ಭಕ್ತರಿಗೆ ಮೂಲ ಸೌಕರ್ಯ ಒದಗಿಸಲು ಒತ್ತಾಯ

ಸಂಜೆವಾಣಿ ನ್ಯೂಸ್
ಮೈಸೂರು: ಜೂ.02:-
ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ಮತ್ತಿತರ ಮೂಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.


ಜಿಲ್ಲಾಡಳಿತ ಸುದ್ದಿಗೋಷ್ಠಿಯಲ್ಲಿ ಮೆಟ್ಟಿಲು ಹತ್ತಿ ಬರುವ ಭಕ್ತಾದಿಗಳಿಗೆ ಡ್ರೈ ಫ್ರೂಟ್ಸ್, ಬಾದಾಮಿ ಹಾಲು ನೀಡಿ ಅರ್ಧ ಗಂಟೆ ಒಳಗಡೆ ದರ್ಶನ ಮಾಡಿಸುತ್ತೇವೆ ಎಂದು ಹೇಳಿತ್ತು. ಆದರೆ ಇಲ್ಲಿ ಯಾವುದೂ ಇಲ್ಲ. ಮೆಟ್ಟಿಲು ಹತ್ತಿ ಬಂದವರನ್ನು ಕುರಿ ದೊಂಬಿಗೆ ತುಂಬುವ ಹಾಗೆ ತುಂಬುತ್ತಿದ್ದು ಅತ್ಯಂತ ಖಂಡನೀಯ. ಯಾವ ವ್ಯವಸ್ಥೆಯನ್ನೂ ಸರಿಯಾಗಿ ಮಾಡಿಲ್ಲ. 5-6 ಗಂಟೆಗಳ ಕಾಲ ಕ್ಯೂ ನಲ್ಲಿ ನಿಂತಿದ್ದರೂ, ಕುಡಿಯಲು ನೀರಿಲ್ಲ. ಮೆಟ್ಟಿಲು ಹತ್ತಿ ಬರುವರಿಗೆ ಶೌಚಾಲಯಗಳಂತೂ ಇಲ್ಲವೇ ಇಲ್ಲ ಎಂದು ಕಿಡಿ ಕಾರಿದರು.


ಪ್ರತಿವರ್ಷ ಇರುತ್ತಿದ್ದ ದಾಸೋಹ, ಊಟದ ವ್ಯವಸ್ಥೆ ಸಹ ಮೊದಲಿದ್ದ ಸ್ಥಳದಲ್ಲಿ ಇಲ್ಲ. ಹಿಂದಿನ ವರ್ಷಗಳಲ್ಲಿ ಭಕ್ತಾದಿಗಳು ಬಹಳ ಅಚ್ಚುಕಟ್ಟಾಗಿ ಬೆಳಗ್ಗೆಯಿಂದ ರಾತ್ರಿಯವರೆಗೆ ಊಟದ ವ್ಯವಸ್ಥೆ ಮಾಡುತ್ತಿದ್ದರು. ಈ ಬಾರಿ ಬೆಟ್ಟದ ಪ್ರಾಧಿಕಾರ ದುಡ್ಡು ಹೊಡೆಯಲು ತಾನೇ ಮಾಡಿದೆ. ಜತೆಗೆ ಡ್ರೈ ಫ್ರೂಟ್ಸ್ ಹೆಸರಿನಲ್ಲೂ ಹಣ ಲೂಟಿ ಮಾಡುತ್ತಿದೆ. ಭಕ್ತಾದಿಗಳೇ 2000 ರೂ. ಇದ್ದರೆ ಬೆಟ್ಟಕ್ಕೆ ಬನ್ನಿ. ಇಲ್ಲವಾದರೆ ಮನೆಯಿಂದಲೇ ತಾಯಿಗೆ ಕೈ ಮುಗಿದು ಬಿಡಿ, ಎನ್ನುವಂತಿತ್ತು ಜಿಲ್ಲಾಡಳಿತದ ವ್ಯವಸ್ಥೆ ಎಂದು ಟೀಕಿಸಿದರು.


ಉಳ್ಳ ಭಕ್ತಾದಿಗಳ, ಭಕ್ತ ಪರಾಕಾಷ್ಠೆಯ ಹೆಸರಲ್ಲಿ ವಿಶೇಷ ದರ್ಶನದಿಂದ ಸರ್ಕಾರ 2000 ರೂ ಲೂಟಿ ಮಾಡುತ್ತಿದೆ. ಈ ವಿಶೇಷ ದರ್ಶನದಿಂದಾಗಿ ಸರ್ಕಾರ ಉಳಿದ ಭಕ್ತಾದಿಗಳನ್ನು ಕಡೆಗಣಿಸುತ್ತಿದೆ. ಕೇವಲ ಆಷಾಢÀ ಶುಕ್ರವಾರಕ್ಕೆ ಮಾತ್ರ ಸೀಮಿತವಾಗಿದ್ದ, ಖಾಸಗಿ ವಾಹನಗಳ ನಿರ್ಬಂಧ 2000 ರೂ. ವಿಶೇಷ ದರ್ಶನದಿಂದಾಗಿ ಶನಿವಾರ, ಭಾನುವಾರಗಳಿಗೂ ವಿಸ್ತರಿಸಿದೆ. ಸ್ಥಳೀಯ ಅಂಗಡಿ ವ್ಯಾಪಾರಿಗಳನ್ನು ತನ್ನ ಸ್ವಾರ್ಥಕ್ಕಾಗಿ 3 ದಿನ ಮುಚ್ಚಿಸಿ, ಅವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವುದು ಅತ್ಯಂತ ನೋವಿನ ಸಂಗತಿ ಕಿಡಿ ಕಾರಿದರು.


ತಾಯಿ ಚಾಮುಂಡೇಶ್ವರಿ ಮಹಾರಾಜರ ಹಾಗೂ ಭಕ್ತಾದಿಗಳ ಸ್ವತ್ತು. ಸರ್ಕಾರ ಈ ರೀತಿ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಅನಾನುಕೂಲ ಮಾಡುವುದು ಸರಿಯಲ್ಲ. ಕೂಡಲೇ ಚಾಮುಂಡೇಶ್ವರಿ ಬೆಟ್ಟ ಪ್ರಾಧಿಕಾರ ಹಾಗೂ ಸರ್ಕಾರ ಉಚಿತ ದರ್ಶನಕ್ಕೆ ಹಾಗೂ ಮೆಟ್ಟಿಲು ಹತ್ತಿ ಬರುವ ಭಕ್ತಾದಿಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಹಾಗೂ ಬೇಗ ದರ್ಶನ ಮಾಡಿಸುವ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕೆಂದು ಒತ್ತಾಯಿಸಿದರು.


ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಗೋಲ್ಡನ್ ಸುರೇಶ್, ಪ್ರಭುಶಂಕರ್, ಪ್ರಜೀಶ್, ಸಿಂದುವಳ್ಳಿ ಶಿವಕುಮಾರ್, ಮಧುವನ ಚಂದ್ರು, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ನೇಹಾ, ಭಾಗ್ಯಮ್ಮ, ಪದ್ಮ, ಕೃಷ್ಣೇಗೌಡ, ಗಿರೀಶ್, ನಾಗರಾಜು, ಹನುಮಂತಯ್ಯ, ತಾಯೂರು ಗಣೇಶ್, ಕುಮಾರ್ ಗೌಡ, ನಾರಾಯಣ ಗೌಡ, ಆನಂದ್ ಗೌಡ, ಬಸವರಾಜು, ಗೀತಾ ಗೌಡ, ಪ್ರಭಾಕರ್, ಮೂರ್ತಿ ಲಿಂಗಯ್ಯ, ರಘು ಅರಸ್, ರಘು ಆಚಾರ್, ನಿತ್ಯಾನಂದ, ದರ್ಶನ್ ಗೌಡ, ಸ್ವಾಮಿ ಗೌಡ, ಗಣೇಶ್ ಪ್ರಸಾದ್, ಪರಿಸರ ಚಂದ್ರು, ಸೇರಿದಂತೆ ಹಲವರು ಭಾಗವಹಿಸಿದ್ದರು.