ಭಗವದ್ಗೀತೆಯ ಪಾರಾಯಣ ಜೀವನದ ಉಸಿರಾಗಲಿ

ಸಂಜೆವಾಣಿ ನ್ಯೂಸ್
ಮೈಸೂರು.ಡಿ.02:-
ಜಗದ್ಗುರು ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿರುವ ಪ್ರತಿಯೊಂದು ಮಾತು ಹಾಗೂ ಅಕ್ಷರಗಳನ್ನು ಅರ್ಥಮಾಡಿಕೊಂಡು ನಮ್ಮ ಜೀವನ ಮುನ್ನಡೆಸಬೇಕು ಎಂದು ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಕ್ತರಿಗೆ ಕರೆ ನೀಡಿದರು.


ಅವಧೂತ ದತ್ತ ಪೀಠದಲ್ಲಿ ಗೀತಾ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಸಂಪೂರ್ಣ ಭಗವದ್ಗೀತೆ ಪಾರಾಯಣ ಮತ್ತು ಚಿನ್ನದ ಪದಕ ಪ್ರದಾನ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು.


ಭಾರತೀಯ ಸಂಪ್ರದಾಯದ ಬಗ್ಗೆ ಮಾತನಾಡಿದ ಅವರು, ನಮ್ಮ ಪೂರ್ವಜರು ಭಗವದ್ಗೀತೆಯನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದರು. ಹಿಂದೆ ಮಹಾತ್ಮರು ಮತ್ತು ಶ್ರೀಮಂತರು ಲಕ್ಷಾಂತರ ಚಿಕ್ಕ ಭಗವದ್ಗೀತೆ ಪುಸ್ತಕಗಳನ್ನು ಮುದ್ರಿಸಿ ಜನರಿಗೆ ಉಚಿತವಾಗಿ ಹಂಚುತ್ತಿದ್ದರು. ಆ ಸಂಪ್ರದಾಯ ಮತ್ತೆ ಮರುಕಳಿಸಬೇಕು ಎಂದು ಆಶಿಸಿದರು.


ದತ್ತ ಪೀಠದಲ್ಲಿ ಮುದ್ರಿತವಾದ ಪುಸ್ತಕಗಳನ್ನು ಭಕ್ತರು ಖರೀದಿಸಿ, ಅದನ್ನು ಕೊಂಡುಕೊಳ್ಳಲು ಶಕ್ತಿಯಿಲ್ಲದವರಿಗೆ ಉಚಿತವಾಗಿ ಹಂಚುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಕಂಠಪಾಠದ ಮಹತ್ವ: ಪುಸ್ತಕಗಳು ಯಾವಾಗಲೂ ನಮ್ಮ ಕೈಯಲ್ಲಿ ಇರುವುದಿಲ್ಲ. ಆದರೆ, ಭಗವದ್ಗೀತೆಯನ್ನು ಕಂಠಪಾಠ ಮಾಡಿದರೆ ಶ್ಲೋಕಗಳು 24 ಗಂಟೆಯೂ ನಮ್ಮ ಜೊತೆಗೇ ಇರುತ್ತವೆ. ಪ್ರಯಾಣದ ಸಮಯದಲ್ಲಿ ಅಥವಾ ಊಟ ಮಾಡುವಾಗಲೂ ಮನಸ್ಸಿನಲ್ಲಿಯೇ ಪಾರಾಯಣ ಮಾಡಬಹುದು ಎಂದು ಸ್ವಾಮೀಜಿ ಕಂಠಪಾಠದ ಮಹತ್ವ ವಿವರಿಸಿದರು.


ಹೈದರಾಬಾದ್‍ನಲ್ಲಿ ಬೃಹತ್ ಪಾರಾಯಣ: ಇದೇ ವೇಳೆ ಮುಂಬರುವ ಬೃಹತ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಸ್ವಾಮೀಜಿ, 2026ರ ಮಾ.22ರಂದು ಹೈದರಾಬಾದ್‍ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸಂಪೂರ್ಣ ಭಗವದ್ಗೀತೆ ಪಾರಾಯಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೆಹಲಿಯ ಭಾರತ ಮಂಟಪದಲ್ಲಿಯೂ ಕಾರ್ಯಕ್ರಮ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀಗಳು ಆಹ್ವಾನಿದರು.


ಗೀತಾ ಪಾರಾಯಣ ಸಂಕಲ್ಪ: ಪ್ರತಿಯೊಬ್ಬರೂ ಪ್ರತಿನಿತ್ಯ ಭಗವದ್ಗೀತೆಯ ಕನಿಷ್ಠ ಒಂದು ಅಧ್ಯಾಯವನ್ನಾದರೂ ಪಾರಾಯಣ ಮಾಡಬೇಕು ಎಂದು ಭಕ್ತರಿಂದ ಇದೇ ವೇಳೆ ಸಂಕಲ್ಪ ಮಾಡಿಸಿದರು. ಇಂದು ಕೇವಲ ತೆಲುಗು ರಾಜ್ಯಗಳಲ್ಲದೆ, ಕರ್ನಾಟಕ, ತಮಿಳುನಾಡು ಸೇರಿದಂತೆ ದೇಶ ವಿದೇಶಗಳಲ್ಲಿ ಗೀತಾ ಪಾರಾಯಣದ ಅರಿವು ಮೂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.