
ಸುಳ್ಯ:ಆಡಂಬರ ಬದುಕಿಗೆ, ಚಿಂತನೆಗೆ ದೇವರು ಒಲಿಯುವುದಿಲ್ಲ. ದೇವರಿಗೆ ಪರಿಶುದ್ದವಾದ ಮನಸ್ಸಿನಿಂದ ಬ್ರಹ್ಮಕಲಶಗಳು ನಡೆದರೆ ಮಾನಸಿಕ, ಶಾರೀರಿಕ, ಭೌತಿಕ ಗುಣಮಟ್ಟ ಪರಿವರ್ತನೆ ಆಗುತ್ತದೆ ಎಂದು ಮಂಗಳೂರು, ಕಾವೂರು ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ| ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ನಿಡ್ವಾಳ ಶ್ರೀ ಮಹಾವಿಷ್ಣು ದೇವಳ ದೇವರ ಪುನರ್ ನಿರ್ಮಾಣ ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶಿವರ್ಚನ ನೀಡಿದರು. ಮಾನವನಿಗೆ ವಿಶ್ವಾಸ, ನಂಬಿಕೆ ಮುಖ್ಯ. ಪರಿಶುದ್ದವಾದ ಮನಸ್ಸಿನಿಂದ ದೇವರನ್ನು ಭಜಿಸಿದಾಗ ದೇವರು ಒಲಿಯುತ್ತಾನೆ ವಿನಹ ಆಡಂಬರಕ್ಕೆ ದೇವರು ಒಲಿಯುವುದಿಲ್ಲ ಎಂದರು.
ದೇವಳದ ಆಡಳಿತ ಟ್ರಸ್ಟ್ ಅಧ್ಯಕ್ಷ ಚಂದ್ರಪ್ರಕಾಶ್ ಕಂಬಳ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನೇಮಿರಾಜ ಪಲ್ಲೋಡಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕುಸುಮಾಧರ ಕರಿಮಜಲು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಅಶೋಕ್ ಮೇಲ್ಪಾಡಿ, ಪ್ರಧಾನ ಸಂಚಾಲಕ ರಾಮಕೃಷ್ಣ ಸಾಯಿಕೃಪಾ ಪುರಿಯಮನೆ, ದೇವಳದ ಆಡಳಿತ ಟ್ರಸ್ಟ್ ಕಾರ್ಯದರ್ಶಿ ಗುರುಪ್ರಸಾದ್ ತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಸೋಪಾನಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ, ಇಂದ್ರಾದಿ ದಿಕ್ವಾಲ ಪ್ರತಿಷ್ಠೆ,ಪರಿವಾರ ಪ್ರತಿಷ್ಠೆ, ಮಹಾಬಲಿ ಪೀಠ ಪ್ರತಿಷ್ಠೆ ನಡೆಯಿತು. ಬಾಳುಗೋಡು ಶ್ರೀದೇವಿ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ನಡೆಯಿತು.

























