Home ಜಿಲ್ಲೆ ಮಂಗಳೂರು ಬೆಳ್ತಂಗಡಿ: ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ; ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

ಬೆಳ್ತಂಗಡಿ: ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ; ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನಿಗೆ ತೀವ್ರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಬೆಳ್ತಂಗಡಿಯ ಗುರುವಾಯನಕೆರೆ ಬಳಿಯ ಅಲಾದಿಕೊಟ್ಟಿಗೆಯಲ್ಲಿ ಸೋಮವಾರ (ಜೂನ್ ೧) ಬೆಳಿಗ್ಗೆ ನಡೆದಿದೆ. ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ ಯತೀಶ (೩೩) ಕೊಲೆಯಾದ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸೋಮವಾರ ಬೆಳಿಗ್ಗೆ ಗುರುವಾಯನಕೆರೆಯ ಅಲಾದಿಕೊಟ್ಟಿಗೆ ಎಂಬಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹರಿಬಿಟ್ಟಿದ್ದರು. ಮೃತರ ಸಹೋದರ ನಿತಿನ್ (೩೪) ಅವರಿಗೆ ವಾಟ್ಸಾಪ್ ಮೂಲಕ ಈ ಭಾವಚಿತ್ರ ತಲುಪಿದಾಗ, ಅದು ತಮ್ಮದೇ ಸಹೋದರ ಯತೀಶ ಎಂಬುದು ದೃಢಪಟ್ಟಿದೆ. ತಕ್ಷಣವೇ ಅವರು ಸ್ಥಳಕ್ಕೆ ಧಾವಿಸಿದ್ದಾರೆ.
ನಿತಿನ್ ಅವರು ಘಟನಾ ಸ್ಥಳಕ್ಕೆ ಬಂದು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಬೆಳಿಗ್ಗಿನ ಜಾವ ಮೂವರು ವ್ಯಕ್ತಿಗಳು ಯತೀಶನಿಗೆ ತೀವ್ರವಾಗಿ ಹಲ್ಲೆ ನಡೆಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಆರೋಪಿಗಳ ಭೀಕರ ಹಲ್ಲೆಯಿಂದಾಗಿಯೇ ಯತೀಶ ಸ್ಥಳದಲ್ಲೇ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮೃತರ ಸಹೋದರ ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಬೆಳ್ತಂಗಡಿ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಬೆಳ್ತಂಗಡಿಯ ಮಿತ್ತಬಾಗಿಲು ನಿವಾಸಿ ಯಶೋಧರ (೩೫), ಕಡಬದ ಚಾರ್ವಾಕ ನಿವಾಸಿ ಮೋಹನ್ (೩೦), ಬೆಳ್ತಂಗಡಿಯ ಪದಂಗಡಿ ನಿವಾಸಿ ಇಬ್ರಾಹಿಂ (೫೪) ಎಂದು ಗುರುತಿಸಲಾಗಿದೆ.