Home ಜಿಲ್ಲೆ ಮಂಗಳೂರು ಬೆಳ್ತಂಗಡಿ: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ದಸ್ತಗಿರಿ

ಬೆಳ್ತಂಗಡಿ: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ದಸ್ತಗಿರಿ

ಬೆಳ್ತಂಗಡಿ-ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬೆಳ್ತಂಗಡಿ ಠಾಣಾ ಪೊಲೀಸರು ಆ.೨೯ರಂದು ದಸ್ತಗಿರಿ ಮಾಡಿದ್ದಾರೆ.
ಕೇರಳ ಕಣ್ಣೂರು ನಿವಾಸಿ ಡೆನ್ನಿ ಜೋಸೆಫ್ ಅಲಿಯಾಸ್ ಆಂಟೋನಿ ಬಂಧಿತ ಆರೋಪಿ.
ಆರೋಪಿಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ:೧೭೨/೨೦೧೪, ಕಲಂ: ೩೫೪(ಃ), ೩೨೩, ೩೨೪, ೫೦೪, ೫೦೬ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣ ಸಂಬಂಧ ಆರೋಪಿಯು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಆರೋಪಿಯನ್ನು ಬೆಳ್ತಂಗಡಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಪಿಸಿ ಮುನಿಯ ನಾಯ್ಕ, ಪಿಸಿ ಮನು ನಾಯ್ಕ ಅವರು ಆ. ೨೯ರಂದು ಕೇರಳದ ಕಣ್ಣೂರಿನಲ್ಲಿ ದಸ್ತಗಿರಿ ಮಾಡಿದ್ದಾರೆ. ಪೊಲೀಸರು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಡಾ. ಕೆ. ಕಸ್ತೂರಿ ರಂಗನ್ ವರದಿಯಲ್ಲಿರುವ ಸಾಧಕ-ಬಾಧಕಗಳ ಪರಿಶೀಲನೆಗೆ ಕ್ರಮ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ
ಉಡುಪಿ-ಡಾ. ಕೆ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ಆಧಾರದ ಮೇಲೆ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿರುವ ಕರಡು ಅಧಿಸೂಚನೆ ವರದಿಯ ಅನ್ವಯ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದರು.
ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ (ಕಸ್ತೂರಿ ರಂಗನ್ ವರದಿ ಆಧಾರಿತ)ಕ್ಕೆ ಸಂಬಂಧಿಸಿದಂತೆ ನಡೆದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸರ್ಕಾರದ ಅರಣ್ಯ ಕಾಯಿದೆಗಳು ಹಾಗೂ ಅರಣ್ಯ ಇಲಾಖೆಯ ನೀತಿ ನಿಯಮಗಳಿಂದ ನಿರಂತರ ತೊಂದರೆಗೊಳಗಾಗುತ್ತಿರುವ ಕಾಡಂಚಿನ ಭಾಗದ ಜನರಿಗೆ, ಇದೀಗ ಕಸ್ತೂರಿ ರಂಗನ್ ವರದಿ ಜಾರಿಗೆ ಮುಂದಾಗಿರುವುದು ಜೀವನ ಹಾಗೂ ಜೀವನೋಪಾಯಕ್ಕೆ ತೊಂದರೆ ಉಂಟುಮಾಡಬಹುದು ಎಂಬ ಆತಂಕವಿದೆ. ಅಲ್ಲದೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಕುತ್ತು ಉಂಟಾಗುವ ಸಾಧ್ಯತೆ ಇದೆ ಎಂಬ ಗೊಂದಲಗಳೂ ಇವೆ. ಆದರೆ, ಡಾ. ಕೆ. ಕಸ್ತೂರಿ ರಂಗನ್ ಕರಡು ಪ್ರತಿಯಲ್ಲಿ ಕೋರೆ, ಕೈಗಾರಿಕೆ, ಬಹುಮಹಡಿ ಕಟ್ಟಡಗಳು, ಟೌನ್ಶಿಪ್, ಥರ್ಮಲ್ ಪವರ್ ಪ್ಲಾಂಟ್ ಹಾಗೂ ಏರಿಯಾ ಡೆವಲಪ್ಮೆಂಟ್ ಪ್ರಾಜೆಕ್ಟ್ಗಳಿಗೆ ನಿರ್ಬಂಧವಿರುವುದಾಗಿ ತಿಳಿಸಿದ್ದು, ಪೂರ್ವಾಪರಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ, ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಈಗಾಗಲೇ ೭ ಬಾರಿ ಅಧಿಸೂಚನೆಯನ್ನು ಹೊರಡಿಸಿದೆ. ಇದು ಕಾಡಿನಲ್ಲಿ ವಾಸಿಸುವ ಮಲೆಕುಡಿಯ, ಕೊರಗ ಸೇರಿದಂತೆ ಮತ್ತಿತರ ಬುಡಕಟ್ಟು ಜನಾಂಗದ ಅನೇಕ ಕುಟುಂಬಗಳನ್ನು ಆತಂಕಕ್ಕೆ ಈಡು ಮಾಡಿದೆ. ಅನೇಕ ವರ್ಷಗಳಿಂದ ಪ್ರಕೃತಿಯೊಂದಿಗೆ ಸಮತೋಲಿತ ಜೀವನಶೈಲಿ ಅಳವಡಿಸಿಕೊಂಡು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಗೌರವಿಸುತ್ತಲೇ ಬದುಕುತ್ತಿದ್ದಾರೆ. ಈ ಅನೋನ್ಯ ಭಾವ ಇಂದಿಗೂ ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುತ್ತಿದೆ. ಪರಿಸರ ಸಂರಕ್ಷಣೆಯೂ ನಮ್ಮ ಆದ್ಯತೆಯಾಗಬೇಕು, ಈ ಬಗ್ಗೆ ಗಮನಹರಿಸಲಾಗುವುದು ಎಂದರು.
ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಕಾರ್ಕಳದ ೧೩ ಹಾಗೂ ಕುಂದಾಪುರದ ೨೨ ಸೇರಿದಂತೆ ಒಟ್ಟು ೩೫ ಹಳ್ಳಿಗಳು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಒಳಪಡಲಿವೆ. ಪರಿಸರ ಸೂಕ್ಷ್ಮ ಪ್ರದೇಶದ ಮಧ್ಯಭಾಗದಲ್ಲಿಯೂ ವಸತಿ ಪ್ರದೇಶವಿರುವುದರಿಂದ ಇದನ್ನು ಕೂಲಂಕುಷವಾಗಿ ಪರಿಶೀಲಿಸಬೇಕಿದೆ ಎಂದರು.
ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜನಾಥ ಪೂಜಾರಿ ಮಾತನಾಡಿ, “ಸರ್ಕಾರಗಳು ಜಾರಿಗೆ ತರುವ ನೀತಿ ನಿಯಮಗಳು ಹಾಗೂ ಕಾನೂನುಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿರುತ್ತದೆ. ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿಯಿಂದ ಕೃಷಿ, ಪರಿಸರ ಹಾಗೂ ಸಾರ್ವಜನಿಕರ ದೈನಂದಿನ ಬದುಕಿನ ಮೇಲೆ ಆಗಬಹುದಾದ ಪರಿಣಾಮಗಳ ಕುರಿತು ಸಮಗ್ರವಾಗಿ ವಿಶ್ಲೇಷಿಸುವ ಅಗತ್ಯವಿದೆ” ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, “ಯಾವುದೇ ಜನಪರ ಕಾಯಿದೆಗಳು ಜಾರಿಗೆ ಬಂದಾಗ ಅದು ಜನರ ಒಳಿತಿಗೆ ಅನುಗುಣವಾಗಿರಬೇಕು. ಸೂಕ್ಷ್ಮತೆಯನ್ನು ಅರಿತು ಪರಿಸರವನ್ನು ಕಾಪಾಡಿದ್ದಲ್ಲಿ ಮಾತ್ರ ಮನುಕುಲ ಉಳಿಯಲು ಸಾಧ್ಯ. ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸರ್ವೇ ನಂಬರ್ಗಳನ್ನು ಅಳವಡಿಸಿದಲ್ಲಿ ಪರಿಸರ ರಕ್ಷಣೆ ಮಾಡಬಹುದು. ಎಲ್ಲಾ ಸೂಕ್ಷ್ಮತೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಜನಾಂಗ ಬದುಕಲು ಅನುಕೂಲ ಮಾಡಿಕೊಡಬೇಕು” ಎಂದರು.
ಶಾಸಕ ಸುನಿಲ್ ಕುಮಾರ್ ಮಾತನಾಡಿ, “ಡಾ. ಕೆ. ಕಸ್ತೂರಿ ರಂಗನ್ ಕರಡು ಅಧಿಸೂಚನೆಯನ್ನು ನಾವುಗಳು ವಿರೋಧಿಸುತ್ತೇವೆ. ಪ್ರತಿರೋಧವನ್ನು ಸರ್ಕಾರದ ಗಮನಕ್ಕೆ ತರಬೇಕು. ಪರಿಸರ ಸೂಕ್ಷ್ಮ ವಲಯವು ವಸತಿ ಪ್ರದೇಶದಿಂದ ಹೊರಗಿರಬೇಕು. ಜಿಲ್ಲೆಯ ೩೫ ಗ್ರಾಮಗಳ ಜನರ ಬದುಕಿಗೆ ತೊಂದರೆಯಾಗದ ರೀತಿಯಲ್ಲಿ ಸರಿಯಾದ ಭೌತಿಕ ಸರ್ವೇ ಮಾಡಿ, ವರದಿಯನ್ನು ಕಳುಹಿಸಬೇಕು” ಎಂದು ತಿಳಿಸಿದರು.
ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, “ಸರ್ಕಾರಗಳು ಜಾರಿಗೆ ತರುವ ಕೆಲವು ಕಾನೂನುಗಳು ಜನಸಾಮಾನ್ಯರ ಮೇಲೆ ದುಷ್ಪರಿಣಾಮ ಬೀರಬಹುದು. ಇವುಗಳನ್ನು ಜಾರಿಗೆ ತರುವ ಮುನ್ನ ಜನರ ಆಕ್ಷೇಪಣೆಗಳನ್ನು ಆಲಿಸಿ, ಪರಾಮರ್ಶಿಸಿ ಜಾರಿಗೆ ತರಬೇಕು. ಇಕೋ-ಸೆನ್ಸಿಟಿವ್ ಝೋನ್ನ ವ್ಯಾಪ್ತಿಯ ಪ್ರದೇಶವು ಯಾವ-ಯಾವ ಗ್ರಾಮಗಳಲ್ಲಿ, ಯಾವ-ಯಾವ ಸರ್ವೇ ನಂಬರ್ ಒಳಗೊಂಡಿದೆ ಎಂಬುದರ ಬಗ್ಗೆ ನಿಖರ ಮಾಹಿತಿಯನ್ನು ಜನರಿಗೆ ತಿಳಿಸಬೇಕು. ಈ ನಿಟ್ಟಿನಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಯು ಜಂಟಿ ಸರ್ವೇ ಮಾಡಿ ಗಡಿಯನ್ನು ಗುರುತಿಸಬೇಕಿದೆ. ಪ್ರತೀ ಗ್ರಾಮ ಮಟ್ಟದಲ್ಲಿ ಈ ಕರಡು ವರದಿಯ ಬಗ್ಗೆ ಚರ್ಚಿಸಿ ವರದಿ ನೀಡುವುದು ಒಳಿತು” ಎಂದರು.
ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಮಾತನಾಡಿ, “ಯಾವುದೇ ವರದಿಯನ್ನು ಜಾರಿಗೆ ತರುವ ಮುನ್ನ ಜನರಿಗೆ ಆಗುವ ತೊಂದರೆಗಳು, ಅನುಕೂಲಗಳು ಹಾಗೂ ಸಿಗುವ ಸೌಲಭ್ಯಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಬೇಕು. ಕಸ್ತೂರಿ ರಂಗನ್ ವರದಿ ಜಾರಿಯಿಂದ ಕಾಡಂಚಿನ ಜನರಿಗೆ ಎದುರಾಗುವ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅಥವಾ ವರದಿ ಜಾರಿ ಮಾಡಲು ಸೂಚಿಸಿರುವ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತರಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿರುತ್ತದೆ. ಈ ಕಾರ್ಯವನ್ನು ತಪ್ಪದೇ ಮಾಡಬೇಕು” ಎಂದರು.
ಸಭೆಯಲ್ಲಿ ಡಿ.ಎಫ್.ಓ ರುಥ್ರೇನ್ ಪಿ., ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎಎಸ್.ಪಿ ಸುಧಾಕರ್ ನಾಯಕ್, ಸಹಾಯಕ ಕಮಿಷನರ್ ರಶ್ಮಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.