್ದಾರೆ. ನಿಮ್ಮ ದೌರ್ಜನ್ಯ ಗೂಂಡಾಗಿರಿಗೆ ಹೆದರಲ್ಲ, ಹಾಲಿ ನ್ಯಾಯಾಧೀಶ ರಿಂದ, ಇಲ್ಲಾ ಸಿಬಿಐ ನಿಂದ ತನಿಖೆ ಆಗಲಿ ಎಂದರು.
26 ವರ್ಷದ ರಾಜಶೇಖರ ರೆಡ್ಡಿ ಕಾಂಗ್ರೆಸ್ ಯುವಕನ ಸಾವಿಗೆ ಪಕ್ಷದಿಂದ, ವಯಕ್ತಿಕವಾಗಿ ಶೋಕ ವ್ಯಕ್ತಪಡಿಸುವೆ. ಕ್ಷುಲಕ ಕಾರಣದಿಂದ ಈ ಘಟನೆ ನಡೆಯಿತು. ಜರ್ನಾರ್ಧನರೆಡ್ಡಿ ಅವರ ಮನೆಯ ರಸ್ತೆಗೆ ಅಡ್ಡಿಯಾಗಿ ಬ್ಯಾನರ್ ಕಟ್ಟಲು ಮುಂದಾಗಿದ್ದೇಕೆ, ಗಲಾಟೆ ಮಾಡಲೆಂದೆ ಪೂರ್ವ ನಿಯೋಜಿತವಾಗಿ ಅವರು ದಾಳಿ ನಡೆಸಿದರು. ಗುಂಡು ಹಾರಿಸಿದರು. ಪೊಲೀಸರು ಬಂದು ಚದುರಿಸಿದರು. ಪರಸ್ಪರ ಘೋಷಣೆ ಕೂಗಲಾಯ್ತು. ಪೊಲೀಸ್ ಫೈರಿಂಗ್ ಆಯ್ತು ಗಾಳಿಯಲ್ಲಿ, ಈ ವೇಳೆ ಸಿನಿಮಾದಂತೆ ಸತೀಶ್ ರೆಡ್ಡಿ ಗನ್ ಮ್ಯಾನ್ ಗಳು ಪೈರ್ ಮಾಡಿದರು. 0.76 ಬುಲೆಟ್ ದೊರೆತಿದೆ. ಇದರಿಂದ ಅವರಿಂದಲೇ ಮೇಲ್ನೋಟಕ್ಕೆ ಪೈರಿಂಗ್ ಆಗಿರುವುದು ಖಚಿತವಾಗುತ್ತೆ. ಕಲ್ಲುತೂರಾಟದಿಂದ ನಮ್ಮಕಡೆಯ ಅನೇಕರು ಗಾಯಗೊಂಡರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಕಳಿಸಿದ್ದಾರೆ. ದಾಖಲು ಮಾಡಿಕೊಳ್ಳುತ್ತೆ, ಬಿಹಾರದ ರೀತಿ ಆ ಸತೀಶ್ ರೆಡ್ಡಿ ಎಂಟು ಜನ ಗನ್ ಮ್ಯಾನ್ ಗಳಿಂದ ಓಡಾಡುತ್ತ ಪೈರಿಂಗ್ ಮಾಡಿದ್ದಾರೆಂದು ಆರೋಪಿಸಿದರು.
ಮೃತ ವ್ಯಕ್ತಿಯ ದೇಹದಲ್ಲಿ ದೊರೆತ ಬುಲೆಟ್ ಯಾವುದೆಂದು ತನಿಖೆಯಾಗಲಿ ಎಂದ ಅವರು ಪೆಟ್ರೋಲ್ ಬಾಂಬ್ ಎಸೆಯಲು ಬಂದಿದ್ದರು. ಶಾಸಕ ಭರತ್ ರೆಡ್ಡಿ ಮನೆ ಸುಡುತ್ತೇನೆಂದು ಹೇಳಿದ್ದಾರೆ. ಅದಕ್ಕಾಗಿ ಅವರು ಪೂರ್ವ ನಿಯೋಜಿತರಾಗಿ ಬಂದಿದ್ದರಂತೆ ಕಾಣುತ್ತಿದೆಂದರು.
ನಮ್ಮ ಆಕ್ಷೇಪಣೆ ಇಲ್ಲ:
ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ನಮ್ಮ ಅಭ್ಯಂತರ ಇಲ್ಲ. ಅದು ಆಗಬೇಕೆಂಬುದು ನಮ್ಮ ಆಶಯವಾಗಿದೆ. ವಾಲ್ಮೀಕಿಯನ್ನು, ಜಾತಿಯನ್ನು ನೀವು ಬಳಸಿಕೊಳ್ಳಬೇಡಿ, ನಾವು ಸಹ ಸಮಾರಂಭಕ್ಕೆ ಸಹಾಯ ಮಾಡುತ್ತೇವೆ ಎಂದರು. ಅವರು ಸಂಸ್ಕಾರ ಇಲ್ಲದಂತೆ ನಡೆದುಕೊಳ್ಳುವುದು ತರವಲ್ಲ. ಪ್ರಚೋದನೆ, ಶಕ್ತಿ ಪ್ರದರ್ಶನ ಬೇಡ. ನಮ್ಮಮನೆಗಳ ಕಡೆಗೆ ಬಂದು ಗಲಾಟೆ ಮಾಡಿದವರು ಯಾರು, ಯಾವುದೇ ತನಿಖೆ ಮಾಡಲಿ ಎಂದರು.
ನಾನು ತಪ್ಪು ಮಾಡಲ್ಲ, ಮಾಡಿಲ್ಲ. ನಮ್ಮನ್ನು ಪೊಲೀಸರು ರಕ್ಷಣೆ ಮಾಡಿದರು. ನಾನು ನಿರೀಕ್ಷಣಾ ಜಮೀನು ಪಡೆಯಲ್ಲ. ಜನಾರ್ಧನರೆಡ್ಡಿಗೆ ಸದಾ ತೊಂದರೆ ಮಾಡುವುದು ಭರತ್ ರೆಡ್ಡಿಯದ್ದಾಗಿದೆ.
ಪುತ್ಥಳಿ ಅನಾವರಣಕ್ಕೆ ಇಷ್ಟೆಲ್ಲ ಮಾಡಬೇಕೆ, ರಾಮುಲು ವಾಲ್ಮಿಕಿ ಸಮುದಾಯಕ್ಕೆ ಏನು ಮಾಡಿದೆಂದು ಜನರಿಗೆ ಗೊತ್ತಿದೆ. ಅವರಲ್ಲಿ ವಿನಂತಿ ಇಷ್ಟೇ ನೀವು ರಾಜಕೀಯವಾಗಿ ಬೆಳೆಯಬೇಕು. ನಿಮ್ಮಲ್ಲಿ ಸ್ಪೀಡ್ ಬೇಡ,ಸ್ಪೀಡ್ ಹೆಚ್ಚಿದರೆ ಆಕ್ಸಿಡೆಂಟ್ ಆಗುತ್ತೆ ಎಂದು ಎಚ್ಚರಿಸಿದರು. ಘಟನೆ ಬಗ್ಗೆ ಪಕ್ಷದ ರಾಜ್ಯ , ರಾಷ್ಟ್ರೀಯ ನಾಯಕರಿಗೆ ಮಾಹಿತಿ ನೀಡಿರುವೆ ಎಂದರು.
ನಮ್ಮ ಮನೆಗಳ ಬಳಿ ಬಂದು ಗಲಾಟೆ ಮಾಡಿದ್ದಾರೆ. ಈ ಬಗ್ಗೆ ಜನಾರ್ಧನರೆಡ್ಡಿ ಅವರು ಹತ್ಯಾ ಪ್ರಯತ್ನ, ಗೂಂಡಾಗಿರಿ ಬಗ್ಗೆ ಪ್ರಕರಣ ದಾಖಲು ಮಾಡಲಿದ್ದಾರೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಮಾಹಿತಿ ನೀಡಿರುವೆ.ಅವರು ಇಂದು ಸಂಜೆ 4 ಕ್ಕೆ ಬಳ್ಳಾರಿಗೆ ಬರಲಿದ್ದಾರೆಂದು ತಿಳಿಸಿದರು.
ಸತೀಶ್ ರೆಡ್ಡಿ ಜನಾರ್ಧನರೆಡ್ಡಿ ಬಗ್ಗೆ ಮಾತನಾಡಿ ದೊಡ್ಡವಮಾಗಿದ್ದಾನೆ. ಬೇರೆ ಏನು ಇಲ್ಲ. ಆತ ಏನೂ ಇಲ್ಲ. ಅಷ್ಟು ಜನ ಗನ್ ಮ್ಯಾನ್ ಇಟ್ಟುಕೊಳ್ಳಲು ಅವರ ಆದಾಯ ಏನು, ಅವರದು ಗುಂಡಾಗಿರಿಯಾಗಿದೆಂದು ರಾಮುಲು ಹೇಳಿದರು.
ಸತೀಶ್ ಗೆ ಏನೂ ಆಗಿಲ್ಲ ಅನುಕಂಪ ಗಿಟ್ಟಿಸಿಕೊಳ್ಳಲು ನಕಲಿಯಾಗಿ ಬ್ಯಾಂಡೇಜ್ ಹಾಕಿಕೊಂಡಿದ್ದಾರೆಂದರು. ಬ್ಯಾನರ್ ಗಳಿಂದ ಜನಮನ ಗೆಲ್ಲಲು ಆಗಲ್ಲ, ಕೆಲಸ ಮಾಡಿ ಜನಮನ ಗೆಲ್ಲಬೇಕು ಎಂದರು.
ಜನಾರ್ಧನರೆಡ್ಡಿ ಅಲ್ಲ ಯಾರೇ ಕಷ್ಟದಲ್ಲಿರಲಿ ಅವರ ಬೆನ್ನಿಗೆ ನಿಲ್ಲುವುದು ನನ್ನ ಪರಮ ಧ್ಯೇಯ ಎಂದರು.
ಸುದ್ದಿಗೋಷ್ಟಿಯಲ್ಲಿ, ಗಂಗಾವತಿ ಶಾಸಕ ಜನಾರ್ಧನರೆಡ್ಡಿ, ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು, ಮುಖಂಡರುಗಳಾದ, ಡಾ. ಎಸ್ಮ.ಜೆ.ವಿ.ಮಹಿಪಾಲ್, ಕೆ.ಎ.ರಾಮಲಿಂಗಪ್ಪ , ಗುತ್ತಿಗನೂರು ವಿರೂಪಾಕ್ಷಗೌಡ, ಪಾಲಣ್ಣ, ಎಸ್.ಗುರುಲಿಂಗನಗೌಡ, ಹೆಚ್.ಹನುಂಮತಪ್ಪ, ಕೆ.ಎಸ್.ದಿವಾಕರ್, ಗೋನಾಲಕ್ ಮುರಹರಗೌಡ, ಸಿದ್ದಾರೆಡ್ಡಿ, ಶ್ರೀನಿವಾಸ್ ಮೋತ್ಕರ್, ಎಸ್.ಮಲ್ಲನಗೌಡ, ಸುಧಾಕರ್ ದೇಸಾಯಿ ಮೊದಲಾದವರು ಇದ್ದರು.























